ಹೊಸದಿಲ್ಲಿ/ಬೆಂಗಳೂರು: ಬೆಂಗಳೂರಿನ ಆಯ್ದ ಸ್ಥಳಗಳಲ್ಲಿ ಎಂಟು ವರ್ಷಗಳಿಂದ ಸ್ವಚ್ಛತಾ ಅಭಿಯಾನ ಮತ್ತು ಅರಿವು ಮೂಡಿಸುವ ಕೈಂಕರ್ಯ ದಲ್ಲಿ ತೊಡಗಿರುವ ಯೂತ್ ಫಾರ್ ಪರಿವರ್ತನ್ ಸಂಸ್ಥೆಯ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರವಿವಾರ 93ನೇ ಆವೃತ್ತಿಯ “ಮನ್ ಕೀ ಬಾತ್’ನಲ್ಲಿ ಮಾತನಾಡಿದ ಅವರು, ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶದ ಹಲವು ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನಗಳಲ್ಲಿ ಹಲವು ಸಂಘಟನೆಗಳು ಭಾಗವಹಿಸಿ ಯಶಸ್ವಿಗೊಳಿಸಿವೆ.
ಈ ಪೈಕಿ ಬೆಂಗಳೂರಿನ ಯೂತ್ ಫಾರ್ ಪರಿವರ್ತನ್ ಸಂಸ್ಥೆಯೂ ಒಂದು. ಎಂಟು ವರ್ಷಗಳಿಂದ ಈ ತಂಡ ಸ್ವತ್ಛತೆ ಮತ್ತು ಇತರ ಸಾಮಾಜಿಕ ಅರಿವು ಮೂಡಿಸುವ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ದೂರುವುದನ್ನು ನಿಲ್ಲಿಸಿ ಕೆಲಸ ಮಾಡುವುದನ್ನು ಆರಂಭಿಸಿ’ ಎಂಬ ಸ್ಪಷ್ಟ ಧ್ಯೇಯದೊಂದಿಗೆ ಅದು ಕೆಲಸ ಮಾಡುತ್ತಿದೆ ಎಂದು ಮೋದಿ ಕೊಂಡಾಡಿದ್ದಾರೆ.
ಬೆಂಗಳೂರಿನ 370ಕ್ಕೂ ಅಧಿಕ ಸ್ಥಳಗಳಲ್ಲಿ ಸೌಂದರ್ಯ ವೃದ್ಧಿಸುವ ಕೆಲಸ ಮಾಡಿದೆ. ಪ್ರತಿಯೊಂದು ಸ್ಥಳದಲ್ಲಿಯೂ “ಯೂತ್ ಫಾರ್ ಪರಿವರ್ತನ್’ 100 ರಿಂದ 150 ತಂಡವನ್ನು ಹೊಂದಿದೆ. ಪ್ರತೀ ರವಿವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಸ್ವಚ್ಛತಾ ಕಾರ್ಯ ಮುಂದುವರಿಯುತ್ತದೆ ಎಂದು ಮೋದಿ ಹೇಳಿದ್ದಾರೆ.
ಚಿತ್ರ ಬರೆಯುತ್ತಾರೆ: ಪ್ರಮುಖ ಸ್ಥಳಗಳಲ್ಲಿ ಇರುವ ತ್ಯಾಜ್ಯ ವಿಲೇವಾರಿ ಮಾಡುವುದು ಮಾತ್ರ ವಲ್ಲದೆ ಅಲ್ಲಿ ಕಲಾತ್ಮಕ ಚಿತ್ರಗಳನ್ನು ತಂಡದ ಸದಸ್ಯರು ಬರೆಯುತ್ತಾರೆ. ಜತೆಗೆ ಪ್ರಮುಖ ವ್ಯಕ್ತಿಗಳ ರೇಖಾ ಚಿತ್ರಗಳನ್ನೂ ಬರೆಯುತ್ತಾರೆ ಎಂದು ಕೊಂಡಾಡಿದ್ದಾರೆ.
ಕಳೆದ 8 ವರ್ಷಗಳಿಂದ ಸದ್ದಿಲ್ಲದೆ ಬೆಂಗಳೂರಿನ ಅಂದ ಹೆಚ್ಚಿಸುವ, ಸ್ವಚ್ಛಗೊಳಿಸುವ ಮಹತ್ತರ ಕಾರ್ಯದಲ್ಲಿ ನಿರತರಾಗಿರುವ ಯೂತ್ ಫಾರ್ ಪರಿವರ್ತನ್ ಯುವ ತಂಡವನ್ನು ಇಂದಿನ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮುಕ್ತ ಕಂಡದಿಂದ ಶ್ಲಾಘಿ ಸಿದ್ದಾರೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