Advertisement

ಆಸ್ಟ್ರಿಯಾದಲ್ಲೂ ಮೋದಿ ಶಾಂತಿ ಮಂತ್ರ: ಇದು ಯುದ್ಧದ ಸಮಯವಲ್ಲ: ಮೋದಿ ಪ್ರತಿಪಾದನೆ

11:09 PM Jul 10, 2024 | Team Udayavani |

ವಿಯೆನ್ನಾ: “ಬಾಂಬ್‌, ಗನ್‌ ಮತ್ತು ಬುಲೆಟ್‌ಗಳ  ಮಧ್ಯೆ ಶಾಂತಿ ಮಾತುಕತೆ ಯಶಸ್ವಿಯಾಗುವುದಿಲ್ಲ” ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ಗೆ ಕಿವಿಮಾತು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಆಸ್ಟ್ರಿಯಾ ನೆಲದಲ್ಲೂ  ಅದೇ ಶಾಂತಿ ಮಂತ್ರವನ್ನು ಜಪಿಸಿದ್ದಾರೆ. ರಷ್ಯಾ ಪ್ರವಾಸ ಬಳಿಕ ಐತಿಹಾಸಿಕ ಆಸ್ಟ್ರಿಯಾ ಪ್ರವಾಸ ಕೈಗೊಂಡಿರುವ ಮೋದಿ ಅವರು, “ಇದು ಯುದ್ಧದ ಸಮಯವಲ್ಲ’ ಎಂದು ಒತ್ತಿ ಹೇಳಿದರು.  ಉಕ್ರೇನ್‌-ರಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ನಿಲುವಿಗೆ ಆಸ್ಟ್ರಿಯಾ ತನ್ನ ಬೆಂಬಲ ನೀಡಿದೆ.

Advertisement

ಆಸ್ಟ್ರಿಯಾ ಚಾನ್ಸಲರ್‌ ಕಾರ್ಲ್ ನೆಹಮ್ಮರ್‌ ಅವರ ಜತೆಗೆ ಮಾತುಕತೆ ನಡೆಸಿದ ಬಳಿಕ, ಬುಧವಾರ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ  ಮೋದಿ ಅವರು, “”ಸಮಸ್ಯೆಗಳಿಗೆ ಯುದ್ಧಭೂಮಿಯಲ್ಲಿ ನಾವು ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲೆಯಾಗಲಿ, ಮುಗ್ಧರನ್ನು ಹತ್ಯೆ ಮಾಡುವುದು ಸ್ವೀಕಾರರ್ಹವಲ್ಲ. ಭಾರತ ಮತ್ತು ಆಸ್ಟ್ರಿಯಾ ಮಾತುಕತೆಗೆ ಹೆಚ್ಚು ಮಹತ್ವ ನೀಡುತ್ತವೆ ಮತ್ತು ಅಗತ್ಯಬಿದ್ದರೆ ಎಲ್ಲ ನೆರವು ನೀಡಲು ಸಿದ್ಧ” ಎಂದು ಉಕ್ರೇನ್‌-ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಹೇಳಿದರು.

ಐತಿಹಾಸಿಕ ಆಸ್ಟ್ರಿಯಾ ಪ್ರವಾಸ: 41 ವರ್ಷಗಳ ಬಳಿಕ ಭಾರತದ ಪ್ರಧಾನಿ ಆಸ್ಟ್ರಿಯಾಗೆ ಭೇಟಿ ನೀಡುತ್ತಿದ್ದಾರೆ. ಹಾಗಾಗಿ, ಇದು ನನಗೆ ಐತಿಹಾಸಿಕ ಪ್ರವಾಸವಾಗಿದೆ. ನೆಹಮ್ಮರ್‌ ಮತ್ತು ನಾನು ಫ‌ಲಪ್ರದ ಸಭೆಗಳನ್ನು ನಡೆಸಿದ್ದೇವೆ. ನಾವಿಬ್ಬರೂ ಉಗ್ರವಾದವನ್ನು ಖಂಡಿಸುತ್ತೇವೆ. ಯಾವುದೇ ರೂಪದ ಭಯೋತ್ಪಾದನೆಯನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.  1983ರಲ್ಲಿ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಆಸ್ಟ್ರಿಯಾಕ್ಕೆ ಭೇಟಿ ನೀಡಿದ್ದರು. ಆ ಬಳಿಕ ನರೇಂದ್ರ ಮೋದಿ ಅವರು ಆಸ್ಟ್ರಿಯಾಕ್ಕೆ ಭೇಟಿ ನೀಡಿದ್ದಾರೆ.

