Advertisement

ಸಿದ್ದು ಶಾದಿ ಭಾಗ್ಯ ರೀತಿ, ಮೋದಿ ಶಾದಿ ಶಗುನ್‌

06:10 AM Aug 08, 2017 | |

ನವದೆಹಲಿ: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತ ಹೆಣ್ಮಕ್ಕಳಿಗೆ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದ ಮಾದರಿಯಲ್ಲೇ ಕೇಂದ್ರ ಸರ್ಕಾರವೂ ಇದೀಗ ಮುಸ್ಲಿಂ ಮಹಿಳೆಯರಿಗೆ “ಶಾದಿ ಶಗುನ್‌’ ಹೆಸರಿನ ಯೋಜನೆ ಘೋಷಿಸಿದೆ.

Advertisement

ಶಾದಿ ಶಗುನ್‌ ಯೋಜನೆ ಪ್ರಕಾರ, ಪದವೀಧರ ಮುಸ್ಲಿಂ ಮಹಿಳೆಯರು ಈ ಯೋಜನೆ ಫ‌ಲಾನುಭವಿಗಳಾಗಬಹುದು. ಯೋಜನೆ ಪ್ರಕಾರ, ವಿವಾಹದ ವೇಳೆ 51 ಸಾವಿರ ರೂ. ನೀಡಲಾಗುತ್ತದೆ.

ಈ ಯೋಜನೆಯ ಉದ್ದೇಶ ಮುಸ್ಲಿಂ ಮಹಿಳೆಯರನ್ನು ಉನ್ನತ ವ್ಯಾಸಂಗಕ್ಕೆ ಪ್ರೇರೇಪಿಸುವುದಾಗಿದೆ. ಮುಸ್ಲಿಂ ಮಹಿಳೆಯರು ಮತ್ತು ಅವರ ಪೋಷಕರು ಕಾಲೇಜು ಮೆಟ್ಟಿಲೇರಲು ಅಥವಾ ಉನ್ನತ ಶಿಕ್ಷಣಕ್ಕೆ ತಮ್ಮ ಸಂಪೂರ್ಣ ಸಂಪಾದನೆ ವ್ಯಯಿಸುತ್ತಾರೆ. ಅಂತಹವರಿಗೆ ಇದು ವರದಾನವಾಗಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಯೋಜನೆಯ ವಿವರಗಳನ್ನು ಮೌಲಾನಾ ಆಜಾದ್‌ ಎಜುಕೇಶನಲ್‌ ಫೌಂಡೇಶನ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಇದರೊಂದಿಗೆ ಫೌಂಡೇಶನ್‌ನ ಇತ್ತೀಚಿನ ಸಭೆಯಲ್ಲಿ ಮುಸ್ಲಿಂ ಮಹಿಳೆಯರ ಕಲಿಕೆಗೆ ಉತ್ತೇಜನ ನೀಡಲು ಈಗಿರುವ ವಿದ್ಯಾರ್ಥಿವೇತನದ ಷರತ್ತುಗಳನ್ನು ಪರಿಷ್ಕರಿಸಲಾಗಿದೆ. ಸದ್ಯ 11 ಮತ್ತು 12ನೇ ತರಗತಿ ಕಲಿವ ಮುಸ್ಲಿಂ ಬಾಲಕಿಯರಿಗೆ ಮಾತ್ರ ತಲಾ 12 ಸಾವಿರ ನೀಡುವ ಯೋಜನೆ ಇದ್ದು, ಇದನ್ನು 9 ಮತ್ತು 10ನೇ ತರಗತಿ ಕಲಿವ ಮುಸ್ಲಿಂ ಬಾಲಕಿಯರಿಗೆ ಅನ್ವಯವಾಗುವಂತೆ ಮಾಡಲಾಗಿದೆ.

ಯೋಜನೆ ಯಾರಿಗೆ ಅನ್ವಯ?
ಪದವೀಧರ ಮುಸ್ಲಿಂ ಮಹಿಳೆಯರಿಗೆ ಮಾತ್ರ ಶಾದಿ ಶಗುನ್‌ ಅನ್ವಯ. ಈ ಮೊದಲೇ ಮೌಲಾನಾ ಆಜಾದ್‌ ಎಜುಕೇಶನಲ್‌ ಫೌಂಡೇಶನ್‌ನ ವಿದ್ಯಾರ್ಥಿ ವೇತನಕ್ಕೆ ಅರ್ಹರಾದವರಿಗೆ ವಿವಾಹದ ವೇಳೆ 51 ಸಾವಿರ ರೂ. ಕೊಡುಗೆಯನ್ನು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನೀಡಲಿದೆ.

Advertisement

“ಮುಸ್ಲಿಂ ಸಮುದಾಯದಲ್ಲಿ ಬಾಲಕಿಯರಿಗೆ ಉನ್ನತ ಶಿಕ್ಷಣ ಈಗಲೂ ಲಭ್ಯವಾಗುತ್ತಿಲ್ಲ. ಇದಕ್ಕೆ ಹಣಕಾಸು ಸಮಸ್ಯೆ ಇತ್ಯಾದಿ ಕಾರಣಗಳಿವೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ, ಪೋಷಕರು ಬಾಲಕಿಯರಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡಲು ಪ್ರೇರಣೆಯಾಗಿ ಅವರ ವಿವಾಹದ ವೇಳೆ 51 ಸಾವಿರ ರೂ. ಮದುವೆ ಉಡುಗೊರೆ ನೀಡಲು ನಿರ್ಧರಿಸಲಾಗಿದೆ.’
– ಶಾಕಿರ್‌ ಹುಸೇನ್‌ ಅನ್ಸಾರಿ ಎಮ್‌ಎಇಎಫ್ ಕೋಶಾಧಿಕಾರಿ

ಕರ್ನಾಟಕದ ಶಾದಿ ಭಾಗ್ಯ ಏನು?
2013 ಅಕ್ಟೋಬರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ತಂದ ಯೋಜನೆ. ಇದು ಎಲ್ಲ ಅಲ್ಪಸಂಖ್ಯಾತ ಸಮುದಾಯದ ಹೆಣ್ಮಕ್ಕಳಿಗೆ ಅನ್ವಯ. ಅವರ ವಿವಾಹದ ವೇಳೆ 50 ಸಾವಿರ ರೂ. ಕೊಡುಗೆ ನೀಡಲಾಗುತ್ತದೆ. ಕರ್ನಾಟಕ ವಕ್ಫ್ ಖಾತೆ ಮೂಲಕ ಹಣ ನೀಡಲಾಗುತ್ತದೆ. ಈ ಪ್ರಯೋಜನ ಪಡೆಯಲು ಮದುಮಗಳಿಗೆ 18 ವರ್ಷ, ಮದುಮಗನಿಗೆ 21 ವರ್ಷ ವಯಸ್ಸಾಗಿರಬೇಕು. ವಾರ್ಷಿಕ ಆದಾಯ 1.5 ಲಕ್ಷ ರೂ. ಒಳಗೆ ಇರಬೇಕು. ಒಂದೇ ಬಾರಿ ಈ ಯೋಜನೆ ಫ‌ಲಾನುಭವಿಯಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next