Advertisement

ಮಕ್ಕಳೊಂದಿಗೆ ಮಗುವಾದ ಮೋದಿ

09:11 AM Aug 16, 2017 | |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ನೆರೆದಿದ್ದ ಸಾವಿರಾರು ಜನರನ್ನುದ್ದೇಶಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಕ್ಕಳೊಂದಿಗೆ ಬೆರೆತು ತಾವೂ ಮಗು ವಾದ ಪ್ರಸಂಗಕ್ಕೆ 71ನೇ ಸ್ವಾತಂತ್ರ್ಯೋತ್ಸವ ಸಾಕ್ಷಿಯಾಯಿತು.

Advertisement

ಸುದೀರ್ಘ‌ ಭಾಷಣ ಮುಗಿಸಿದ ಬಳಿಕ ಅಲ್ಲಿ ನೆರೆದ ಗಣ್ಯಾತಿಗಣ್ಯರಿಗೆ ನಮಿಸಿದ ಪ್ರಧಾನಿ ಮೋದಿ, ರಕ್ಷಣಾ ಸಿಬಂದಿಯ ಸರ್ಪಗಾವಲಿನಲ್ಲಿ ತಮ್ಮ ವಾಹನದತ್ತ ಹೆಜ್ಜೆ ಹಾಕುತ್ತಿದ್ದರು. ಇನ್ನೇನು ವಾಹನ ಕೆಲವೇ ಹೆಜ್ಜೆಗಳ ದೂರ ದಲ್ಲಿದೆ ಎನ್ನುವಾಗ ತಮ್ಮ ನಡಿಗೆಯ ವೇಗ ತಗ್ಗಿಸಿದ ಪ್ರಧಾನಿ ಕಣ್ಣಿಗೆ ಬಿದ್ದವರು, ಪಕ್ಕದಲ್ಲಿ ನಿಂತು ತಮ್ಮತ್ತಲೇ ಮುಗುಳ್ನಗೆ ಬೀರುತ್ತಿದ್ದ ಪುಟ್ಟ ಮಕ್ಕಳು. ಕ್ಷಣ ಕೂಡ ತಡ ಮಾಡದೆ ಮೋದಿ, ನೇರ ಮಕ್ಕಳತ್ತ ಸಾಗಿದಾಗ ಆ ಮಕ್ಕಳ ಕೇಕೆ, ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಮುದ್ದು ಮಕ್ಕಳ ಕೆನ್ನೆ ಸವರಿ, ಕೈ ಕುಲುಕಿ ಅವರೊಂದಿಗೆ ಬೆರೆತ ಪ್ರಧಾನಿ, ಅವರೊಂದಿಗೆ ಕೆಲಹೊತ್ತು ಹರಟಿದ ಬಳಿಕ ತಮ್ಮ ವಾಹನ ಏರಿ ಹೊರಟರು.

ಕರತಾಡನದ ಸ್ವಾಗತ: ಮಂಗಳವಾರ ಬೆಳಗ್ಗೆ 7.23ಕ್ಕೆ ಸರಿಯಾಗಿ ಪ್ರಧಾನಿ ಮೋದಿ ಅವರು ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಗಣ್ಯರು, ಸಾರ್ವಜನಿಕರು ಜೋರು ಚಪ್ಪಾಳೆಗಳ ಮೂಲಕ ಅವರನ್ನು ಸ್ವಾಗತಿಸಿದರು. ತಮ್ಮ ಕಪ್ಪು ಬಣ್ಣದ ರೇಂಜ್‌ ರೋವರ್‌ ವಾಹನದಿಂದ ಕೆಳಗಿಳಿದ ಮೋದಿ, ಸಾವಿರಾರು ಮಕ್ಕಳು ಸೇರಿದಂತೆ ಅಲ್ಲಿ ನೆರೆದಿದ್ದ ಪ್ರೇಕ್ಷಕರತ್ತ ಕೈ ಬೀಸಿ ಶುಭಾಷಯ ಕೋರಿದರು. ಎಂದಿನಂತೆ ಅರ್ಧ ತೋಳಿನ ಕುರ್ತಾ, ಕೇಸರಿ ಪೇಟ ತೊಟ್ಟು ಪ್ರಧಾನಿ ಕಂಗೊಳಿಸುತ್ತಿದ್ದರು.

