ಜೊಹಾನ್ಸ್‌ಬರ್ಗ್: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಜತೆಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಸಮ್ಮೇಳನ ಪ್ರಯುಕ್ತ ಆಯೋಜನೆಗೊಂಡಿದ್ದ ಔತಣಕೂಟದ ಸಂದರ್ಭದಲ್ಲಿ ಅನತಿ ದೂರದಲ್ಲಿ ಇದ್ದ ಶೇಖ್ ಹಸೀನಾ ಅವರ ಬಳಿಗೆ ತೆರಳಿ ಪ್ರಧಾನಿ ಮೋದಿಯವರು ಮಾತನಾಡಿಸಿದರು. ಇದೇ ಸಂದರ್ಭದಲ್ಲಿ ಶೇಖ್ ಹಸೀನಾ ಅವರು ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ಮೋದಿ ಅವರಿಗೆ ಅಭಿನಂದನೆಗಳನ್ನು ಹಸೀನಾ ತಿಳಿಸಿದರು. ಅಷ್ಟು ಮಾತ್ರವಲ್ಲ, ಈ ಯಾನ ದಕ್ಷಿಣದ ಎಲ್ಲ ರಾಷ್ಟ್ರಗಳಿಗೂ ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಮುಂದುವರಿಯಲು ಪ್ರೇರಣೆ ಎಂದರು.
ಸಮ್ಮೇಳನದ ಸಂದರ್ಭದಲ್ಲಿಯೇ ಪ್ರಧಾನಿಯವರು ಇಥಿಯೋಪಿಯಾ, ಸೆನೆಗಲ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರನ್ನು ಭೇಟಿಯಾಗಿದ್ದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗಿ ಟ್ವೀಟ್ ಮಾಡಿದ್ದಾರೆ.
ಒಂದು ತಣ್ತೀಕ್ಕೆ ಸೀಮಿತ: ಮುಂದಿನ ತಿಂಗಳು ನವದೆಹಲಿಯಲ್ಲಿ ಜಿ20 ರಾಷ್ಟ್ರಗಳ ಸಮ್ಮೇಳನ ನಡೆಯಲಿರುವಂತೆಯೇ ವಿಶ್ವಸಂಸ್ಥೆಯಲ್ಲಿ ಇರುವ ಭಾರತದ ಶಾಶ್ವತ ರಾಯಭಾರಿ ರುಚಿರಾ ಕಾಂಭೋಜ್ “ಜಗತ್ತಿನ ಸಮಸ್ಯೆ ಹಾಗೂ ಸವಾಲುಗಳನ್ನು ಭಾರತ ಸರ್ಕಾರ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ನೆಲೆಯಲ್ಲಿ ಪರಿಹರಿಸಲು ಮುಂದಾಗಿದೆ. ಅದರ ಅನ್ವಯವೇ ಚಂದ್ರನ ದಕ್ಷಿಣ ಭಾಗದಲ್ಲಿ ಚಂದ್ರಯಾನ-3 ಗಗನನೌಕೆ ಯಶಸ್ವಿಯಾಗಿ ಇಳಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ದ ಸ್ಟಾರ್ ಮುಖಪುಟದಲ್ಲಿ “ಮೋದಿ ಔಟ್ ಆಫ್ ದಿಸ್ ವರ್ಲ್ಡ್’
ಚಂದ್ರಯಾನ-3 ಯಶಸ್ಸಿಯಾಗಿರುವ ಬಗ್ಗೆ ದಕ್ಷಿಣ ಆಫ್ರಿಕಾದ ಪ್ರಮುಖ ಪತ್ರಿಕೆ “ದ ಸ್ಟಾರ್’ನ ಮುಖಪುಟದಲ್ಲಿ ವರದಿಯಾಗಿದೆ. “ಇಂಡಿಯಾಸ್ ಮೋದಿ ಔಟ್ ಆಫ್ ದಿಸ್ ವರ್ಲ್ಡ್’ ಎಂಬ ಶೀರ್ಷಿಕೆ ಇರುವ ಪತ್ರಿಕೆಯನ್ನು ಪ್ರಧಾನಿ ಮೋದಿ, ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ ಲುಲ ಡ ಸಿಲ್ವಾ ಜತೆಗೆ ಓದುವ ಫೋಟೋವನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿದ್ದಾರೆ.