ಈ ಬಾರಿಯ ಬಜೆಟ್ ಭಾಷಣ ತುಸು ಭಿನ್ನವಾಗಿ ಕಂಡಿತು. ಅಂಕಿಅಂಶಗಳನ್ನು ಕಡಿಮೆಗೊಳಿಸಿ ಪಾಲಿಸಿಗಳಿಗೆ ಸಂಬಂಧಪಟ್ಟಂತಹ ಮಾತುಗಳಿಗೆ ಜಾಸ್ತಿ ಒತ್ತು ಕೊಟ್ಟದ್ದು ಕಂಡು ಬರುತ್ತದೆ. ಹಾಗಾಗಿ ನಾವು ಶಾಸ್ತ್ರೀಯವಾಗಿ ಮಾಡಿಕೊಂಡು ಬರುತ್ತಿದ್ದ ಬಜೆಟ್ ವಿಶ್ಲೇಷಣೆಗೆ ಬಜೆಟ್ ಕಾಪಿ ಕೈಗೆ ಬರುವವರೆಗೆ ಕಾಯಬೇಕು. ಯಾವ ಕ್ಷೇತ್ರಕ್ಕೆ, ಯಾವ ಖಾತೆಗೆ ಎಷ್ಟು ಕೊಟ್ಟಿದ್ದಾರೆ ಎಂಬುದು ಕೇವಲ ಭಾಷಣದಿಂದ ತಿಳಿಯುವುದಿಲ್ಲ.
ಆದರೂ ಈ ಸರ್ಕಾರದ ಧ್ಯೇಯ ಏನು ಮತ್ತು ಅದು ಈಗ ಯಾವ ದಿಕ್ಕಿನಲ್ಲಿ ಸಾಗಿದೆ ಎನ್ನುವುದು ಪಾಲಿಸಿ ಮಾತುಗಳಿಂದ ಸ್ಪಷ್ಟವಾಗುತ್ತದೆ. ಇದೊಂದು ದೀರ್ಘಕಾಲಿಕ ಹಾದಿಯನ್ನು ತೋರಿಸುವ ಬಜೆಟ್. ಬಜೆಟ್ಟಿನ ದೃಷ್ಟಿ ಕಿರು ಕೈಗಾರಿಕೆ (MSME), ಸಾರಿಗೆ/ಯಾನ, ಹೂಡಿಕೆ ಮತ್ತು ಮಾರುಕಟ್ಟೆ, ಗ್ರಾಮೀಣ ಅಭಿವೃದ್ಧಿ, ಕೃಷಿ, ನಗರಾಭಿವೃದ್ಧಿ, ಮಹಿಳೆ, ಬ್ಯಾಂಕಿಂಗ್, ಹಣಕಾಸು ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಾಗಿ ವಿಂಗಡಿಸಿ ಪ್ರತಿ ಕ್ಷೇತ್ರದಲ್ಲೂ ಕೆಲ ಮುಖ್ಯ ಪಾಲಿಸಿ ಘೋಷಣೆಗಳನ್ನು ಮಾಡಿದ್ದಾರೆ.
