Advertisement
ಇದಷ್ಟೇ ಅಲ್ಲ, ಭಾರತ ಮತ್ತು ಜಪಾನ್ ದೇಶಗಳು ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುವ ಸಾಮರ್ಥ್ಯ ಹೊಂದಿವೆ. ಭಾರತದ ಆರ್ಥಿಕ ಬೆಳವಣಿಗೆಗಾಗಿ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದ ಅಬೆ ಅವರು, ಮೋದಿ ಅವರ ಮೇಕ್ ಇನ್ ಇಂಡಿಯಾಗಾಗಿ ಸಹಾಯ ಒದಗಿಸುವ ಭರವಸೆ ನೀಡಿದರು. ಇದಕ್ಕೆ ಹೈಸ್ಪೀಡ್ ರೈಲು, ಸಬ್‌ವೇಗಳು, ಇತರ ಮೂಲಸೌಕರ್ಯ, ಜಪಾನ್‌ನ ತಂತ್ರಜ್ಞಾನವನ್ನು ಪಸರಿಸುವ ಕೆಲಸ ಮಾಡುತ್ತೇವೆ ಎಂದೂ ಹೇಳಿದರು. ಮುಂಬಯಿ-ಅಹ್ಮದಾಬಾದ್‌ನ ಬುಲೆಟ್ ಟ್ರೈನ್ ಯೋಜನೆ ಮುಗಿದ ಮೇಲೆ ಭಾರತ-ಜಪಾನ್ ನಡುವೆ ಹೊಸ ಅಧ್ಯಾಯವೇ ಶುರುವಾಗಲಿದೆ ಎಂದೂ ಅಬೆ ಹೇಳಿದ್ದಾರೆ.
ಶನಿವಾರ ರಾತ್ರಿಯಷ್ಟೇ ಜಪಾನ್‌ಗೆ ತೆರಳಿರುವ ಮೋದಿ ಅವರು, ರವಿವಾರ ಬೆಳಗ್ಗೆ ಅಧಿಕೃತವಾಗಿ ಪ್ರವಾಸ ಶುರು ಮಾಡಿದರು. ಮೊದಲಿಗೆ ಯಮನಶಿಯಲ್ಲಿರುವ ಮೌಂಟ್ ಫುಜಿ ಹೊಟೇಲ್‌ಗೆ ಬಂದಿಳಿದ ಮೋದಿ ಅವರನ್ನು ಬಾಗಿಲಲ್ಲೇ ಶಿಂಜೋ ಅಬೆ ಆತ್ಮೀಯವಾಗಿ ಸ್ವಾಗತಿಸಿದರು. ಜಪಾನ್‌ನ ಅತ್ಯಂತ ಎತ್ತರದ ಶಿಖರ ಎಂದೇ ಖ್ಯಾತವೆತ್ತಿರುವ ಮೌಂಟ್ ಫುಜಿಯಲ್ಲಿ ರುವ ಹೊಟೇಲ್ ಬಳಿ ನಿಂತು ಇಬ್ಬರೂ ಫೋಟೋಗೆ ಪೋಸ್ ನೀಡಿದರು. ಇಲ್ಲೇ ಅನೌಪಚಾರಿಕವಾಗಿ ಉಭಯ ದೇಶಗಳ ಭದ್ರತೆ ಮತ್ತು ಆರ್ಥಿಕ ಸಹಕಾರದ ಬಗ್ಗೆಯೂ ಮಾತುಕತೆ ನಡೆಸಿದರು. ವಿಶೇಷವೆಂದರೆ ದಿನ ವಿಡೀ ಇಬ್ಬರೂ ಜತೆಯಲ್ಲೇ ಕಾಲಕಳೆದರು. ಸಂಜೆ ಯಮನಶಿಯಿಂದ ಟೋಕಿಯೊವರೆಗೆ ರೈಲಿನಲ್ಲೇ ಉಭಯ ನಾಯಕರು ಪ್ರಯಾಣಿಸಿದರು. ಮೋದಿಗೆ ವಿಲ್ಲಾ ಗೌರವ
ಈ ಬಾರಿಯ ಜಪಾನ್ ಪ್ರವಾಸ ಪ್ರಧಾನಿ ಮೋದಿ ಅವರ ಪಾಲಿಗೆ ಅವಿಸ್ಮರಣೀಯ. ಪ್ರಧಾನಿ ಅಬೆ ಅವರು ಇದೇ ಮೊದಲ ಬಾರಿಗೆ ಯಮನಶಿ ಬಳಿ ಇರುವ ತಮ್ಮ ಖಾಸಗಿ ವಿಲ್ಲಾಕ್ಕೆ ಮೋದಿ ಅವರಿಗೆ ಆಹ್ವಾನ ನೀಡಿದ್ದರು. ಅಂತೆಯೇ ರವಿವಾರ ಸಂಜೆ ಅಲ್ಲಿಗೆ ಕರೆದೊಯ್ದು ಕೊಂಚ ಹೊತ್ತು ಕಾಲ ಕಳೆದರು. ಈ ಬಗ್ಗೆ ನರೇಂದ್ರ ಮೋದಿ ಅವರು ಟ್ವೀಟ್‌ನಲ್ಲಿ “ತಮ್ಮ ನಿವಾಸದಲ್ಲಿ ಆತಿಥ್ಯ ಕೊಟ್ಟ ಪ್ರಧಾನಿ ಅಬೆ ಅವರಿಗೆ ಧನ್ಯವಾದಗಳು, ಅಬೆ ಅವರು ಆಹಾರವನ್ನು ಜಪಾನ್ ಮಾದರಿಯಲ್ಲಿ ಚಾಪ್‌ಸ್ಟಿಕ್ ಬಳಸಿಕೊಂಡು ತಿನ್ನುವುದು ಹೇಗೆ ಎಂಬುದನ್ನೂ ಕಲಿಸಿಕೊಟ್ಟರು’ ಎಂದು ಬರೆದುಕೊಂಡಿದ್ದಾರೆ.
