Advertisement

ಮೋದಿ ಕೇವಲ 15 ಮಂದಿಗೆ ಮಾತ್ರ ಪ್ರಧಾನಿನಾ?

11:15 PM Apr 13, 2019 | Team Udayavani |

ಚಿತ್ರದುರ್ಗ/ಕೋಲಾರ: ಮೋದಿ ಕೇವಲ 15 ಮಂದಿಗೆ ಮಾತ್ರ ಪ್ರಧಾನಿನಾ ಎಂದು ಪ್ರಶ್ನಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ದೇಶವನ್ನು ವಂಚಿಸಿದವರ ಹೆಸರು ಬಹುತೇಕ ಮೋದಿ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

Advertisement

ಚಿತ್ರದುರ್ಗ, ಕೋಲಾರ ಹಾಗೂ ಕೆ.ಆರ್‌.ನಗರಗಳಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೋದಿ ಕೇವಲ 15 ಮಂದಿಗೆ ಪ್ರಧಾನಿಯಾಗಿದ್ದಾರೆ.

ದೇಶದ ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಶ್ರೀಮಂತರ ಪಾಲಿಗೆ ಚೌಕಿದಾರ್‌ ಆಗಿದ್ದಾರೆ. ರಫೇಲ್‌ ಡೀಲ್‌ನಲ್ಲಿ ಜನತೆಯ 30 ಸಾವಿರ ಕೋಟಿ ರೂ.ನ್ನು ಅನಿಲ್‌ ಅಂಬಾನಿಗೆ ಕೊಟ್ಟು ದೇಶಭಕ್ತ ಎಂದು ಹೇಳಿಕೊಳ್ಳುತ್ತಾರೆ. ಕಳ್ಳತನ ಮಾಡುವರೆಂದಿಗೂ ದೇಶಭಕ್ತರಾಗುವುದಿಲ್ಲ.

ನರೇಂದ್ರ ಮೋದಿ, ನೀರವ್‌ ಮೋದಿ, ಲಲಿತ್‌ ಮೋದಿ, ಚೋಕ್ಸಿ, ವಿಜಯಮಲ್ಯ, ಅಂಬಾನಿ ಸೇರಿದ ಕಳ್ಳರ ಕೂಟ ದೇಶದ ಜನರ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಜನತೆಗೆ ಹಾಗೂ ದೇಶಕ್ಕೆ ವಂಚಿಸಿರುವ ಕಳ್ಳರ ಹೆಸರು ಬಹುತೇಕ ಮೋದಿ ಎಂದು ಏಕಿದೆ ಎಂದು ವ್ಯಂಗ್ಯವಾಡಿದರು.

“ಚೌಕಿದಾರ ಮೋದಿಗೆ ದೇಶದ 15 ಜನ ಶ್ರೀಮಂತ ಸ್ನೇಹಿತರಿದ್ದರೆ, ನಾನು ಜನಸಾಮಾನ್ಯರ ಸ್ನೇಹಿತ. ಚೌಕಿದಾರ ರೈತರು, ಬಡವರು, ಕೂಲಿ ಕಾರ್ಮಿಕರು, ದಲಿತರ ಪರ ಕೆಲಸ ಮಾಡುತ್ತಿಲ್ಲ’ ಎಂದು ಕುಟುಕಿದರು. ಚೌಕಿದಾರ್‌ ಚೋರ್‌ ಹೈ ಎಂದು ದೇಶದ ಜನರೇ ಹೇಳುತ್ತಿದ್ದಾರೆ.

Advertisement

ಚೌಕಿದಾರ ಮೋದಿ, ಶ್ರೀಮಂತರಾದ ಲಲಿತ್‌ ಮೋದಿ, ಅನಿಲ್‌ ಅಂಬಾನಿ, ನೀರವ್‌ ಮೋದಿ, ಅದಾನಿ ಅವರಂಥವರನ್ನಷ್ಟೇ ತಬ್ಬಿಕೊಂಡು ಫೋಟೋ ತೆಗೆಸಿಕೊಳ್ಳುತ್ತಾರೆ. ಆದರೆ, ನನ್ನ ಫೋಟೋ ರೈತರು, ಕೂಲಿ ಕಾರ್ಮಿಕರು, ಬಡವರ ಜೊತೆಗೆ ಇರುತ್ತದೆ. ಅವರನ್ನು ನಾನು ತಬ್ಬಿಕೊಳ್ಳುತ್ತೇನೆ’ ಎಂದರು.

ಭರವಸೆ ಈಡೇರಿಸಿದ್ದೇವೆ: ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೇವು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇದ್ದಾಗ ಎಂಟು ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಿದರು. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ 48 ಸಾವಿರ ಕೋಟಿ ರೂ.ಮನ್ನಾ ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಯಾವ ರಾಜ್ಯಗಳಲ್ಲಿ ಇದೆಯೋ ಅಲ್ಲೆಲ್ಲ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದರು.

ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಬಡತನ ನಿರ್ಮೂಲನೆಗೆ ಸರ್ಜಿಕಲ್‌ ಸ್ಟೈಕ್‌ ನಡೆಸಲಾಗುವುದು. ರೈತರಿಗೆ ಪ್ರತ್ಯೇಕ ಬಜೆಟ್‌ ಮಂಡಿಸುವುದು ತಮ್ಮ ಆಸೆಯಾಗಿದೆ. ಮೋದಿ ತರಹ ಸುಳ್ಳಿನ ಕಂತೆಯ ಬಜೆಟ್‌ ನೀಡದೆ ಪ್ರಣಾಳಿಕೆಯ ಅಂಶಗಳನ್ನು ನೂರಕ್ಕೆ ನೂರರಷ್ಟು ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.

“ದೇಶದ ಚೌಕಿದಾರರು ಅಂಬಾನಿ ಅವರಂತವರಿಗೆ ಬ್ಯಾಂಕ್‌ ಲಾಕರ್‌ ಕೀ ನೀಡುತ್ತಾರೆ. ಆದರೆ, ನಾನು ಬ್ಯಾಂಕ್‌ ಲಾಕರ್‌ ಕೀಯನ್ನು ಜನಸಾಮಾನ್ಯರಿಗೆ ನೀಡುತ್ತೇನೆ. ಎರಡು ಕೋಟಿ ಉದ್ಯೋಗ ಸೃಷ್ಟಿಗೆ ಕೈ ಹಾಕದೆ ದೇಶದಲ್ಲಿ ಖಾಲಿ ಇರುವ 22 ಲಕ್ಷ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಲಾಗುವುದು’ ಎಂದರು.

ನಾನು ನಿಮ್ಮ ಮುಂದೆ ಸುಳ್ಳು ಹೇಳಲು ಬಂದಿಲ್ಲ. ನಿಮ್ಮ ಹೃದಯದ ಮಾತು ಕೇಳಲು ಬಂದಿದ್ದೇನೆ. ಜನರ ಅಪೇಕ್ಷೆ ಏನಿರುತ್ತದೆಯೋ ಅದು ನನ್ನ ಬಾಯಿಂದ ಮಾತಿನ ರೂಪದಲ್ಲಿ ಹೊರ ಬರುತ್ತದೆ. ನಾನು ನನ್ನ ಮನ್‌ ಕೀ ಬಾತ್‌ ಹೇಳಲ್ಲ. ನಿಮ್ಮ ಮನ್‌ ಕೀ ಬಾತ್‌ ಕೇಳ್ಳೋಕೆ ಬಂದಿದ್ದೇನೆ.
-ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next