ದಣಿವರಿಯದೆ ದುಡಿದ ಶ್ವಾನಪಡೆ: ಮೂರು ವರ್ಷದ “ಮರು’ ಕೊಂಚ ಸುಸ್ತಾದಂತೆ ಕಾಣುತ್ತಿದ್ದ. ಮಂಗಳವಾರ ಆತನಿಗೆ ಬಿಡುವಿಲ್ಲದ ಕೆಲಸ. ಸೋಮವಾರ ಮಧ್ಯರಾತ್ರಿ ರಾತ್ರಿ 1 ಗಂಟೆಯಿಂದ ತನ್ನ 19 ಮಂದಿ ಸಹಪಾಠಿ ಗಳೊಂದಿಗೆ ಮರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ. ಶ್ವಾನ ಪಡೆಯ ಈ 20 ಶ್ವಾನಗಳ ಪೈಕಿ ಮರು ಎಂಬ ಲ್ಯಾಬ್ರಡಾರ್‌, ಬೆಳಗ್ಗೆ ಸಮಯ 7.30 ಆದರೂ ಮರು ಹಾಗೂ ಆತನ ಸಂಗಡಿಗರು ದಣಿವರಿಯದೆ ದುಡಿದು ಮೆಚ್ಚುಗೆ ಗಳಿಸಿದರು.

ಭಾರತೀಯ ಎಂದು ಹೆಮ್ಮೆಯಿಂದ ಹೇಳಿ: “ಜಾತಿ, ಜನಾಂಗ, ಆಚರಣೆಗಳ ಎಲ್ಲೆ ಮೀರಿ “ನಾನು ಭಾರತೀಯ’ ಎಂದು ದೇಶದ ಪ್ರತಿ ಪ್ರಜೆಯೂ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಸಂವಿಧಾನದ ಆಶಯ ಕೂಡ ಇದೇ ಆಗಿದೆ,’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೆಹರ್‌ ಹೇಳಿದ್ದಾರೆ. “ಹಿಂದೂ, ಕ್ರೈಸ್ತ, ಮುಸಲ್ಮಾನ, ಬೌದ್ಧ, ಜೈನ… ಹೀಗೆ ಧರ್ಮ ಯಾವುದೇ ಇರಲಿ, “ನಾನು ಭಾರತೀಯ’ ಎಂದು ಹೆಮ್ಮೆಯಿಂದ ಹೇಳಲು ಹಿಂಜರಿಯಬೇಡಿ,’ ಎಂದು ಅವರು ಕರೆ ನೀಡಿದ್ದಾರೆ.

Advertisement

ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ
ದೇಶದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಿ, ಸಮಾಜದ ಶಾಂತಿ ಕದಡುತ್ತಿರುವ ಪ್ರತ್ಯೇಕತಾವಾದ ಮತ್ತು  ಉಗ್ರವಾದದಂಥ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡಲು ಪ್ರತಿಯೊಬ್ಬ ಭಾರತೀಯರೂ ಪಣತೊಡಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ. “ಸಮಾಜವನ್ನು ಒಡೆದು ಛಿದ್ರಗೊಳಿಸುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಒಕ್ಕೊರಲ ಧ್ವನಿ ಕೇಳಿಬರಬೇಕು. ದೇಶದ ಶಾಂತಿಗೆ ಭಂಗ ತರುವವರ ವಿರುದ್ಧ ಹೋರಾಡಿ ದೇಶಭಕ್ತಿ ಮತ್ತು ಭಾರತೀಯತೆ ಮೆರೆಯಲು ಎಲ್ಲರೂ ಮುಂದಾಗಬೇಕು ಎಂದು ಅವರು ತಮ್ಮ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಕರೆ ನೀಡಿದ್ದಾರೆ.

ದೂರದರ್ಶನದ ವಿರುದ್ಧ ಸಿಪಿಎಂ ಕಿಡಿ
ತ್ರಿಪುರಾ ಸಿಎಂ ಮಾಣಿಕ್‌ ಸರ್ಕಾರ್‌ ಅವರ ಸ್ವಾತಂತ್ರ್ಯೋತ್ಸವ ಭಾಷಣವನ್ನು ಪ್ರಸಾರ ಮಾಡಲು ನಿರಾಕರಿಸಿದ ದೂರದರ್ಶನದ ವಿರುದ್ಧ ಸಿಪಿಎಂ ಕಿಡಿಕಾರಿದೆ. ಈ ಕುರಿತು ಪ್ರತಿಕ್ರಿಯಿಸಿದ ಪಕ್ಷದ ನಾಯಕ ಸೀತಾರಾಂ ಯೆಚೂರಿ, “ದೂರದರ್ಶನವು ಬಿಜೆಪಿ-ಆರೆಸ್ಸೆಸ್‌ನ ಖಾಸಗಿ ಸ್ವತ್ತಲ್ಲ. ಚುನಾಯಿತ ಸಿಎಂ ಸಹಿತ ವಿಪಕ್ಷಗಳ ಧ್ವನಿಯನ್ನು ಅಡಗಿಸಲು ಪ್ರಧಾನಿ ಮೋದಿ ಅವರು ಇಂಥ ಮಟ್ಟಕ್ಕೆ ಇಳಿದಿದ್ದಾರೆ. ಇದೇನಾ ಮೋದಿ ಅವರು ಹೇಳುತ್ತಿರುವ ಸಹಕಾರ ಒಕ್ಕೂಟ? ನಿಮಗೇನು ನಾಚಿಕೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಈ ಅಘೋಷಿತ ತುರ್ತು ಪರಿಸ್ಥಿತಿ ವಿರುದ್ಧ ನಾವು ಹೋರಾಡುತ್ತೇವೆ ಎಂದಿದ್ದಾರೆ.