“ಬದುಕನ್ನು ಸುಲಭ’ವಾಗಿಸುವ (Ease of living) ಬಗ್ಗೆ ಕೂಡಾ ಕೆಲ ಮಾತುಗಳು ಈ ಬಜೆಟ್‌ನಲ್ಲಿ ಕೇಳಿ ಬಂದವು. ಕಿರು ಕೈಗಾರಿಕಾ ಕ್ಷೇತ್ರಕ್ಕೆ ರೂ. 1ಕೋಟಿಯವರೆಗಿನ ಸಾಲ, ರೈಲ್ವೇಯಲ್ಲಿ ದೀರ್ಘಕಾಲಿಕ ಹೂಡಿಕೆ, ಜಲಯಾನಕ್ಕೆ ಒತ್ತು, ಬ್ಯಾಂಕೇತರ ವಿತ್ತೀಯ ಕ್ಷೇತ್ರಕ್ಕೆ ವಿದೇಶಿ ದುಡ್ಡು ಹರಿಯುವಂತೆ ಮಾಡುವುದು, ಸಾಮಾಜಿಕ ಕ್ಷೇತ್ರಕ್ಕೆ ಸ್ಟಾಕ್ ಎಕ್ಸ್‌ಚೇಂಜ್, ಗ್ರಾಮೀಣ ಕ್ಷೇತ್ರಕ್ಕೆ ಶೇ.100 ವಿದ್ಯುತ್ ಮತ್ತು ಗ್ಯಾಸ್, ಗ್ರಾಮ್ ಸಡಕ್ ಯೋಜನೆಯ ವಿಸ್ತರಣೆ, ಮೀನುಗಾರಿಕಾ ಕ್ಷೇತ್ರಕ್ಕೆ ಉತ್ತೇಜನ,
ಜೀರೋ ಬಜೆಟ್ ಫಾರ್ಮಿಂಗ್, ಮನೆ ನಿರ್ಮಾಣಕ್ಕೆ ಉತ್ತೇಜನ, ಇಲೆಕ್ಟ್ರಿಕ್ ವಾಹನಕ್ಕೆ ಉತ್ತೇಜನ, ಬ್ಯಾಂಕ್ ಕ್ಷೇತ್ರಕ್ಕೆ 70 ಸಾವಿರ ಕೋಟಿ ರೂ. ಬಂಡವಾಳ ಪೂರೈಕೆ, ಸರ್ಕಾರದ ಹೂಡಿಕೆಯ ಮಾರಾಟ, ರೈಲು ನಿಲ್ದಾಣಗಳ ಅಭಿವೃದ್ಧಿ, ಆವಾಸ್ ಯೋಜನೆಯ ವಿಸ್ತರಣೆ, ಕಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಬರಲಿರುವ ಹೊಸ ಸುಧಾರಣೆಗಳು, ಸ್ಟಾರ್ಟ್ ಅಪ್‌ಗ್ಳಿಗಾಗಿ ಒಂದು ಪ್ರತ್ಯೇಕ ಟಿವಿ ಚ್ಯಾನಲ್ ಇತ್ಯಾದಿ ಕೆಲವು ಘೋಷಣೆಗಳು ಖುಷಿ ಕೊಟ್ಟವು.
45 ಲಕ್ಷದವರೆಗಿನ ಮನೆಗಳ ಮೇಲಿನ ಸಾಲದ ಬಡ್ಡಿಯ ಮೇಲೆ ಹೆಚ್ಚುವರಿ 1.5 ಲಕ್ಷ ರೂ.ವಿನಾಯಿತಿ ನೀಡಿದ್ದು, ಎನ್.ಪಿ.ಎಸ್ ಹಿಂಪಡೆತದ ಮೇಲೆ ಸಂಪೂರ್ಣ ಕರ ವಿನಾಯಿತಿ ನೀಡಿದ್ದು, ಕಾರ್ಪೊರೇಟ್ ತೆರಿಗೆ ಇಳಿಸಿದ್ದು, ಕೋಟಿ ಮೀರಿದ ನಗದಿನ ಮೇಲೆ ಶೇ.2 ಟಿಡಿಎಸ್ ವಿಧಿಸಿದ್ದು, ಪ್ಯಾನ್ ಬದಲಿಗೆ ಆಧಾರ್ ಕಾರ್ಡ್ ಬಳಕೆ ಅನುಮತಿಸಿದ್ದು ಖುಷಿ ಕೊಟ್ಟರೂ ತೆರಿಗೆ ಮಿತಿಯನ್ನು ಹೆಚ್ಚಿಸದೆ ಇದ್ದದ್ದು, 80ಸಿ ಯೋಜನೆಯ ಮಿತಿಯನ್ನು ಹೆಚ್ಚಿಸದೆ ಇದ್ದದ್ದು, ಹೆಚ್ಚು ಆದಾಯದವರ ಮೇಲೆ ಹೆಚ್ಚುವರಿ ತೆರಿಗೆ ಹಾಕಿದ್ದು, ಡೀಸಲ್/ಪೆಟ್ರೋಲ್, ಚಿನ್ನದ ಬೆಲೆಯನ್ನು ಏರಿಸಿದ್ದು ಇತ್ಯಾದಿ ತುಸು ನಿರಾಸೆಯನ್ನು ಮೂಡಿಸಿವೆ.
* ಜಯದೇವ ಪ್ರಸಾದ ಮೊಳೆಯಾರ, ಆರ್ಥಿಕ ತಜ್ಞರು