ಯಾದಗಿರಿ : ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಮೋದಿ ನೆರವು ನೀಡಿದ್ದಾರೆ ಎನ್ನುವ ರಾಹುಲ್ ಗಾಂಧಿ ಅವರಿಗೆ ದಾರಿ ತೋಚದಂತಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸೋಲಿನ ಹತಾಶೆ ಕಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದಾರೆ.
ಸುರಪುರ ತಾಲೂಕಿನ ಶ್ರೀಗಿರಿ ಮಠದ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ’ ರಾಹುಲ್ ಗಾಂಧಿಯವರು ಜನರನ್ನ ಯಾಮಾರಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಎಂದಿಗೂ ಇದು ಸಾಧ್ಯವಿಲ್ಲ ಎಂದರು.
ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಪೆನ್ ಡ್ರೈವ್ ಕುರಿತು ಎರಡು ತಿಂಗಳ ಮೊದಲೇ ಗೊತ್ತಿತ್ತು ಅನ್ನುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಪೆನ್ ಡ್ರೈವ್ ಇಟ್ಟುಕೊಂಡು ಏನು ಮಾಡುತ್ತಾ ಇದ್ದರು?, ಎರಡು ತಿಂಗಳ ಮುಂಚೆ ತನಿಖೆಗೆ ಒಳಪಡಿಸಬಹುದಿತ್ತಲ್ಲ, ರಾಜ್ಯದ ಕಾಂಗ್ರೆಸ್ ನಾಯಕರ ‘ಡ್ರಾಮಾ ಬಾಜಿ’ ರಾಜಕೀಯ ನಡೆಯಲ್ಲ ಎಂದರು.
ಜನ ತೀರ್ಮಾನ ಮಾಡಿದ್ದಾರೆ, ಬಿಜೆಪಿ ಕಡೆ ಒಲವಿದೆ. ಮತ್ತೆ ಮೋದಿ ಅವರೇ ಈ ದೇಶದ ಪ್ರಧಾನಿಯಾಗುತ್ತಾರೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಕೇಂದ್ರಕ್ಕೆ ರಾಜ್ಯ ಬಿಜೆಪಿ ನಾಯಕರು ಪತ್ರ ಬರೆಯುವ ವಿಚಾರದ ಕುರಿತು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯ ಕುರಿತು ವಿಜಯೇಂದ್ರ ವ್ಯಂಗ್ಯವಾಡಿ, ‘ಸಿಎಂ ಅವರು ಮಹಾನ್ ಬುದ್ದಿವಂತ, ಯಾವ ಯಾವ ಸಮಯದಲ್ಲಿ ಏನ್ ಮಾತಾಡಬೇಕು, ಮಾಡಬೇಕು ಅನ್ನೋದು ಅವರಿಗೆ ಗೊತ್ತಿದೆ’ ಎಂದರು.