ಹಾಸನ: ವಯಸ್ಸಾದ ತಂದೆ – ತಾಯಿಯನ್ನು ನೋಡಿ ಕೊಳ್ಳದೇ ವೃದ್ಧಾಶ್ರಮಕ್ಕೆ ತಳ್ಳುವ ಮಕ್ಕಳನ್ನು ನೋಡಿ ದ್ದೇವೆ. ಆಸ್ತಿಗಾಗಿ ತಂದೆ – ತಾಯಿಗೆ ಹಿಂಸಿಸುವ, ಕೊಲೆ ಮಾಡಿದ ಪ್ರಕರಣಗಳನ್ನೂ ಕಾಣುತ್ತಿದ್ದೇವೆ. ಆದರೆ ತಾಯಿಗಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟು, ಹಳೆಯ ಸ್ಕೂಟರ್‌ನಲ್ಲಿಯೇ ತಾಯಿಗೆ ಭಾರತ ದರ್ಶನ ಮಾಡಿಸುವ ಪುತ್ರನೊಬ್ಬನಿದ್ದಾನೆ. ತಾಯಿಯನ್ನು ಭಾರತ ದರ್ಶನ ಮಾಡಿಸುತ್ತಿರುವ ಆಧುನಿಕ ಶ್ರವಣಕುಮಾರನೆಂದರೆ ಅವರು ಮೈಸೂರಿನ ಡಿ.ಕೃಷ್ಣಕುಮಾರ.
ತನ್ನ ತಾಯಿ 70ರ ಹರೆಯ ಚೂಡಾರತ್ನ ಅವರನ್ನು 20 ವರ್ಷ ಹಳೆಯದಾದ ಸ್ಕೂಟರ್‌ನಲ್ಲಿ ಕೂರಿಸಿ ಕೊಂಡು ದಕ್ಷಿಣ ಭಾರತ ದರ್ಶನ ಮಾಡಿಸುತ್ತಾ ಬಂದಿ ರುವ ಡಿ.ಕೃಷ್ಣಕುಮಾರ ಅವರು ಹಾಸನಕ್ಕೆ ಬಂದಿದ್ದರು. ಅವರು ಮಾತಿಗೆ ಸಿಕ್ಕಿ ತನ್ನ ಮಾತೃಸೇವಾ ಸಂಕಲ್ಪ ಯಾತ್ರೆಯ ಬಗ್ಗೆ ವಿವರ ನೀಡಿದರು. ನಗರದ ಶೃಂಗೇರಿ ಶಂಕರ ಮಠದಲ್ಲಿ ಒಂದು ರಾತ್ರಿ ತಂಗಿದ್ದ ಅವರು ತನ್ನ ಉದ್ದೇಶದ ವಿವರ ನೀಡಿದರು.
ಮೈಸೂರಿನ ಮಾಸನ ಗಂಗೋತ್ರಿ ಸಮೀಪದ ನಿವಾಸಿಯಾದ 40ರ ಹರೆಯದ ಡಿ.ಕೃಷ್ಣ ಕುಮಾರ ಅವರು ಬ್ರಹ್ಮಚಾರಿ. ತಂದೆ – ತಾಯಿಗೆ ಒಬ್ಬನೇ ಪುತ್ರ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡು ತ್ತಿದ್ದ ಆವರ ತಂದೆ 4 ವರ್ಷದ ಹಿಂದೆ ತೀರಿಕೊಂಡಾಗ ತನ್ನ ತಾಯಿಯ ನೋಡಿಕೊಳ್ಳುವ ಹೊಣೆಗಾರಿಕೆ ಅವರ ಹೆಗಲಿಗೆ ಬಿತ್ತು. ಅವರು ಹಲವು ಬಾರಿ ದೇಶದ ವಿವಿಧ ಭಾಗಗಳ ಪ್ರವಾಸ ಮಾಡಿದ ಅನುಭವವನ್ನು ತನ್ನ ತಾಯಿಯ ಬಳಿ ಹೇಳಿಕೊಳ್ಳುತ್ತಿದ್ದಾಗ ಅವರ ತಾಯಿ ಅಯ್ಯೋ ನಾನು ಬೇಲೂರು ಹಳೇಬೀಡನ್ನೇ ನೋಡಿಲ್ಲ ಎಂದರಂತೆ. ತಾಯಿಯ ಹಂಬಲ ಅರಿತ ಅವರು ತಾಯಿಗೆ ಭಾರತ ದರ್ಶನ ಮಾಡಿಸಬೇಕೆಂಬ ಸಂಕಲ್ಪ ಮಾಡಿದರಂತೆ.
