Advertisement

ಮೋದಿ ಕಾರ್ಯಕ್ರಮಗಳ ಬಗ್ಗೆ ದಲಿತರಿಗೆ ಮಾಹಿತಿ ನೀಡಬೇಕಿದೆ

12:17 PM Apr 15, 2017 | Team Udayavani |

ಬೆಂಗಳೂರು: ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಚಿಂತನೆಗಳನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಕಾರ್ಯಕ್ರಮಗಳ ಕುರಿತು ಬಡವರು ಹಾಗೂ ದೀನ ದಲಿತರಿಗೆ ಮಾಹಿತಿ ನೀಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. 

Advertisement

ಮಲ್ಲೇಶ್ವರದ ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 126ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್‌ ಚಿಂತನೆಗಳನ್ನು ಕಾರ್ಯಗತಗೊಸುವ ಹಿನ್ನೆಲೆಯಲ್ಲಿ ಮೋದಿಯವರು ದೇಶದ ಜನರಿಗೆ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಅವುಗಳನ್ನು ಬಡವರು, ದೀನ ದಲಿತರಿಗೆ ಮುಟ್ಟಿಸುವ ಕಾರ್ಯಕ್ಕೆ ಪಕ್ಷದ ಕಾರ್ಯಕರ್ತರು ಮುಂದಾಗಬೇಕಿದೆ ಎಂದರು.  

ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಅಂಬೇಡ್ಕರ್‌ ಭಾವಚಿತ್ರವನ್ನು ಇರಿಸಬೇಕೆಂಬ ಆದೇಶ ಹೊರಡಿಸಲಾಗಿತ್ತು. ಅದೇ ರೀತಿ ನಮ್ಮ ಮನೆಗಳಲ್ಲಿಯೂ ಅವರ ಭಾವಚಿತ್ರ ಇರಿಸಿಕೊಳ್ಳುವುದರಿಂದ ಭಾವಚಿತ್ರವನ್ನು ನೋಡಿದಾಗಲೆಲ್ಲ ಅವರ ವಿಚಾರಗಳು ನೆನಪಿಗೆ ಬರಲಿವೆ ಎಂದು ಸಲಹೆ ನೀಡಿದರು. 

ಅಂಬೇಡ್ಕರ್‌ ಅವರ ವಿರುದ್ಧ ಸೇಡಿನ ರಾಜಕಾರಣ ಮಾಡಿದ್ದ ಕಾಂಗ್ರೆಸ್‌, ಜಗಜೀವನರಾಂ ಅವರನ್ನು ಅವಮಾನಿಸಿತ್ತು. ಆದರೂ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಕಾಂಗ್ರೆಸ್‌ವೋಟ್‌ ಬ್ಯಾಂಕ್‌ ಮಾಡಿಕೊಂಡಿದೆ. ಹೀಗಾಗಿ ಕಾಂಗ್ರೆಸ್‌ನವರು ಅಂಬೇಡ್ಕರ್‌ ಹಾಗೂ ಜಗಜೀವನರಾಂ ಅವರಿಗೆ ಮಾಡಿದ ಅಪಮಾನ ಹಾಗೂ ಮೋಸದ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ವೀರಯ್ಯ, ಶಾಸಕ ಗೋವಿಂದ ಕಾರಜೋಳ, ಸಂಸದೆ ಶೋಭಾ ಕರಂದ್ಲಾಜೆ ಸೇರಿ ಪ್ರಮುಖರು ಹಾಜರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next