Advertisement

ಮೋದಿ ಸರ್ಕಾರಕ್ಕೆ 9 ವರ್ಷ; ಕಾರ್ಯಕ್ರಮಗಳ ಸರಣಿ

09:04 PM May 15, 2023 | Team Udayavani |

ಹೊಸದಿಲ್ಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ 9 ವರ್ಷಗಳು ಪೂರ್ಣಗೊಳ್ಳಲಿವೆ. ಅಲ್ಲದೆ ಮುಂದಿನ ವರ್ಷ ಲೋಕಸಭೆ ಚುನಾವಣೆಯೂ ನಡೆಯಲಿದ್ದು, ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯತಂತ್ರವನ್ನು ಬಿಜೆಪಿ ಹಾಕಿಕೊಂಡಿದೆ.

Advertisement

“ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ 9 ವರ್ಷಗಳ ಸಾಧನೆ’ ಎಂಬ ಜಾಗೃತಿ ಕಾರ್ಯಕ್ರಮ, “ವಿಶೇಷ ಸಂಪರ್ಕ ಅಭಿಯಾನ’ ಹಮ್ಮಿಕೊಳ್ಳಲು ಬಿಜೆಪಿ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಮೇ 30ರಿಂದ ಜೂ. 30ರ ವರೆಗೆ ಈ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಆಯೋಜಿಸಲಾಗುತ್ತಿದೆ. ಕಳೆದ 50 ವರ್ಷಗಳಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿದ ಮೊದಲ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಯನ್ನು ಪಡೆಯುವುದು ಬಿಜೆಪಿಯ ಇಚ್ಛೆಯಾಗಿದೆ.

ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಕೇಂದ್ರ ಸಚಿವರು ದೇಶಾದ್ಯಂತ ಪತ್ರಿಕಾಗೋಷ್ಠಿಗಳನ್ನು ನಡೆಸಲಿದ್ದಾರೆ. ಜತೆಗೆ, ರಾಜ್ಯಗಳ ರಾಜಧಾನಿಗಳು ಮತ್ತು ದೊಡ್ಡ ದೊಡ್ಡ ನಗರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಸರಕಾರದ 9 ವರ್ಷಗಳ ಸಾಧನೆಯ ಕುರಿತು ವಿವರಿಸಲಿದ್ದಾರೆ. ವಿಶೇಷವಾಗಿ, ಜನಧನ, ಉಜ್ವಲ, ಸ್ವತ್ಛ ಭಾರತ ಯೋಜನೆ, ಎಲ್ಲರಿಗೂ ಮನೆ, ಕಿಸಾನ್‌ ನಿಧಿ, ಆಯುಷ್ಮಾನ್‌ ಭಾರತ್‌ ಸೇರಿದಂತೆ ಜನರ ಜೀವನದ ಮೇಲೆ ಪ್ರಭಾವ ಬೀರಿರುವಂಥ ಕಾರ್ಯಕ್ರಮಗಳ ಕುರಿತು ಮಾತನಾಡಲಿದ್ದಾರೆ. ಫ‌ಲಾನುಭವಿಗಳ ಮಾತು ಇರುವ ವೀಡಿಯೋಗಳು, ಸೃಜನಶೀಲ ಮಾಹಿತಿಯುಕ್ತ ಅಂಕಿಅಂಶಗಳು (ಇನ್ಫೋಗ್ರಾಫಿಕ್ಸ್‌), ರೇಡಿಯೋ ಜಿಂಗಲ್‌ಗಳು, ಭಿತ್ತಿಪತ್ರಗಳು, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಬಹುದಾದಂಥ ಸಾಕ್ಷ್ಯಚಿತ್ರಗಳು ಸೇರಿದಂತೆ ಮಲ್ಟಿಮೀಡಿಯಾ ಪ್ರಚಾರ ಯೋಜನೆಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಿದ್ಧಪಡಿಸಿದೆ.

ಸರಣಿ ಭಾಷಣಗಳು
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಪ್ರಮುಖರು ದೇಶಾದ್ಯಂತ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈಗಾಗಲೇ ಇದಕ್ಕಾಗಿ ಕೇಂದ್ರ ಸಚಿವರನ್ನು ಒಳಗೊಂಡ ಸಮಿತಿಯನ್ನೂ ರಚಿಸಲಾಗಿದೆ. ಬೂತ್‌, ಜಿಲ್ಲೆ ಮತ್ತು ರಾಜ್ಯಮಟ್ಟದ ಕಾರ್ಯಕರ್ತರೊಂದಿಗೆ ನಾಯಕರು ಮಾತುಕತೆ ನಡೆಸಲಿದ್ದಾರೆ.

