Advertisement

ತಳವಾರ ಸಮುದಾಯ ಎಸ್ಸಿಗೆ ಸೇರಿಸಲು ಮೋದಿ ವಿಫ‌ಲ

08:51 PM Apr 13, 2019 | Team Udayavani |

ಕೊಳ್ಳೇಗಾಲ: ಪ್ರಧಾನಿ ನರೇಂದ್ರ ಮೋದಿ ಅವರು ಪರಿವಾರ ಮತ್ತು ತಳವಾರ ಸಮಾಜದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ಸಂಪೂರ್ಣವಾಗಿ ವಿಫ‌ಲರಾಗಿದ್ದಾರೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಹಾಗೂ ಸಂಸದ ಆರ್‌.ಧ್ರುವನಾರಾಯಣ ಆರೋಪಿಸಿದರು.

Advertisement

ತಾಲೂಕಿನ ಪಾಳ್ಯ ಜಿಪಂ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಮತದಾರರ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಮತಗಳಿಸುವ ಸಲುವಾಗಿ ಪರಿವಾರ ಮತ್ತು ತಳವಾರ ಸಮಾಜದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ ಎಂದು ಘೋಷಣೆ ಮಾಡಿದರೆ ವಿನಃ ಅದನ್ನು ಅನುಮೋದನೆ ಮಾಡದೆ ಸಮಾಜವನ್ನು ಸಂಪೂರ್ಣ ತಿರಸ್ಕಾರ ಮಾಡಿದ್ದಾರೆಂದು ದೂರಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಆಡಳಿತದ ಸರ್ಕಾರದಲ್ಲಿ ಪರಿವಾರ ಮತ್ತು ತಳವಾರ ಸಮಾಜದವರನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಶಿಫಾರಸಿನ ಬಳಿಕ ಲೋಕಸಭೆಯಲ್ಲಿ ಹಲವಾರು ಸಭೆಗಳು ನಡೆದರೂ ಮೀಸಲಾತಿ ಬಗ್ಗೆ ಪ್ರಸ್ತಾಪಿಸದೆ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ದೂರಿದರು.

2019 ಏ.18 ರಂದು ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವ ಪಕ್ಷಕ್ಕೆ ಮತ ನೀಡಿದರೆ ಉತ್ತಮ ಕೆಲಸವಾಗುತ್ತದೆ ಎಂದು ಚಿಂತನೆ ಮಾಡಿ ಸದಾ ಬಡವರನ್ನು ರಕ್ಷಣೆ ಮಾಡುತ್ತಿರುವ ಕಾಂಗ್ರೆಸ್‌ಗೆ ಮತ ನೀಡಿ ಎಂದು ಹೇಳಿದರು.

ಹಸಿರುಕ್ರಾಂತಿ: ಇಡೀ ದೇಶದಲ್ಲಿ ರೈತರು ಬೆಳೆ ಬೆಳೆದು ಸ್ವಾವಲಂಬಿಗಳಾಗುವಂತೆ ಮಾಡಲು ಕಾಂಗ್ರೆಸ್‌ನ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯ. ದೇಶದಲ್ಲಿ 2 ವರ್ಷ ಮಳೆ ಬಾರದಿದ್ದರೂ ಆಹಾರ ಪದಾರ್ಥ ನೀಡಲು ಸಂಗ್ರಹ ಮಾಡಿದೆ ಎಂದು ಹೇಳಿದರು.

Advertisement

ಸಾಕ್ಷರತೆ: ಕಾಂಗ್ರೆಸ್‌ 60 ವರ್ಷಗಳ ಕಾಲ ಆಳ್ವಿಕೆ ಮಾಡಿ ಸಾಕ್ಷರತೆಗೆ ಆದ್ಯತೆ ನೀಡಿತ್ತು. ಕಾಂಗ್ರೆಸ್‌ ಆಡಳಿತದ ವೇಳೆ ಸಾಕ್ಷರತೆ ಪ್ರಮಾಣ ಶೇ.75 ಇತ್ತು. ಮೋದಿ ನೇತೃತ್ವದ ಸರ್ಕಾರ 5 ವರ್ಷಗಳ ಕಾಲ ಆಡಳಿತ ನಡೆಸಿ ಸಾಕ್ಷರತೆ ಪ್ರಮಾಣ ಶೇ.1 ಹೆಚ್ಚಳ ಮಾಡಿದ್ದು ಈಗ, ಶೇ.76 ಆಗಿದೆ. ಇದೆ ಬಿಜೆಪಿ ಸಾಧನೆ ಎಂದು ವ್ಯಂಗ್ಯವಾಡಿದರು.