ಸ್ವಾತಂತ್ರ್ಯೋತ್ಸವದ ಝಲಕ್‌
ನೀವು ಸ್ವಾತಂತ್ರ್ಯ ದಿನದಂದು ತುಂಬಾ ಹೊತ್ತು ಮಾತನಾಡುತ್ತೀರಿ ಎಂದು ಅನೇಕರು ಪತ್ರ ಬರೆದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಬಾರಿ ತಮ್ಮ ಭಾಷಣದ ಅವಧಿಯನ್ನು 57 ನಿಮಿಷಕ್ಕೆ ಕಡಿತಗೊಳಿಸಿದರು.

ಅಟ್ಟಾರಿ-ವಾಘಾ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಪಾಕಿಸ್ಥಾನದ ರೇಂಜರ್‌ಗಳಿಗೆ ಸಿಹಿ ಹಂಚಿ ಸ್ವಾತಂತ್ರ್ಯೋತ್ಸವ ಆಚರಿಸಿದರು. ಆ.14ರಂದು ಪಾಕ್‌ ರೇಂಜರ್‌ಗಳು ಭಾರತದ ಯೋಧರಿಗೆ ಸಿಹಿ ಹಂಚಿದ್ದರು.

ಭುವನೇಶ್ವರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ವೇದಿಕೆಯಲ್ಲೇ ಕುಸಿದು ಬಿದ್ದರು. ನಿರ್ಜಲೀಕರಣದಿಂದ ಅವರು ಕುಸಿದಿದ್ದು, ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ.

ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣದ ವೇಳೆ ಎಲ್ಲಿಂದಲೋ ತೇಲಿ ಬಂದ ಕಪ್ಪುಬಣ್ಣದ ಗಾಳಿಪಟವೊಂದು ನೇರವಾಗಿ, ಭಾಷಣ ಮಾಡುತ್ತಿದ್ದ ಡಯಾಸ್‌ ಎದುರು ಸಿಕ್ಕಿಹಾಕಿಕೊಂಡ ಪ್ರಸಂಗ ನಡೆಯಿತು.

“ತಿರಂಗ ಯಾತ್ರಾ’ ಮೂಲಕ ಸಾಗಿ ಬಂದು ಶ್ರೀನಗರದ ಲಾಲ್‌ ಚೌಕ್‌ನಲ್ಲಿ ಧ್ವಜಾರೋಹಣಕ್ಕೆ ಉದ್ದೇಶಿಸಿದ್ದ ಬಿಜೆಪಿ ಯುವ ಮೋರ್ಚಾದ 200 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಭಾರತದ ಮಾರುಕಟ್ಟೆ ಮೇಲೆ ಪ್ರಭುತ್ವ ಸಾಧಿಸಲು ಚೀನ ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ದೇಶದಾದ್ಯಂತ ಚೀನಾದ ಸರಕುಗಳನ್ನು ನಿಷೇಧಿಸಬೇಕೆಂದು ಆರೆಸ್ಸೆಸ್‌ ಆಗ್ರಹಿಸಿದೆ.

ದೇಶ ರಕ್ಷಣೆಗಾಗಿ ಹೋರಾಡಿದ ಕೆಚ್ಚೆದೆಯ ಪುರುಷರು, ಧೀರೋದಾತ್ತ ಮಹಿಳೆಯರು, ನಾಗರಿಕರು ಹಾಗೂ ಭದ್ರತಾ ಪಡೆ ಸಿಬಂದಿಯ ಕಥೆ ಒಳಗೊಂಡ ವೆಬ್‌ಸೈಟ್‌ //gallantryawards.gov.in/ ಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಸರಕಾರದ ಆದೇಶದ ಗೊಂದಲದ ನಡುವೆಯೂ ಉತ್ತರ ಪ್ರದೇಶದ ಕೆಲ ಮದರಸಾಗಳಲ್ಲಿ ತ್ರಿವರ್ಣ ಧ್ವಜ ಹಾರಾಟ, ರಾಷ್ಟ್ರಗೀತೆ ಮೊಳಗಿದರೆ, ಮತ್ತೆ ಕೆಲವು ಮದರಸಾಗಳು ಸರಕಾರದ ಆದೇಶ ಧಿಕ್ಕರಿಸಿವೆ.

ಕೆಂಪುಕೋಟೆಯಲ್ಲಿ ಪುಟಾಣಿಗಳೊಂದಿಗೆ ಬೆರೆತು ಸಂಭ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ.
 

Advertisement

Udayavani is now on Telegram. Click here to join our channel and stay updated with the latest news.

Next