ಆಸ್ಟ್ರಿಯಾ ಚಾನ್ಸಲರ್‌ ಶ್ಲಾಘನೆ: ಇದೇ ವೇಳೆ ಮಾತನಾಡಿದ ಆಸ್ಟ್ರಿಯಾ ಚಾನ್ಸಲರ್‌ ಕಾರ್ಲ್ ನೆಹಮ್ಮರ್‌, ಭಾರತ-ಆಸ್ಟ್ರಿಯಾ ಅತ್ಯುತ್ತಮ ಬಾಂಧವ್ಯ ಹೊಂದಿ ದ್ದು, ಈ ನಂಬಿಕೆ 1950ರಿಂದಲೇ ಆರಂಭವಾಗಿದೆ. ನಾವಿಬ್ಬಕರೂ ಉಕ್ರೇನ್‌-ರಷ್ಯಾ ಸಂಘರ್ಷದ ಬಗ್ಗೆ ಮಾತನಾಡಿದ್ದೇವೆ. ನನಗೆ ಭಾರತದ ಮೌಲ್ಯಮಾಪನವನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ಅರ್ಥಮಾಡಿಕೊಳ್ಳುವುದು ಹಾಗೂ ಯುರೋಪ್‌ನ ಕಾಳಜಿ ಮತ್ತು ಚಿಂತೆಗಳೊಂದಿಗೆ ಭಾರತವನ್ನು ಪರಿಚಿತಗೊಳಿಸುವುದು ವಿಶೇಷವಾಗಿ ಮುಖ್ಯವಾಗಿದೆ ಎಂದು ಹೇಳಿದರು.

ಎಐ, ಸ್ಟಾರ್ಟ್‌ಅಪ್‌ ಚರ್ಚೆ: ಪ್ರಧಾನಿ ಮೋದಿ ಮತ್ತು ಚಾನ್ಸಲರ್‌ ನೆಹಮ್ಮರ್‌ ಅವರು ಎಐ, ಸ್ಟಾರ್ಟ್‌ಅಪ್‌, ಹಸಿರು ಇಂಧನ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

Advertisement

ವಿಯೆನ್ನಾದಲ್ಲಿ ಮೋದಿಗೆ ವಂದೆ ಮಾತರಂ ಸ್ವಾಗತ!

ಮಂಗಳವಾರ ಮೋದಿ ಅವರು ವಿಯೆನ್ನಾಗಿ ಆಗಮಿಸುತ್ತಿದ್ದಂತೆ ಆಸ್ಟ್ರಿಯಾ ವಿದೇಶಾಂಗ ಸಚಿವರು ಹಾರ್ದಿಕವಾಗಿ ಬರಮಾಡಿಕೊಂಡರು. ಬಳಿಕ ಮೋದಿಗೆ ವಂದೆ ಮಾತರಂ ಸಂಗೀತದ ಮೂಲಕ ಸ್ವಾಗತ ಕೋರಲಾಯಿತು. ಭಾರತದ ಸಾಂಸ್ಕೃತಿಕ ರಾಯಭಾರಿ ವಿಜಯ್‌ ಉಪಾಧ್ಯಾಯ ಅವರು ನೇತೃತ್ವದ ಆಸ್ಟ್ರಿಯಾ ಕಲಾವಿದರು ವಂದೆ ಮಾತರಂ ಗೀತೆಯನ್ನು ನುಡಿಸಿದರು. ಈ ಕುರಿತು ಟ್ವೀಟ್‌  ಮಾಡಿದ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತರ ಪ್ರದೇಶ ಮೂಲದ ಉಪಾಧ್ಯಾಯ, ವಿಯೆನ್ನಾ ಯುನಿರ್ಸಿಟಿಯ ಫಿಲ್ಹಾರ್ಮೋನಿಕ್‌ ನಿರ್ದೇಶಕರಾಗಿದ್ದು, ಇಂಡಿಯಾ ನ್ಯಾಷನಲ್‌ ಯೂಥ್‌ ಆರ್ಕೆಸ್ಟ್ರಾ ಸ್ಥಾಪಿಸಿದ್ದಾರೆ. ಅವರು ಲಕ್ನೋ ಮೂಲದವರು. ಬೆಂಗಳೂರಿನ ರಿಕಿ ಕೇಜ್‌ ಅವರು ಅದಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next