Advertisement

ಮೋದಿ ಸುಳ್ಳಿನ ಸರದಾರ: ಪ್ರಿಯಾಂಕ್‌

05:45 AM Mar 11, 2019 | Team Udayavani |

ಚಿತ್ತಾಪುರ: ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಸೋಲಿಲ್ಲದ ಸರದಾರರಾದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸುಳ್ಳಿನ ಸರದಾರ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ 7.82 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಾಮಾಣಿಕವಾಗಿ ಜನರ ಸೇವೆ ಸಲ್ಲಿಸಿದ್ದರಿಂದಲೇ ಸತತ 11 ಬಾರಿ ಗೆಲುವು ಸಾಧಿಸಿ ಸೋಲಿಲ್ಲದ ಸರ್ದಾರರಾಗಿದ್ದಾರೆ. ನರೇಂದ್ರ ಮೋದಿ ಕಳೆದ ಚುನಾವಣೆ ಪೂರ್ವ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಆದರೆ 15 ಪೈಸೆಯನ್ನೂ ಹಾಕಲಿಲ್ಲ.

ಎರಡು ಕೋಟಿ ಜನರಿಗೆ ಉದ್ಯೋಗ ನೀಡಲಿಲ್ಲ. ಮೋದಿ ಕೇವಲ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸಿ ಸುಳ್ಳಿನ ಸರ್ದಾರರಾಗಿದ್ದಾರೆ. ಕಾಂಗ್ರೆಸ್‌ ಪಕ್ಷ ಯಾವತ್ತು ನವ ಕರ್ನಾಟಕ ನಿರ್ಮಾಣದ ಸಂಕಲ್ಪ ಮಾಡಿದೆ. ಕಾಂಗ್ರೆಸ್‌ನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗೆ ಆಗಮಿಸಿದಾಗ ಅಭಿವೃದ್ಧಿಗಾಗಿ ದೊಡ್ಡ ಮೊತ್ತದ ಅನುದಾನ ನೀಡುತ್ತಾರೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ ಕಲಬುರಗಿಯಲ್ಲಿಯೇ ಬೆಂಗಳೂರು-3, ಹುಬ್ಬಳ್ಳಿ-1, ರಾಯಚೂರಿನಲ್ಲಿ-1 ಕಾಮಗಾರಿಗಳ ಅಡಿಗಲ್ಲು ನೆರವೇರಿಸಿದರು. ಇದರಲ್ಲಿ ಒಂದು ನಯಾಪೈಸೆ ಅನುದಾನ ಕಲಬುರಗಿಗೆ ನೀಡದೆ ಇಲ್ಲಿನ ಜನರಿಗೆ ಅವಮಾನ ಮಾಡಿದ್ದಾರೆ. ಕಲಬುರಗಿಯಲ್ಲಿ ಈ ಕಾರ್ಯಕ್ರಮ ಮಾಡುವ ಬದಲು ಬೆಂಗಳೂರು, ಹುಬ್ಬಳ್ಳಿಯಲ್ಲೇ ಅಡಿಗಲ್ಲು ಮಾಡಬಹುದಿತ್ತು ಎಂದು ಹೇಳಿದರು.

ಚಿಂಚೋಳಿ ಮತಕ್ಷೇತ್ರದಲ್ಲಿ ಜನರು ವಿಶ್ವಾಸವಿಟ್ಟು ಡಾ| ಉಮೇಶ ಜಾಧವ್‌ ಅವರನ್ನು ಆಯ್ಕೆ ಮಾಡಿದ್ದರು. ಆದರೆ
ಅವರು ಜನರ ವಿಶ್ವಾಸಕ್ಕೆ ದ್ರೋಹ ಬಗೆದು ತಮ್ಮನ್ನು ತಾವು ಮಾರಿಕೊಳ್ಳುವ ಮೂಲಕ ಬಿಜೆಪಿ ಸೇರಿ ಆಮಿಷಕ್ಕೆ ಬಲಿಯಾಗಿದ್ದಾರೆ ಎಂದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಜಿಪಂ ಮಾಜಿ ಸದಸ್ಯ ಶಂಭುಲಿಂಗ ಗುಂಡಗುರ್ತಿ ಮಾತನಾಡಿದರು.

Advertisement

ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ಮತ್ತು ಗ್ರಾಪಂ ಅಧ್ಯಕ್ಷ ರೋಹಿತ ಗಂಜಗಿರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಶಿವಲಿಂಗಮ್ಮ ಸಂಗಾವಿ, ಶಶಿಕಲಾ ತಿಮ್ಮನಾಕ್‌, ಮನ್ಸೂರ್‌ ಪಟೇಲ್‌, ಮಾಪಣ್ಣ ಗಂಜಗಿರಿ, ಮುಕ್ತಾರ್‌ ಪಟೇಲ್‌, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಜಯಪ್ರಕಾಶ ಕಮಕನೂರ, ಶಿವರಾಜ ಪಾಟೀಲ, ಶಿವಯೋಗಿ ಸಾಹು, ಶರಣಗೌಡ ಪೇಠಶಿರೂರ, ಶರಣಗೌಡ ಭಾಗೋಡಿ, ವೀರುಪಾಕ್ಷಿ ಗಡ್ಡದ, ಮಾಣಿಕ್‌ ಸಂಗನ, ಶರೀಫ್‌ ಕೋಡ್ಲಿ, ಸಂತೋಷ ಬಣ್ಣಕ್ಕಿ, ಸೋಮು ಪೂಜಾರಿ, ರಾಮು ಸಿದ್ದಗೋಳ, ಮಲ್ಲಿಕಾರ್ಜುನ ನರ್ಸಗೊಂಡ, ಭೀಮುಗೌಡ ಹೊನಗುಂಟಿ, ಮಹೇಶ ಕಟ್ಟಿ, ಜುಮ್ಮಣ್ಣ ಪೂಜಾರಿ, ನಾಮದೇವ ರಾಠೊಡ ಇದ್ದರು. ಸುನೀಲ ದೊಡ್ಮನಿ ಸ್ವಾಗತಿಸಿದರು. ದೇವಿಂದ್ರ ಅಣಕಲ್‌ ನಿರೂಪಿಸಿದರು. ತಾಪಂ ಸದಸ್ಯ ಬಸವರಾಜ ಹೊಸಳ್ಳಿ ವಂದಿಸಿದರು.

ರಾಜ್ಯದ ಸಚಿವನಾಗಿ ತಾಲೂಕಿನ ವಿವಿಧ ಪಟ್ಟಣ, ಗ್ರಾಮಗಳಿಗೆ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇನೆ.
ಪ್ರಧಾನಿಯಾದ ಮೋದಿ ಜಿಲ್ಲೆಗೆ ಏನು ನೀಡಿಲ್ಲ. ಕೇಂದ್ರ ಸರ್ಕಾರದ ಒಂದು ನಯಾಪೈಸೆ ಸಹಾಯ ಇಲ್ಲದೇ ಕರ್ನಾಟಕ ಸರ್ಕಾರ ಕಲಬುರಗಿಯಲ್ಲಿ ದೇಶದ 5ನೇ ಅತಿದೊಡ್ಡ ರನ್‌ವೇ ಇರುವ ವಿಮಾನ ನಿಲ್ದಾಣ ನಿರ್ಮಿಸಿದೆ. ಮೋದಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರೆ ಏನು ಅಭಿವೃದ್ಧಿ ಎಂಬುದು ಗೊತ್ತಾಗುತ್ತಿತ್ತು.
 ಪ್ರಿಯಾಂಕ್‌ ಖರ್ಗೆ, ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next