ಮೂರು ಹಂತಗಳ ಕಾರ್ಯಕ್ರಮ
ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಮೂರು ಹಂತದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೇ 30ರಿಂದ ಜೂ. 1ರ ವರೆಗೆ ಒಂದು ಹಂತದ ಕಾರ್ಯಕ್ರಮ ಮುಗಿದ ಬಳಿಕ, ಜೂ.1ರಿಂದ 22ರ ವರೆಗೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಪತ್ರಿಕಾಗೋಷ್ಠಿ, ಖ್ಯಾತನಾಮರ ಸಮಾವೇಶ, ಸಾಮಾಜಿಕ ಜಾಲತಾಣಗಳ ಪ್ರಭಾವಿಗಳ ಸಭೆ, ಉದ್ಯಮಿಗಳ ಸಮಾವೇಶ, “ವಿಕಾಸ ತೀರ್ಥ’ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಅನಂತರ ಅಸೆಂಬ್ಲಿ ಮಟ್ಟದಲ್ಲೂ ಸಭೆ, ಪ್ರತೀ ಕ್ಷೇತ್ರದ ಹಿರಿಯ ಕಾರ್ಯಕರ್ತರೊಂದಿಗೆ ಔತಣಕೂಟ, ಕಲ್ಯಾಣ ಯೋಜನೆಗಳ ಫ‌ಲಾನುಭವಿಗಳ ಸಮಾವೇಶ, ಯೋಗ ದಿನದ ನಿಟ್ಟಿನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಶ್ಯಾಮ್‌ ಪ್ರಸಾದ್‌ ಮುಖರ್ಜಿಯವರ ಪುಣ್ಯತಿಥಿಯ ದಿನವಾದ ಜೂ. 23ರಂದು ಪ್ರಧಾನಿ ಮೋದಿಯವರು 10 ಲಕ್ಷ ಬೂತ್‌ಗಳ ಕಾರ್ಯಕರ್ತರೊಂದಿಗೆ ವರ್ಚುವಲ್‌ ಸಂವಾದ ನಡೆಸಲಿದ್ದಾರೆ. ಜೂ. 20ರಿಂದ 30ರ ವರೆಗೆ ಮನೆ-ಮನೆ ಸಂಪರ್ಕ ಅಭಿಯಾನ, ಮಿಸ್ಡ್ ಕಾಲ್‌ ಅಭಿಯಾನವನ್ನೂ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

ಏನೇನು ಕಾರ್ಯಕ್ರಮಗಳು?

– ದೇಶಾದ್ಯಂತ ಸಚಿವರು, ಬಿಜೆಪಿ ಪ್ರಮುಖರಿಂದ ಪತ್ರಿಕಾಗೋಷ್ಠಿ. ಮೇ 30ರಿಂದ ಜೂ.30ರ ವರೆಗೆ ಅಭಿಯಾನ

– ಮೇ 30 ಮತ್ತು 31ರಂದು ಪ್ರಧಾನಿ ಮೋದಿಯವರಿಂದ ಬೃಹತ್‌ ರ್ಯಾಲಿ

– ದೇಶಾದ್ಯಂತ ಬಿಜೆಪಿ ಹಿರಿಯ ನಾಯಕರಿಂದ 51 ರ್ಯಾಲಿಗಳು

– 396 ಲೋಕಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ

– ಪ್ರತೀ ಲೋಕಸಭಾ ಕ್ಷೇತ್ರದ 250 ಸೇರಿದಂತೆ ಒಂದು ಲಕ್ಷ ಕುಟುಂಬಗಳನ್ನು ಸಂಪರ್ಕಿಸುವುದು

– ಕ್ರೀಡಾಳುಗಳು, ಕಲಾವಿದರು, ಉದ್ಯಮಿಗಳು, ಸಮರವೀರರ ಕುಟುಂಬಗಳನ್ನು ಸಂಪರ್ಕಿಸುವುದು

– ಸರಕಾರವು ದೇಶದ ಆರ್ಥಿಕತೆಯನ್ನು ಹೇಗೆ ರಕ್ಷಿಸಿತು, ಕೊರೊನಾ ಸೋಂಕನ್ನು ಹೇಗೆ ನಿಯಂತ್ರಿಸಿತು ಎಂಬ ಬಗ್ಗೆ ಜನರಿಗೆ ಮಾಹಿತಿ. ಶಾಂತಿ ಸ್ಥಾಪನೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರ

– 2014ರ ಮೇ ತಿಂಗಳ ಅನಂತರ ಜಾರಿಗೆ ಬಂದ ಯೋಜನೆಗಳ ಫ‌ಲಾನುಭವಿಗಳಿಂದ ಲಿಖಿತ ಪ್ರತಿಕ್ರಿಯೆಗಳು ಹಾಗೂ ವೀಡಿಯೋಗಳನ್ನು ಮಾಡಿಸಿಕೊಂಡು, ಸರಕಾರಿ ಯೋಜನೆಗಳ ಯಶಸ್ಸನ್ನು ದೇಶವಾಸಿಗಳಿಗೆ ತಲುಪಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next