Related Articles
2014ರಲ್ಲಿ ಮೋದಿ ಅವರು ಪ್ರಧಾನಿಯಾದ ಅನಂತರ ಅಬೆ ಅವರ ಜತೆಗೆ ನಡೆಸುತ್ತಿರುವ 13ನೇ ಮಾತುಕತೆ ಇದು. ಇದರಲ್ಲಿ ನಾಲ್ಕು ಶೃಂಗಸಭೆಗಳೇ ಸೇರಿವೆ. ಹಿಂದಿನ ಎಲ್ಲ ಭೇಟಿಗಳಿಗಿಂತ ಇದು ಹೆಚ್ಚು ಫಲಪ್ರದವಾಗಲಿದೆ ಎಂಬುದು ಅಬೆ ಅವರ ಮಾತು. ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳ ಕುರಿತಂತೆ ಆಗಾಗ ಪರಿಶೀಲನೆ ನಡೆಸುವ ದೃಷ್ಟಿಯಿಂದ ಎರಡೂ ದೇಶಗಳ ನಡುವೆ ಈ ರೀತಿ ಭೇಟಿ ನಿಗದಿಯಾಗುತ್ತಿರುತ್ತದೆ. ಇದರ ಮಧ್ಯೆಯೇ ಇಬ್ಬರೂ ನಾಯಕರು ಆಟೋಮೇಶನ್ ಅನ್ನು ಅಳವಡಿಸಿಕೊಂಡಿರುವ ಫಾನುಕ್ ಕಾರ್ಖಾನೆಗೆ ಭೇಟಿ ನೀಡಿದರು.
Advertisement
ಅಬೆಗೆ ಕರಕುಶಲ ವಸ್ತುಗಳ ಕೊಡುಗೆಮೋದಿ ಅವರು ಅಬೆ ಅವರಿಗೆಂದೇ ವಿಶೇಷವಾಗಿ ಮಾಡಿಸಿದ ಕರಕುಶಲ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೈಯಿಂದಲೇ ಮಾಡಿದ ಸ್ಟೋನ್ ಬೌಲ್‌ಗಳು ಎರಡು ಮತ್ತು ರಾಜಸ್ಥಾನದ ಪ್ರಸಿದ್ಧ ಗುಲಾಬಿ ಬಣ್ಣದ ಸ್ಫಟಿಕ ಶಿಲೆ ಮತ್ತು ಹಸಿರು ಸ್ಫಟಿಕ ಶಿಲೆಯಿಂದ ಮಾಡಿದ ನೆಲಹಾಸನ್ನೂ ಕೊಡುಗೆಯಾಗಿ ನೀಡಿದ್ದಾರೆ. ಇದಷ್ಟೇ ಅಲ್ಲ, ಜೋಧ್‌ಪುರದ ಪ್ರಸಿದ್ಧ ಮರದ ಪೆಟ್ಟಿಗೆಯನ್ನೂ ನೀಡಲಾಗಿದೆ. ಕಲ್ಲಿನ ಬೌಲ್‌ಗಳನ್ನು ಗುಜರಾತ್‌ನ ಖಂಬತ್ ಪ್ರದೇಶದಲ್ಲಿರುವ ಕಲಾಕಾರ ಶಬ್ಬೀರ್‌ಹುಸೇನ್ ಇಬ್ರಾಹಿಂಭಾಯ್ ಶೇಕ್ ಅವರು ಮಾಡಿಕೊಟ್ಟಿದ್ದಾರೆ. ಇಂದು ಅಧಿಕೃತ ಚರ್ಚೆ
ಸೋಮವಾರ ಬೆಳಗ್ಗೆ ಮೋದಿ ಮತ್ತು ಅಬೆ ನಡುವೆ ಅಧಿಕೃತವಾಗಿ ಮಾತುಕತೆ ನಡೆಯಲಿದೆ. ಆರ್ಥಿಕ ಸಹಕಾರ ಮತ್ತು ದ್ವಿಪಕ್ಷೀಯ ಭದ್ರತೆ ಕುರಿತ ಚರ್ಚೆಯೇ ಪ್ರಮುಖ ಅಜೆಂಡಾ ಎಂದು ಮೂಲಗಳು ಹೇಳಿವೆ. ಮೋದಿ ಅವರೇ ರಕ್ಷಣೆ, ಆಂತರಿಕ ಭದ್ರತೆ ಬಗ್ಗೆ ಪ್ರಸ್ತಾವಿಸಲಿದ್ದಾರೆ ಎನ್ನಲಾಗಿದೆ. ರಕ್ಷಣೆಗೆ ಹೆಚ್ಚಿನ ಸಹಾಯ