ಪ್ರಸಾದ್‌ ವಿರುದ್ಧ ವಾಗ್ಧಾಳಿ: ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್‌ ಪ್ರಸಾದ ಅವರು ಮತಯಾಚನೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲಿಸಿದೆ. ಟಿ.ನರಸೀಪುರದಲ್ಲಿ ಮಾಜಿ ಸಚಿವ ಎಚ್‌ಸಿ ಮಹದೇವಪ್ಪ ಅವರನ್ನು ಸೋಲಿಸಿದೆ. ಲೋಕಸಭಾ ಚುನಾವಣೆಯಲ್ಲಿ ಧ್ರುವನಾರಾಯಣ ಅವರನ್ನು ಸೋಲಿಸುವ ಸಲುವಾಗಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿರುವ ಪ್ರಸಾದ್‌ ಅವರು ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸಿದೆ ಚಾಮುಂಡೇಶ್ವರಿ ಮತ್ತು ಟಿ. ನರಸೀಪುರದಲ್ಲಿ ಗೆದ್ದಿರುವುದು ಜೆಡಿಎಸ್‌ ಅಭ್ಯರ್ಥಿಗಳೇ ಹೊರತು ಬಿಜೆಪಿ ಅಭ್ಯರ್ಥಿಗಳಲ್ಲ ಎಂದು ಪ್ರಸಾದ್‌ ವಿರುದ್ಧ ವಾಗ್ಧಾಳಿ ನಡೆಸಿದರು.

ಮತಕ್ಕೆ ಮನವಿ: ಕಳೆದ 10 ವರ್ಷಗಳಿಂದ ಕ್ಷೇತ್ರ ವ್ಯಾಪ್ತಿ ರಸ್ತೆ ಶಾಲೆ ವಿವಿಧ ಸಮುದಾಯದ ಸಮುದಾಯ ಭವನ ಸೇರಿ ಅನೇಕ ಅಭಿವೃದ್ಧಿ ಕೆಲಸ ಮಾಡಿ ಕ್ಷೇತ್ರದ ಮತದಾರರಿಗೆ ಕೀರ್ತಿ ತರುವ ರೀತಿ ನಡೆದುಕೊಂಡಿದ್ದು 3ನೇ ಬಾರಿಗೆ ಹಸ್ತದ ಗುರುತಿಗೆ ಮತನೀಡಿ ಗೇಲುವು ತಂದುಕೊಟ್ಟಲ್ಲಿ ಮತ್ತಷ್ಟು ಕೆಲಸವನ್ನು ಕ್ಷೇತ್ರದಲ್ಲಿ ಮಾಡಲು ಅನುಕೂಲವಾಗುತ್ತದೆಂದರು.

ಹನೂರು ಶಾಸಕ ಆರ್‌.ನರೇಂದ್ರ, ಪ್ರಧಾನಿ ನರೇಂದ್ರಮೋದಿ ಅವರು ರೈತರ ಸಾಲಮನ್ನಾ ಮಾಡದೆ ರೈತರನ್ನು ಕಡೆಗಣಿಸಿದ್ದಾರೆ. 5 ವರ್ಷದ ಅವಧಿಯ ಕೊನೆಯಲ್ಲಿ ರೈತರಿಗೆ 6000 ರೂ., ನೀಡುವ ಘೋಷಣೆ ಮಾಡಿ ರೈತರನ್ನು ಭಿಕ್ಷುಕರಂತೆ ಕಾಣುತ್ತಿದ್ದಾರೆಂದು ಹೇಳಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ರೈತರ ಪರ ಯಾವುದೇ ಕಾಳಜಿ ತೋರಿಸಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬಡವರಿಗೆ ವಾರ್ಷಿಕ 72 ಸಾವಿರ ರೂ., ಘೋಷಣೆ ಮಾಡಿದ್ದು ಸರ್ಕಾರವನ್ನು ಅಧಿಕಾರಕ್ಕೆ ತಂದು ಬಡತನ ನಿರ್ಮೂಲನೆಗೆ ಸಹಕಾರಿಯಾಗಬೇಕೆಂದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ, ಜಿಲ್ಲಾ ಕಾಂಗ್ರೆಸ್‌ ಎಸ್ಟಿ ಘಟಕದ ಅಧ್ಯಕ್ಷ ಕೃಷ್ಣ, ಜಿಲ್ಲಾ ಯುವ ಕಾಂಗ್ರೆಸ್‌ನ ಚೇತನ್‌, ತಾಪಂ ಸದಸ್ಯರಾದ ರಾಜು, ಅರುಣ್‌ಕುಮಾರ್‌, ಪಾಳ್ಯ ಗ್ರಾಪಂ ಅಧ್ಯಕ್ಷೆ ನೀಲಮ್ಮ, ಚಿಕ್ಕಲೂರು ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಹನೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಕೆಂಪಯ್ಯ, ಮುಖಂಡರಾದ ಜಗದೀಶ್‌ನಾಯಕ್‌, ಮಲ್ಲನಾಯಕ, ಸೀಗನಾಯಕ, ರಂಗಯ್ಯ, ರಾಚಪ್ಪ, ಕೊಪ್ಪಳಿ ಮಹದೇವನಾಯಕ, ದೇವರಾಜು, ಚಲುವರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next