ವಡೋದರ : “ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಭಾರತದ ಸ್ಟಾರ್ಟ್ ಅಪ್ ಐಕಾನ್ ಆಗಿದ್ದಾರೆ. ಕೇವಲ 50,000 ರೂ. ಆದಾಯದ ತಮ್ಮ ಕಂಪೆನಿಯನ್ನು ಅವರು ಕೆಲವೇ ತಿಂಗಳೊಳಗೆ 80 ಕೋಟಿ ಆದಾಯದ ಕಂಪೆನಿಯನ್ನಾಗಿ ಮಾಡಿದ್ದಾರೆ. ಆದರೆ ಅವರು ಅಷ್ಟು ಬೇಗನೆ ಅವರು ತಮ್ಮ ಕಂಪೆನಿಯನ್ನು ಮುಚ್ಚಿದ್ದೇಕೆ ಎಂಬುದು ನನಗೆ ಅರ್ಥವಾಗುವುದಿಲ್ಲ” ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಟಕಿಯಾಡಿದ್ದಾರೆ.
ಪ್ರಕೃತ ಗುಜರಾತ್ ಭೇಟಿಯಲ್ಲಿರುವ ರಾಹುಲ್ ಗಾಂಧಿ ಅವರು ಇಂದು ಮಂಗಳವಾರದ ತಮ್ಮ ಎರಡನೇ ದಿನದ ಕಾರ್ಯಕ್ರಮವನ್ನು ಸಂಕಲ್ಪ ಭೂಮಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಬಳಿಕ ವಡೋದರದ ಭಯಾಲಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು.
“ಸ್ಮಾರ್ಟ್ ಫೋನ್‌ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಆನಂದದಾಯಕ ವಿಷಯವೇ ಹೌದು; ಆದರೆ ಬಹುತೇಕ ಎಲ್ಲ ಸ್ಮಾರ್ಟ್ ಫೋನ್‌ಗಳು ಚೀನ ನಿರ್ಮಿತವಾಗಿರುವುದರಿಂದ ಅವುಗಳ ಲಾಭ ಚೀನಕ್ಕೆ ದೊರಕುವುದೇ ಹೊರತು ನಮ್ಮ ದೇಶಕ್ಕಲ್ಲ; ಆದುದರಿಂದ ನೀವು ವಿದ್ಯಾರ್ಥಿಗಳು ದೇಶೀಯ ಫೋನ್‌ಗಳನ್ನೇ ಖರಿದೀಸಿ’ ಎಂಬ ಬುದ್ದಿವಾದವನ್ನು ರಾಹುಲ್ ವಿದ್ಯಾರ್ಥಿಗಳಿಗೆ ಹೇಳಿದರು.
ಬಿಜೆಪಿಯ ಮಹಿಳಾ ವಿರೋಧಿ ನಿಲುವನ್ನು ಟೀಕಿಸಿದ ರಾಹುಲ್ ಗಾಂಧಿ, “ಮಹಿಳೆ ಮೌನವಾಗಿರುವ ತನಕ ಬಿಜೆಪಿಗೆ ಎಲ್ಲವೂ ಹಿತ; ಆದರೆ ಆಕೆ ಮೌನ ಮುರಿದಾಗ ಬಿಜೆಪಿ ಆಕೆಯನ್ನೇ ಮೌನಿಯನ್ನಾಗಿ ಮಾಡುತ್ತದೆ’ ಎಂದು ಟೀಕಿಸಿದರು.