ಹೊಸದಿಲ್ಲಿ : ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಸರಕಾರ ಐದು ವರ್ಷಗಳ ಹಿಂದೆ ತಾನು ಕೊಟ್ಟಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ; ಅದರ ಸಾಧನೆ ಶೂನ್ಯವಾಗಿದೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಟೀಕಿಸಿದ್ದಾರೆ.
ಐದು ವರ್ಷಗಳ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಭಿವೃದ್ಧಿ ಸಾಧನೆ, ಉದ್ಯೋಗ ಒದಗಣೆ ಮತ್ತು ಜನರ ಖಾತೆಗೆ ಹಣ ಹಾಕುವ ಭರವಸೆಗಳನ್ನು ನೀಡಿತ್ತು; ಆದರೀಗ ಅದು ಭವ್ಯ ದೇವಸ್ಥಾನಗಳು, ಪ್ರತಿಮೆಗಳು ಮತ್ತು ಆಮಿಷಗಳ ಭರವಸೆಯನ್ನು ನೀಡುತ್ತಿದೆ ಎಂದು ಚಿದಂಬರಂ ಹೇಳಿದರು.
ಗುಜರಾತ್‌ನಲ್ಲಿ ಈಚೆಗೆ ಪ್ರಧಾನಿ ಮೋದಿ ಅವರು ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಅತ್ಯುನ್ನತ ಪ್ರತಿಮೆ ಉದ್ಘಾಟಿಸಿರುವುದು ಮತ್ತು ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣದ ಭರವಸೆಯನ್ನು ಜನರಿಗೆ ನೀಡುತ್ತಿರುವುದನ್ನು ದೃಷ್ಟಿಯಲ್ಲಿರಿಸಿಕೊಂಡು ಚಿದಂಬರಂ ಈ ಟೀಕೆಗಳನ್ನು ಮಾಡಿದ್ದಾರೆ.
”ಅಧಿಕಾರಕ್ಕೆ ಬಂದ ಈ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಯಾವ ಸಾಧನೆಯನ್ನೂ ಮಾಡಿಲ್ಲ; ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿಲ್ಲ; ಭವ್ಯ ರಾಮ ಮಂದಿರವನ್ನು ನಿರ್ಮಿಸುವ ಮತ್ತು ಜನರಿಗೆ ಆಮಿಷ ಒಡ್ಡುವ ಭರವಸೆಗಳನ್ನು ಮಾತ್ರವೇ ನೀಡುವಲ್ಲೀಗ ನಿರತವಾಗಿದೆ” ಎಂದು ಚಿದಂಬರಂ ಹೇಳಿದರು.
ಲೋಕಸಭಾ ಚುನಾವಣೆ ಈಗಿನ್ನು ತ್ವರಿತ ಗತಿಯಲ್ಲಿ ಸನ್ನಿಹಿತವಾಗುತ್ತಿರುವಂತೆಯೇ ಚಿದಂಬರಂ ಸಹಿತ ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಸಾಧನೆ ಶೂನ್ಯವೆಂದು ಹೇಳ ತೊಡಗಿದ್ದಾರೆ.