Advertisement

ಆಂತರಿಕ ಭದ್ರತೆಗೆ ಆಧುನಿಕ ತಂತ್ರಜ್ಞಾನ: ಭಾಸ್ಕರ್‌ ರಾವ್‌

11:09 PM Aug 25, 2020 | mahesh |

ಮಲ್ಪೆ: ರಾಜ್ಯದ ಆಂತರಿಕ ಭದ್ರತೆಗೆ ಗರಿಷ್ಠ ಆದ್ಯತೆ ನೀಡಲಾಗುತ್ತಿದ್ದು, ಅದಕ್ಕಾಗಿ ಆತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು ಎಂದು ರಾಜ್ಯದ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಭಾಸ್ಕರ್‌ ರಾವ್‌ ತಿಳಿಸಿದ್ದಾರೆ. ಮಂಗಳವಾರ ಮಲ್ಪೆಯ ಕರಾವಳಿ ಕಾವಲು ಪಡೆಯ ಕಚೇರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ವಿಶೇಷ ತರಬೇತಿ
ಕರಾವಳಿ ಕಾವಲು ಪಡೆಗೆ ಅಗತ್ಯ ಉಪಕರಣಗಳ ಖರೀದಿ, ಪ್ರತ್ಯೇಕ ಸಿಬಂದಿ ನೇಮಕ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಬಂದಿಯಲ್ಲಿ ದೈಹಿಕ, ತಾಂತ್ರಿಕ ದೃಢತೆ ಹೆಚ್ಚಿಸುವ ಮೂಲಕ ಕಾರ್ಯಕ್ಷಮತೆ ಹೆಚ್ಚಿಸಲು ವಿಶೇಷ ತರಬೇತಿ ನೀಡಲಾಗುವುದು ಎಂದರು.

ಸಾಗರ ರಕ್ಷಕ ದಳ
ಕರಾವಳಿಯ ರಕ್ಷಣೆಗೆ 3 ಹೊಸ ಜೆಟ್‌ಸ್ಕೀಗಳನ್ನು ಶೀಘ್ರದಲ್ಲಿ ಸರಬರಾಜು ಮಾಡಲಾಗುವುದು. ರಾಜ್ಯದಲ್ಲಿನ 43 ಬೀಚ್‌ಗಳಿಗೆ ಸೂಕ್ತ ಭದ್ರತೆ ನೀಡಲಾಗುವುದು, ಈಗಾಗಲೇ ಕರಾವಳಿ ಕಾವಲು ಪಡೆಯ ಜತೆಗೆ ಗೃಹರಕ್ಷಕ ದಳದ ಸಿಬಂದಿಯನ್ನು ಒಳಗೊಂಡ ಕರಾವಳಿ ನಿಯಂತ್ರಣ ದಳ ಹಾಗೂ ಸ್ಥಳೀಯ ಮೀನುಗಾರರನ್ನು ಒಳಗೊಂಡ ಸಾಗರ ರಕ್ಷಕ ದಳವನ್ನು ಆರಂಭಿಸಲಾಗಿದೆ ಎಂದು ಭಾಸ್ಕರ್‌ ರಾವ್‌ ಹೇಳಿದರು.

ಚಿಪ್‌ ಆಧಾರಿತ ತಂತ್ರಜ್ಞಾನ ಬಳಕೆ
ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗುವವರು ಮತ್ತು ಬರುವವರ ಖಚಿತ ಮಾಹಿತಿಗಾಗಿ ಚಿಪ್‌ ಆಧಾರಿತ ತಂತ್ರಜ್ಞಾನವನ್ನು ಬಳಸಲಾಗುವುದು, ಮೀನುಗಾರರ ರಕ್ಷಣೆಯ ಜತೆಗೆ ಸಮುದ್ರದಲ್ಲಿನ ಜೀವ ವೈವಿಧ್ಯ ರಕ್ಷಣೆಗೆ ಸಹ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳ ಮೂಲಕ ಆಂತರಿಕ ಭದ್ರತೆಗೆ ಅಡ್ಡಿಪಡಿಸುವವರನ್ನು ಇಲಾಖೆಯ ಸೋಶಿಯಲ್‌ ಮೀಡಿಯಾ ಸೆಲ್‌ ಮೂಲಕ ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ದೇಶ ವಿರೋಧಿ ಚಟುವಟಿಕೆ ನಡೆಸುವವರನ್ನು ಪತ್ತೆಹಚ್ಚಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್‌ ಆರ್‌. ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next