ಹಿಂದೂ ಮಹಾಸಾಗರದಲ್ಲಿ ಚೀನದ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ಮತ್ತು ಭಾರತ ಪ್ರತಿತಂತ್ರ ರೂಪಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸ ಲಾಗಿದೆ. ಸೋಮವಾರದ ಮಾತುಕತೆ ವೇಳೆ ಎರಡೂ ದೇಶಗಳು ತಮ್ಮ ಸೇನಾ ನೆಲೆಗಳನ್ನು ಪರಸ್ಪರ ಬಳಸಿಕೊಳ್ಳಲು ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಭಾರತವು ಜಪಾನ್‌ನ ಸೇನಾ ನೆಲೆಯಾದ ಹಾರ್ನ್ ಆಫ್ ಆಫ್ರಿಕಾದಲ್ಲಿರುವ ಡಿಜ್ಬೆ„ತಿಯನ್ನು ಬಳಸಿಕೊಳ್ಳಲು ಬಿಡಲಿದೆ. ಇದು ಸ್ಯೂಯೆಜ್ ಕಾಲುವೆ ಮತ್ತು ಹಿಂದೂ ಮಹಾಸಾಗರದ ಬಳಿ ಇದ್ದು, ಇಲ್ಲಿ ಚೀನದ ಪ್ರಭಾವ ತಪ್ಪಿಸಲು ಸಹಕಾರಿಯಾಗಲಿದೆ. ಅಂತೆಯೇ ಭಾರತವು ಅಂಡಮಾನ್ ನಿಕೋಬಾರ್‌ನಲ್ಲಿನ ಸೇನಾ ನೆಲೆ ಬಳಸಿಕೊಳ್ಳಲು ಜಪಾನ್‌ಗೆ ಅವಕಾಶ ನೀಡುವ ಸಂಭವವಿದೆ ಎಂದು ಹೇಳಲಾಗಿದೆ. ಮಹತ್ವದ ಭೇಟಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ರೇಡ್ ವಾರ್‌ನಿಂದಾಗಿ ಇಂದು ಉಳಿದ ದೇಶಗಳು ಒಂದಾಗುವ ಅನಿವಾರ್ಯತೆಗೆ ಸಿಲುಕಿವೆ. ಮೋದಿ ಅವರು ಪ್ರಧಾನಿಯಾದ ತತ್‌ಕ್ಷಣವೇ ವಿದೇಶ ಪ್ರವಾಸಕ್ಕೆ ಆರಿಸಿಕೊಂಡದ್ದು ಜಪಾನ್ ಅನ್ನು. ಅಲ್ಲದೆ “ಅಬೆಕಾನಾಮಿಕ್ಸ್’ ಹೆಚ್ಚು ಪ್ರಸಿದ್ಧಿಯಾಗಿದ್ದು, ಭಾರತದಲ್ಲಿ ಜಪಾನ್ ಹೂಡಿಕೆಗೂ ಸಾಕಷ್ಟು ಅವಕಾಶಗಳಿವೆ. ಈ ಎಲ್ಲ ಕಾರಣಗಳಿಂದಾಗಿಯೇ ಕಳೆದ ನಾಲ್ಕು ವರ್ಷಗಳಲ್ಲಿ ಈ ಇಬ್ಬರೂ ನಾಯಕರು ಹೆಚ್ಚು ಬಾರಿ ಭೇಟಿಯಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.