Advertisement

ಮೋದಿಗೆ ಅಧಿಕಾರ ಕೊಟ್ಟಂತೆ ಜೆಡಿಎಸ್‌ಗೂ ಕೊಡಿ

03:45 AM Jan 22, 2017 | Team Udayavani |

ಬೆಂಗಳೂರು: “ಕೇಂದ್ರದಲ್ಲಿ ನರೇಂದ್ರ ಮೋದಿ ನೋಡಿ ಬಿಜೆಪಿಗೆ ಪೂರ್ಣ ಬಹುಮತ ನೀಡಿದ್ದೀರಿ, ರಾಜ್ಯದಲ್ಲಿ ನನ್ನನ್ನು ನೋಡಿ ಜೆಡಿಎಸ್‌ಗೆ ಸ್ವಂತ ಶಕ್ತಿ ಮೇಲೆ ಸರ್ಕಾರ ರಚಿಸುವ ಶಕ್ತಿ ಕೊಡಿ’ ಎಂದು ಕೈಗಾರಿಕೋದ್ಯಮಿಗಳಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

Advertisement

ಅಲ್ಲದೆ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ವಲಯ (ಎಸ್‌ಎಂಇ) ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ನಗರದಲ್ಲಿ ಶನಿವಾರ ಕೈಗಾರಿಕೋದ್ಯಮಿಗಳ ಜತೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ರಾಜ್ಯದ ಸಮಗ್ರ ಅಭಿವೃದ್ಧಿಗೆ 1.50 ಕೋಟಿ ಕುಟುಂಬಗಳಿಗೆ
ಉದ್ಯೋಗ ಕಲ್ಪಿಸಿರುವ ಹಾಗೂ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ.ತೆರಿಗೆ ಪಾವತಿಸುತ್ತಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ ಕೊಡುಗೆ ಕಡಿಮೆಯೇನಲ್ಲ. ಆದರೆ, ನಿಮ್ಮ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಒಮ್ಮೆ
ಜೆಡಿಎಸ್‌ಗೆ ಅಧಿಕಾರ ಕೊಡಿ, ನೀವು ಸರ್ಕಾರದ ಬಳಿ ಬರಬೇಕಿಲ್ಲ, ನಿಮ್ಮ ಮನೆ ಬಾಗಿಲಿಗೆ ಸರ್ಕಾರ ಬರುತ್ತದೆ’ ಎಂದು ವಾಗ್ಧಾನ ಮಾಡಿದರು.

ಕೈಗಾರಿಕಾ ವಲಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಧಾನಮಂಡಲದ ಜಂಟಿ ಅಧಿವೇಶನ ಹಾಗೂ ಬಜೆಟ್‌ ಅಧಿವೇಶನ ಎರಡರಲ್ಲೂ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು. 2ನೇ ಹಂತದ ನಗರಗಳಲ್ಲಿ ರೈಲು,
ರಸ್ತೆ, ವಿಮಾನಯಾನ ಸಂಪರ್ಕ ಹಾಗೂ ಮೂಲಸೌಕರ್ಯ ಕೊರತೆ ದೊಡ್ಡ ಮಟ್ಟದಲ್ಲಿದೆ.

ರಾಜ್ಯ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು. ಬೆಂಗಳೂರು ನಗರ ಮತ್ತು ಸುತ್ತಮುತ್ತ ಭೂಗಳ್ಳರು ಕಬಳಿಸಿರುವ ಜಮೀನನ್ನು ವಶಕ್ಕೆ ಪಡೆದು ಹರಾಜು ಹಾಕಿದರೆ 2 ರಿಂದ 3 ಲಕ್ಷ ಕೋಟಿ ರೂ. ಬೊಕ್ಕಸಕ್ಕೆ ಬರಲಿದೆ. ಅದರಿಂದ ಕೈಗಾರಿಕೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಕೈಗೊಳ್ಳಬೇಕಾದ ಮೂಲಸೌಕರ್ಯ ಯೋಜನೆ ರೂಪಿಸಬಹುದು. ಆದರೆ, ಸರ್ಕಾರ ಆ ಬಗ್ಗೆ ಗಮನವೇ ಹರಿಸುತ್ತಿಲ್ಲ ಎಂದರು.

ಮೆಟ್ರೋ ಮೊದಲ ಹಂತದ 19 ಕಿ.ಮೀ. ಯೋಜನೆ, ನೆಲಮಂಗಲ ಮೇಲ್ಸೇತುವೆ, ಮಡಿವಾಳ ಮೇಲ್ಸೇತುವೆ ಯೋಜನೆಗಳು ಅನುಷ್ಠಾನಗೊಂಡಿದ್ದು ತಾವು ಮುಖ್ಯಮಂತ್ರಿಯಾಗಿದ್ದಾಗ. ಮೊದಲ ಬಾರಿ ಶಾಸಕನಾಗಿ ಅನುಭವ
ಇಲ್ಲದಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಹಿರಿಯರ ಸಲಹೆ, ಸೂಚನೆ ಪಡೆದುಕೊಳ್ಳುತ್ತಿದ್ದೆ.

Advertisement

ಬೆಂಗಳೂರಿನಲ್ಲಿ 5 ಕಡೆ ಟೌನ್‌ಶಿಪ್‌, ವಿಧಾನಸೌಧದಿಂದ ಮೇಕ್ರಿ ವೃತ್ತದವರೆಗಿನ ಸುರಂಗ ರಸ್ತೆ ಯೋಜನೆ ಸಹ ರೂಪಿಸಿದ್ದೆ. ಆದರೆ, ನಂತರ ಬಂದ ಸರ್ಕಾರಗಳು ಗಮನ ಹರಿಸಲಿಲ್ಲ ಎಂದರು. ಮೋದಿ ನೋಟು ಅಮಾನ್ಯ ನಿರ್ಧಾರ
ಕೈಗೊಂಡು ದೇಶದಲ್ಲಿ ಬದಲಾವಣೆ ಆಗಲಿದೆ ಎಂದಿದ್ದರು. ಆದರೆ, ಇಂದು ಅವರ ನಿರ್ಧಾರದಿಂದ ಜನಸಾಮಾನ್ಯರು ತೊಂದರೆ ಎದುರಿಸುವಂತಾಗಿದೆ. ಕೇಂದ್ರ ಸರ್ಕಾರ 6.50 ಲಕ್ಷ ಕೋಟಿ ರೂ.ನಷ್ಟು ದೊಡ್ಡವರ ಸಾಲ ಮನ್ನಾ ಮಾಡಿತು.
ಆದರೆ, ಅದರಲ್ಲಿ ಯಾವುದಾದರೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಇವೆಯೇ ಎಂದು ಪ್ರಶ್ನಿಸಿದರು.

ಕಾಸಿಯಾ ಅಧ್ಯಕ್ಷ ಪದ್ಮನಾಭ, ಉಪಾಧ್ಯಕ್ಷ ಹನುಮಂತೇಗೌಡ, ಎಫ್ಕೆಸಿಸಿಐ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ಪೀಣ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಮಲ್ಯಾದ್ರಿ ರೆಡ್ಡಿ, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ನಾಗಣ್ಣ
ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next