Advertisement

ಸೈಬರ್‌ ಕ್ರೈಂ ವಿರುದ್ಧ ಸಮರಕ್ಕೆ ಮೋದಿ ಕರೆ

06:20 AM Nov 24, 2017 | |

ಹೊಸದಿಲ್ಲಿ: ಅಂತರ್ಜಾಲವು ವಿವಿಧ ಬಳಕೆದಾರರಿಗೆ ನೀಡುವ ಮುಕ್ತ ಪ್ರವೇಶದ ದುರ್ಬಳಕೆ ಹೆಚ್ಚಾಗುತ್ತಿದ್ದು ಇದರಿಂದಾಗುವ ದುಷ್ಪರಿಣಾಮಗಳನ್ನು ಹತ್ತಿಕ್ಕಲು ವಿಶ್ವದ ನಾನಾ ದೇಶಗಳ ಸೈಬರ್‌ ರಕ್ಷಣಾ ಸಿಬ್ಬಂದಿಯನ್ನು ಅತ್ಯಾಧುನಿಕವಾಗಿ ಸಜ್ಜು ಗೊಳಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. 

Advertisement

ಗುರುವಾರ, ಇಲ್ಲಿ ನಡೆದ “ಗ್ಲೋಬಲ್‌ ಕಾನ್ಫರೆನ್ಸ್‌ ಆನ್‌ ಸೈಬರ್‌ ಸ್ಪೇಸ್‌’ ಸಮಾವೇಶದಲ್ಲಿ ಮಾತನಾಡಿದ ಅವರು, ಡಿಜಿಟಲ್‌ ವಲಯ ಉಗ್ರರ ಆಟದ ಮೈದಾನವಾಗುತ್ತಿದೆ. ಅಂತರ್ಜಾಲದಲ್ಲಿ ಹೆಚ್ಚುತ್ತಿರುವ ವೆಬ್‌ಸೈಟ್‌ ಹ್ಯಾಕಿಂಗ್‌, ವೈರಸ್‌ ಸಹಿತ ನಾನಾ ವಿಧದ ಸೈಬರ್‌  ದಾಳಿಗಳು ಹಾಗೂ ಇಂಟರ್ನೆಟ್‌  ಮೂಲಕ ಭಯೋತ್ಪಾದನೆ, ಮೂಲಭೂತ ವಾದವನ್ನು ಹರಡುತ್ತಿರುವರಿಗೆ ಕಡಿವಾಣ ಹಾಕಬೇಕು. ಸೈಬರ್‌  ಸುರಕ್ಷೆ ಎಂಬುದು ನಮ್ಮ ಇಂದಿನ ಡಿಜಿಟಲ್‌ ಜೀವನದ ಅವಿಭಾಜ್ಯ ಭಾಗವಾಗಬೇಕಿದೆ. ಸೈಬರ್‌ ಕ್ರಿಮಿನಲ್‌ಗ‌ಳು ಇತ್ತೀಚೆಗೆ ಹೆಚ್ಚಿನ ಜಾಣ್ಮೆಯುಳ್ಳ ಕಿರಾತಕ ಬುದ್ಧಿ ತೋರುತ್ತಿದ್ದು, ಇಂಥವರ ಆಟಕ್ಕೆ ಕಡಿವಾಣ ಹಾಕಲು ನಾವು ನಮ್ಮ ಸೈಬರ್‌ ಸೈನಿಕರನ್ನು ಅತ್ಯಂತ ಉಚ್ಛಾಯ ಮಟ್ಟದಲ್ಲಿ ಹುರಿಗೊಳಿಸಬೇಕಿದೆ ಎಂದರು.

ಡಿಜಿಟಲೀಕರಣದ ಹೆಗ್ಗಳಿಕೆ: ಡಿಜಿಟಲೀಕ ರಣದಿಂದ ಪಾರದರ್ಶಕತೆ ಸಾಧ್ಯ ಎಂದ ಪ್ರಧಾನಿ, ಇದಕ್ಕೆ ಉದಾಹರಣೆಯಾಗಿ, ತಮ್ಮ ಸರಕಾರದ ಜನಧನ ಬ್ಯಾಂಕ್‌ ಖಾತೆಗೆ ಫ‌ಲಾನುಭವಿಗಳ ಮೊಬೈಲ್‌ ಸಂಖ್ಯೆ, ಆಧಾರ್‌ ಜೋಡಿಸುವ ಮೂಲಕ ಸಬ್ಸಿಡಿ ಮೊತ್ತವನ್ನು ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಸುಮಾರು 10 ಬಿಲಿಯನ್‌ ಡಾಲರ್‌ಗಳಷ್ಟು ಸಬ್ಸಿಡಿ ಉಳಿತಾಯವಾಗಿದೆ ಎಂದು ತಿಳಿಸಿದರು. 

ಉಮಂಗ್‌ ಲೋಕಾರ್ಪಣೆ: ಕೇಂದ್ರ ಮತ್ತು ವಿವಿಧ ರಾಜ್ಯ ಸರಕಾರಗಳ ಯೋಜನೆಗಳ ವೆಬ್‌ಸೈಟ್‌ಗಳನ್ನು ಒಂದೇ ಡಿಜಿಟಲ್‌ ಸೂರಿನಡಿ ತರುವ “ಉಮಂಗ್‌’ ಎಂಬ ಸ್ಮಾರ್ಟ್‌ಫೋನ್‌ ಆ್ಯಪ್‌ ಅನ್ನು ಪ್ರಧಾನಿ ಮೋದಿ ಇದೇ ಕಾರ್ಯ ಕ್ರಮದಲ್ಲಿ ಬಿಡುಗಡೆಗೊಳಿಸಿದರು. ಆಧಾರ್‌, ಡಿಜಿ ಲಾಕರ್‌, ಇಪಿಎಫ್, ಪ್ಯಾನ್‌ ಸೇರಿ 1200ಕ್ಕೂ ಅಧಿಕ ಯೋಜನೆ ಗಳ ಮಾಹಿತಿ, ಸೇವೆ ನೀಡುವ ಮಹದೋದ್ದೇಶವನ್ನು “ಉಮಂಗ್‌’ ಒದಗಿಸುತ್ತದೆ. ಸದ್ಯಕ್ಕೆ 33 ಇಲಾಖೆಗಳ 162 ಸೇವೆಗಳನ್ನು ಮಾತ್ರ ಆ್ಯಪ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ.

13 ಭಾರತೀಯ ಭಾಷೆಗಳಲ್ಲಿ ಉಮಂಗ್‌  ಸೇವೆ ಲಭ್ಯವಿದ್ದು, ಶೀಘ್ರದಲ್ಲೇ ಇದನ್ನು ಯುಎಸ್‌ಎಸ್‌ಡಿ ಮೂಲಕ ಅಂತರ್ಜಾಲ ಸೇವೆಯನ್ನಾಗಿಯೂ ಪರಿವರ್ತಿಸಲಾಗುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next