ನರಗುಂದ: ಹಿಂದೆಲ್ಲ ಓಲಿಂಪಿಕ್ ಕ್ರೀಡಾಕೂಟ ನೋಡಿದಾಗ ಭಾರತ ಅಷ್ಟಿಷ್ಟು ಪ್ರಶಸ್ತಿ ಪಡೆದಿರುವುದನ್ನು ಗಮನಿಸಿದ್ದೇವೆ. ಈ ಬಾರಿ ಅಪ್ರತಿಮ ಸಾಧನೆ ಮಾಡಿದೆ. ಕ್ರೀಡಾಪಟುಗಳಿಗೆ ಖೇಲ್ ಇಂಡಿಯಾ ಮೂಲಕ ಆತ್ಮಸ್ಥೈರ್ಯ ತುಂಬಿದವರು ಪ್ರಧಾನಿ ಮೋದೀಜಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಸ್ಥಳೀಯ ತಾಲೂಕು ಕ್ರೀಡಾಂಗಣದಲ್ಲಿ ನವೋದಯ ಸಂಪಪೂ ಕಾಲೇಜು ಆಶ್ರಯದಲ್ಲಿ ನರಗುಂದ ತಾಲೂಕು ಮಟ್ಟದ ಪಪೂ ಕಾಲೇಜುಗಳ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕ್ರೀಡೆಗೆ ಬಹಳ ಮಹತ್ವವಿದೆ. ಸದೃಢ ದೇಹದಲ್ಲಿ ಸದೃಢ ಮನಸ್ಸಿಗಾಗಿ ಕ್ರೀಡಾ ಮನೋಭಾವನೆ ಪ್ರತಿಯೊಬ್ಬರಲ್ಲಿ ಅಗತ್ಯವಾಗಿದೆ. ಕ್ರೀಡೆಯಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ. ಅವುಗಳನ್ನು ಗುರುತಿಸಿ ಹೊರ ಜಗತ್ತಿಗೆ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಹಿಂದೆ 3 ಕೋಟಿ ರೂ. ವೆಚ್ಚದಲ್ಲಿ ಈ ತಾಲೂಕು ಕ್ರೀಡಾಂಗಣ ನಿರ್ಮಿಸಲಾಗಿದೆ. ಈ ಅಂಗಣದಿಂದ ಸಾಕಷ್ಟು ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ನವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ.ವಿ.ಸೋಮಾಪುರ ಮಾತನಾಡಿ, ಏನಾದರೂ ಸಾಧಿಸಬೇಕಾದರೆ ದೇಹ ಸದೃಢವಾಗಿರಬೇಕು. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಸದೃಢ ಸಮಾಜ ಕಟ್ಟಬೇಕು ಎಂದು ಕರೆ ನೀಡಿದರು.
ಮಾರ್ಕೆಟಿಂಗ್ ಕಮ್ಯುನಿಕೇಶನ್ ಮತ್ತು ಅಡ್ವಟೈಜಿಂಗ್ ಲಿಮಿಟೆಡ್ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿದರು. ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ್, ಉಪಾಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಗುರಪ್ಪ ಆದೆಪ್ಪನವರ, ಮಲ್ಲಪ್ಪ ಮೇಟಿ, ನವೋದಯ ಸಂಸ್ಥೆ ಚೇರಮನ್ ವಿ.ಕೆ. ಗುಡಿಸಾಗರ, ಬಿ.ಬಿ. ಐನಾಪುರ, ಚಂದ್ರು ದಂಡಿನ, ಡಿ.ಆರ್.ಪಾಟೀಲ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎನ್. ಆರ್. ನಿಡಗುಂದಿ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಜಿ.ವೈ. ಬಾರಕೇರ ಮುಂತಾದವರಿದ್ದರು. ಪ್ರಾಚಾರ್ಯ ಆರ್.ಎಸ್. ಪವಾರ ಸ್ವಾಗತಿಸಿದರು. ಎಚ್. ಎಂ. ಕುಂಬಾರ ನಿರೂಪಿಸಿದರು. ಸಿ.ಬೆಳಗಲ್ಲ ವಂದಿಸಿದರು.