Advertisement

ಕೂಡಲೇ ಕದನ ವಿರಾಮ;  ರಷ್ಯಾಕ್ಕೆ ಭಾರತ-ಡೆನ್ಮಾರ್ಕ್‌ ಆಗ್ರಹ

09:46 AM May 04, 2022 | Team Udayavani |

ಕೋಪನ್‌ಹೇಗನ್‌: ರಷ್ಯಾ ಮತ್ತು ಉಕ್ರೇನ್‌ ನಡುವಣ ಯುದ್ಧ ಈ ಕೂಡಲೇ ನಿಲ್ಲಲಿ, ಎರಡೂ ದೇಶಗಳು ಕದನ ವಿರಾಮ ಘೋಷಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಡೆನ್ಮಾರ್ಕ್‌ ಪ್ರಧಾನಿ ಮೆಟ್ಟಿ ಫೆಡೆರಿಕ್ಸನ್‌ ಒತ್ತಾಯಿಸಿದ್ದಾರೆ.

Advertisement

ಪ್ರಧಾನಿ ಮೋದಿ ಅವರು ಮೂರು ದಿನಗಳ ಐರೋಪ್ಯ ದೇಶಗಳ ಪ್ರವಾಸ ದಲ್ಲಿದ್ದು, ಜರ್ಮನಿ ಭೇಟಿ ಮುಗಿಸಿ ಮಂಗಳವಾರ ಡೆನ್ಮಾರ್ಕ್‌ಗೆ ತೆರಳಿದ್ದಾರೆ. ಕೋಪನ್‌ಹೇಗನ್‌ಗೆ ಬಂದಿಳಿದ ಪ್ರಧಾನಿ ಮೋದಿಯವರನ್ನು ಅಲ್ಲಿನ ಪ್ರಧಾನಿ ಫೆಡೆರಿಕ್ಸನ್‌ ಸ್ವಾಗತಿಸಿದರು. ಬಳಿಕ ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದು, ರಷ್ಯಾ-ಉಕ್ರೇನ್‌ ಯುದ್ಧದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಉಭಯ ದೇಶಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ನಿವಾರಿಸಿಕೊಳ್ಳಲಿ ಎಂದು ಪ್ರಧಾನಿ ಮೋದಿ ಹೇಳಿದರೆ, ಯುದ್ಧ ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಮೇಲೆ ಭಾರತ ಒತ್ತಡ ಹೇರಲಿ ಎಂದು ಡೆನ್ಮಾರ್ಕ್‌ ಪ್ರಧಾನಿ ಒತ್ತಾಯಿಸಿದರು.

ಹಸುರು ಸಹಭಾಗಿತ್ವ
ಭಾರತ ಮತ್ತು ಡೆನ್ಮಾರ್ಕ್‌ ಪ್ರಧಾನಿಗಳು ಹಾಗೂ ಉಭಯ ದೇಶಗಳ ಪ್ರತಿನಿಧಿಗಳ ನಡುವೆ ಮಾತುಕತೆ ನಡೆಯಿತು. ಈ ಸಂದರ್ಭದಲ್ಲಿ ಇಂಡೋ-ಫೆಸಿಫಿಕ್‌ ವಲಯದಲ್ಲಿ ಶಾಂತಿಯ ಬಗ್ಗೆಯೂ ಚರ್ಚಿಸಲಾಯಿತು. ಕೌಶಲ ಅಭಿವೃದ್ಧಿ, ಹವಾಮಾನ, ನವೀಕರಿಸಬಹುದಾದ ಇಂಧನ, ಆರ್ಕ್‌ಟಿಕ್‌, ಪಿ2ಪಿ ಒಪ್ಪಂದಗಳ ಬಗ್ಗೆ ಚರ್ಚೆ ನಡೆಸಲಾಯಿತು. ಭಾರತದ ಮೂಲ ಸೌಕರ್ಯ ಮತ್ತು ಹಸುರು ಕೈಗಾರಿಕೆ ಗಳಲ್ಲಿ ಹೂಡಿಕೆ ಮಾಡಲು ಸಾಕಷ್ಟು ಅವಕಾಶವಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇಂದು ಇಂಡಿಯಾ- ನಾರ್ಡಿಕ್‌ ಶೃಂಗ
ಬುಧವಾರ ಭಾರತ ಮತ್ತು ನಾರ್ಡಿಕ್‌ ದೇಶಗಳ ನಡುವೆ ಶೃಂಗ ಸಭೆ ನಡೆಯಲಿದೆ. ಇದರಲ್ಲಿ ಡೆನ್ಮಾರ್ಕ್‌ ಜತೆಗೆ ಐಯರ್ಲೆಂಡ್‌, ಫಿನ್ಲಂಡ್‌, ಸ್ವೀಡನ್‌ ಮತ್ತು ನಾರ್ವೆಗಳ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಭಾರತವು ಈ ದೇಶಗಳೊಂದಿಗೆ ಸುಮಾರು 500 ಕೋಟಿ ಡಾಲರ್‌ಗಳಷ್ಟು ವ್ಯಾಪಾರ ವಹಿವಾಟು ಹೊಂದಿದೆ. ಶೃಂಗ ಸಭೆಯ ಜತೆಯಲ್ಲೇ ಡೆನ್ಮಾರ್ಕ್‌ ರಾಣಿ ಕ್ವೀನ್‌ ಮಾರ್ಗರೆಟ್‌ 2 ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಲಿದ್ದಾರೆ. ಬಳಿಕ ಫ್ರಾನ್ಸ್‌ಗೆ ತೆರಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next