ಉದಯವಾಣಿ ಸಮಾಚಾರ
ಜಮಖಂಡಿ: ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳಾದ ವಿಧವಾ ಪಿಂಚಣಿ, ಅಂಗವಿಕಲ ಪಿಂಚಣಿ, ಸಂದ್ಯಾ ಸುರಕ್ಷಾ, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಆಯುಷ್ಮಾನ್ ಕಾರ್ಡ್, ಫಸಲ ಬಿಮ ಯೋಜನೆ, ಪ್ರಧಾನ ಮಂತ್ರಿ ಆವಾಸ ಯೋಜನೆ, ಉಜ್ವಲ ಯೋಜನೆ ಸಹಿತ ವಿವಿಧ ಜನೋಪಯೋಗಿ ಯೋಜನೆಗಳನ್ನು ದೇಶದ ಜನರಿಗೆ ಪ್ರಧಾನಿಯವರು ನೀಡಿದ್ದಾರೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ನಗರದ ಸಾಕ್ಷಾತ್ಕಾರ ಭವನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಹಿಳೆಯರ ಶಕ್ತಿ ವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಬಡ ಕುಟುಂಬಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಕೇವಲ ವ್ಯಕ್ತಿ ಅಲ್ಲ, ಅದ್ಭುತ ಶಕ್ತಿಯಾಗಿದ್ದಾರೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಮೋಸ ಮಾಡುತ್ತಿದೆ. ಎಲ್ಲದರಲ್ಲಿ ದರವನ್ನು ದುಪ್ಪಟ್ಟು ಹೆಚ್ಚಿಸಿ ನಮ್ಮ ಹಣವನ್ನು ನಮಗೆ ನೀಡುತ್ತಿದೆ.
ಐದು ಗ್ಯಾರಂಟಿ ಯೋಜನೆಗಳು ಮೋಸದಿಂದ ಕೂಡಿವೆ ಎಂದು ಆರೋಪಿಸಿದರು. ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಪ್ರಧಾನಿ ಮೋದಿ ಅವರು ಕಾಶ್ಮೀರದಲ್ಲಿ 370 ಆಕ್ಟ್ ತೆಗೆದ ನಂತರ ಅಲ್ಲಿ ಬಾವುಟಗಳು ಹಾರುವಂತೆ ಮಾಡಿದ್ದಾರೆ. ಕನಸಾಗಿ ಉಳಿದಿದ್ದ ರಾಮ ಮಂದಿರ ನಿರ್ಮಾಣ ಸಹಿತ ಅನೇಕ ಕೆಲಸ ನಡೆದಿವೆ. ಇಂದು ಭಾರತ ಜಗತ್ತಿನ 4ನೇ ಶ್ರೀಮಂತ ರಾಷ್ಟ್ರವಾಗಿದೆ.
ಮುಂದಿನ ದಿನಗಳಲ್ಲಿ ನಮ್ಮ ಭಾರತ ವಿಶ್ವ ಗುರುವಾಗಲಿದೆ ಎಂದರು. ಅಭಿಯಾನದ ಜಿಲ್ಲಾ ಸಂಚಾಲಕಿ ರಾಜಶ್ರೀ ಒಡೆಯರ, ಆಶಾ ಗುಡಗುಂಟಿ, ಮೀನಾಕ್ಷಿ ಸವದಿ, ಗೀತಾ ಸೂರ್ಯವಂಶಿ, ವಿಜಯಲಕ್ಷ್ಮೀ ಉಕಮನಾಳ, ಡಾ| ವಿಜಯಲಕ್ಷ್ಮೀ ತುಂಗಳ, ಪವಿತ್ರಾ ತುಕ್ಕನ್ನವರ, ಕಾವೇರಿ ರಾಠೊಡ, ಮಹಾದೇವಿ ಮೂಲಿಮನಿ, ಮಾನಂದಾ ಪಾವಗೊಂಡ, ಅಜೇಯ ಕಡಪಟ್ಟಿ, ಎಂ.ಬಿ.ನ್ಯಾಮಗೌಡ, ಶ್ರೀಧರ ಕಂಬಿ ಇದ್ದರು.