ಭುವನೇಶ್ವರ್/ನವದೆಹಲಿ: ಒಡಿಶಾದ ಪುರಿ ಹಾಗೂ ಪಶ್ಚಿಮ ಬಂಗಾಳದ ಹೌರಾ ನಡುವೆ ಸಂಪರ್ಕ ಕಲ್ಪಿಸುವ ರಾಜ್ಯದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಸಿರು ನಿಶಾನೆ ತೋರಿದ್ದಾರೆ.ಇದೇ ವೇಳೆ ರಾಜ್ಯದಲ್ಲಿ 8,000 ಕೋಟಿ ರೂ.ಮೌಲ್ಯದ ರೈಲ್ವೆ ಯೋಜನೆಗಳನ್ನೂ ಉದ್ಘಾಟಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಭಾರತ ತನ್ನದೇ ಸ್ವಂತ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವುದು ಮಾತ್ರವಲ್ಲದೇ, ರಾಷ್ಟ್ರದ ಎಲ್ಲೆಡೆ ಅವುಗಳನ್ನು ತಲುಪಿಸುತ್ತಿದೆ. ರಾಜ್ಯದ ಮೊದಲ ವಂದೇಭಾರತ್, ಪುರಿ ಹಾಗೂ ಹೌರಾ ನಡುವಿನ ಧಾರ್ಮಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ ಸಂಬಂಧವನ್ನು ಬಲಪಡಿಸಲಿದೆ ಎಂದಿದ್ದಾರೆ.
ಎಕ್ಸ್ಪೋಗೆ ಚಾಲನೆ:
ಇದೇ ವೇಳೆ, ನವದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಇಂಟರ್ನ್ಯಾಷನಲ್ ಮ್ಯೂಸಿಯಂ ಎಕ್ಸ್ಪೋ-2023ಗೆ ಮೋದಿ ಚಾಲನೆ ನೀಡಿದರು. ಈ ವೇಳೆ ವಿಶ್ವರಾಷ್ಟ್ರಗಳ ನಡುವೆ ಭಾರತದ ಪ್ರತಿಷ್ಠೆ ಹೆಚ್ಚುತ್ತಿದ್ದು, ಸಮೃದ್ಧ ಭಾರತದಿಂದ ಕಳುವಾಗಿದ್ದ ವಿದೇಶಗಳ ಸ್ವಾಧೀನದಲ್ಲಿರುವ ಭಾರತದ ಪಾರಂಪರಿಕ ಕಲಾಕೃತಿಗಳನ್ನು ವಿದೇಶಗಳು ಹಿಂದಿರುಗಿಸುತ್ತಿವೆ ಇದು ಶ್ಲಾಘನೀಯ ವಿಚಾರವೆಂದು ಮೋದಿ ಪ್ರತಿಪಾದಿಸಿದ್ದಾರೆ.