Advertisement

Union Budget 2024: ಮುದ್ರಾ ಸಾಲ ಮಿತಿ 20 ಲಕ್ಷ ರೂ.ಗಳಿಗೆ ಏರಿಕೆ

08:21 PM Jul 23, 2024 | Team Udayavani |

ಹೊಸದಿಲ್ಲಿ: ದೇಶದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆ  (ಪಿಎಂಎಂವೈ)ಅನ್ವಯ ಪಡೆಯುವ ಸಾಲದ ಮಿತಿಯನ್ನು ಪರಿಷ್ಕರಿಸಲಾಗಿದೆ. ಮುದ್ರಾದ “ತರುಣ ವರ್ಗ’ದ ಅನ್ವಯ ನೀಡಲಾಗುವ ಸಾಲದ ಮಿತಿಯನ್ನು 10ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಉದ್ಯಮಿಗಳಿಗೆ ಕೇಂದ್ರ ಬಜೆಟ್‌ನಲ್ಲಿ ಸಿಹಿ ನೀಡಲಾಗಿದೆ.

Advertisement

ಮುದ್ರಾ ಯೋಜನೆಯಲ್ಲಿ 3 ವರ್ಗದಲ್ಲಿ (ಕ್ಯಾಟಗರಿಯಲ್ಲಿ) ಸಾಲಗಳನ್ನು ನೀಡಲಾಗುತ್ತದೆ. ಈ ಪೈಕಿ ತರುಣ ವರ್ಗದ ಅನ್ವಯ ನೀಡಲಾಗುತ್ತಿದ್ದ ಸಾಲದ ಮಿತಿ ಈ ಹಿಂದೆ 5ರಿಂದ 10 ಲಕ್ಷ ರೂ.ಗಳ ವರೆಗಿತ್ತು. ಇದೀಗ ಇದೇ ವರ್ಗದಲ್ಲಿ ಈ ಹಿಂದೆ ಸಾಲ ಪಡೆದು, ಯಸ್ವಿಯಾಗಿ ಮರುಪಾವತಿಸಿದ ಉದ್ಯಮಿಗಳು ಹೊಸದಾಗಿ 20 ಲಕ್ಷ ರೂ.ಗಳವರೆಗೆ ಸಾಲ ಪಡೆಯಬಹುದಾಗಿದೆ. ಈ ಮೂಲಕ ಉದ್ಯಮ ವಿಸ್ತರಣೆಗೆ ಕೇಂದ್ರದಿಂದ ಹೆಚ್ಚಿನ ಬೆಂಬಲ ಸಿಕ್ಕಂತಾಗಿದೆ. ಉಳಿದಂತೆ ಶಿಶು ಹಾಗೂ ಕಿಶೋರ ವರ್ಗದ ಸಾಲದ ಮಿತಿಗಳು ಹಾಗೆಯೇ ಮುಂದುವರಿದಿವೆ. ಶಿಶು ವರ್ಗದಲ್ಲಿ 50,000ರೂ.ಗಳವರೆಗೆ ಸಾಲ ಪಡೆಯಬಹುದಾಗಿದ್ದು, ಕಿಶೋರ ವರ್ಗದಲ್ಲಿ 50 ಸಾವಿರದಿಂದ 5 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಪಿಎಂಎಂವೈ ಅನ್ವಯ ಬ್ಯಾಂಕುಗಳು, ಬ್ಯಾಂಕಿಂಗ್‌ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್ಸಿಎಸ್‌), ಸಣ್ಣ ಹಣಕಾಸು ಸಂಸ್ಥೆಗಳು (ಎಂಎಫ್ಐಎಸ್‌) ಹಾಗೂ ಇತರ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಏನಿದು ಮುದ್ರಾ ಯೋಜನೆ ?: ಕಾರ್ಪೋರೇಟ್‌ ಅಲ್ಲದ ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮಉದ್ಯಮಿಗಳಿಗೆ ಮೇಲಾಧಾರ ರಹಿತ ಸಾಲವನ್ನು ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ 2015ರ ಏಪ್ರಿಲ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದರು. ಕಡಿಮೆ ಬಡ್ಡಿದರದಲ್ಲಿ ದೊರೆಯುವ ಈ ಸಾಲ ಸೌಲಭ್ಯದಿಂದ ಹೊಸದಾಗಿ ಉದ್ಯಮ ಆರಂಭಿಸಲು ಅಥವಾ ಅಸ್ತಿತ್ವದಲ್ಲಿರುವ ಉದ್ಯಮದ ವಿಸ್ತರಣೆಗೆ ಅನುಕೂಲವಾಗಲಿದೆ.

 ಮುದ್ರಾದಿಂದ ಮಹಿಳಾ ಸಬಲೀಕರಣ: 2024ರ ಫೆಬ್ರವರಿವರೆಗೆ ಮುದ್ರಾ ಯೋಜನೆ ಅನ್ವಯ 22.5 ಲಕ್ಷ ಕೋಟಿ ರೂ.ಮೊತ್ತದ ಒಟ್ಟು 43 ಕೋಟಿ ಸಾಲಗಳನ್ನು ನೀಡಲಾಗಿದೆ. ಈ ಪೈಕಿ 30 ಕೋಟಿ ಸಾಲಗಳನ್ನು ಮಹಿಳೆಯರಿಗೇ ನೀಡಲಾಗಿದೆ. ಮಹಿಳೆಯರು ಹೊಸದಾಗಿ ಉದ್ಯಮಗಳನ್ನು ಆರಂಭಿಸಲು ಅಗತ್ಯವಿರುವ ಸಾಲ ಸೌಲಭ್ಯ ಒದಗಿಸುವ ಮೂಲಕ ಮಹಿಳಾ ಉದ್ಯಮಿಗಳನ್ನು ಸೃಷ್ಟಿಸುವುದರ ಜತೆಯೆಲ್ಲೇ ಉದ್ಯೋಗ ಅವಕಾಶಗಳನ್ನೂ ಮುದ್ರಾ ಯೋಜನೆ ಮೂಲಕ ಸೃಷ್ಟಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next