ತಾಯಿಯ ಬಯಕೆ: ನಮ್ಮದು ಅವಿಭಕ್ತ ಕುಟುಂಬ. ನನ್ನ ತಂದೆಗೆ ನಾನೊಬ್ಬನೇ ಮಗನಾದರೂ ನನ್ನ ತಂದೆಯ ಅಣ್ಣ – ತಮ್ಮಂದಿರು ಒಟ್ಟಿಗೇ ಇದ್ದರು. ನನ್ನ ತಾಯಿಗೆ 62 ವರ್ಷ ಅಡುಗೆ ಮನೆಯಲ್ಲಿಯೇ ಕಳೆದಿ ದ್ದರು. ಹೊರ ಪ್ರಪಂಚವನ್ನೇ ನೋಡಿಲ್ಲ ಎಂಬುದು ನಾನು ನನ್ನ ಪ್ರವಾಸದ ಅನುಭವಗಳನ್ನು ಹೇಳುವಾಗ ನಾನು ಬೇಲೂರು ಹಳೇಬೀಡು ಕೂಡ ನೋಡಲಾಗಿಲ್ಲ ಬಿಡು ಎಂದು ಹೇಳಿದ್ದು ಮನಸ್ಸಿಗೆ ನಾಟಿತು. ಅಂದೇ ಭಾರತ ದರ್ಶನ ಮಾಡಿಸಬೇಕೆಂಬ ನಿರ್ಧಾರ ಮಾಡಿ ಕೆಲಸವನ್ನೂ ಬಿಟ್ಟೆ. ಅಷ್ಟರಲ್ಲಿ 13 ವರ್ಷ ಸಾಕಷ್ಟು ದುಡಿದು ಹಣ ಸಂಗ್ರಹಿಸಿದ್ದೆ.
ದಕ್ಷಿಣ ಭಾರತ ಪ್ರವಾಸ: ಕಳೆದ ವರ್ಷ ಕಾರಿನಲ್ಲಿ ಉತ್ತರ ಭಾರತದ ಎಲ್ಲಾ ರಾಜ್ಯಗಳನ್ನೂ ಸುತ್ತಿಸಿದೆ. ಈ ವರ್ಷ ಕೇರಳ, ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಸಮಗ್ರ ದರ್ಶನ ಮಾಡಿಸಿದ್ದೇನೆ. ಸ್ಕೂಟರಿನಲ್ಲಿಯೇ ದಕ್ಷಿಣ ಕರ್ನಾಟಕದ ದರ್ಶನ ಮಾಡಿಸಿದ್ದೇನೆ. ನನಗೆ ನನ್ನ ತಂದೆ 20 ವರ್ಷದ ಹಿಂದೆ ಸ್ಕೂಟರ್ ಕೊಡಿಸಿದ್ದರು. ಅದ ರೊಂದಿಗೆ ಅವಿನಾಭಾವ ಸಂಬಂಧವಿದೆ.
ಅದರ ಲ್ಲಿಯೇ ತಾಯಿಯೊಂದಿಗೆ ಪ್ರವಾಸ ಮಾಡುತ್ತಿದ್ದೇನೆ. 2018ರ ಜನವರಿ 18 ರಿಂದ ಈ ವರೆಗೆ 30,410 ಕಿ.ಮೀ. ಸ್ಕೂಟರ್‌ನಲ್ಲಿಯೇ ಸುತ್ತಿದ್ದೇವೆ. 70 ವರ್ಷ ವಾದರೂ ನನ್ನ ತಾಯಿಗೆ ಸ್ಕೂಟರ್ ಪ್ರಯಾಣದಿಂದ ಆಯಾಸವಾಗುತ್ತಿಲ್ಲ. ಶಬರಿಮಲೈ, ಊಟಿ ಯನ್ನೂ ಸ್ಕೂಟರ್‌ನಲ್ಲಿಯೇ ಸುತ್ತಿದ್ದೇವೆ. ಯಾತ್ರೆ ಸಂದರ್ಭದಲ್ಲಿ ವಿವಿಧೆಡೆ ಇರುವ ತಾಯಿಯ ಸಹಪಾಠಿಗಳು, ಸ್ನೇಹಿತರು, ಸಂಬಂಧಿಗಳನ್ನೂ ಸಂದರ್ಶಿಸುತ್ತಿದ್ದೇವೆ. ಎಂದು ಕೃಷ್ಣ ಕುಮಾರ್ ಹೇಳಿದರು.
ಭಾರತ ದರ್ಶನ ಮಾಡಿಸಿದ ಖುಷಿ ಇದೆ: ನಾನು 21ನೇ ವರ್ಷದಲ್ಲಿಯೇ ಬ್ರಹ್ಮಚಾರಿ ಯಾಗಬೇಕೆಂದು ನಿರ್ಧರಿಸಿದೆ. ಸಂಸಾರ ಬಂಧನ ಬೇಡ ಎಂದು ಈ ನಿರ್ಧಾರ ತೆಗೆದು ಕೊಂಡೆ. ಈಗ ನನ್ನ ತಾಯಿಗೆ ಭಾರತ ದರ್ಶನ ಮಾಡಿಸಿದ ಖುಷಿ ಇದೆ. ತಾಯಿ ಇದ್ದಾಗ ಚೆನ್ನಾಗಿ ನೋಡಿಕೊಳ್ಳಬೇಕು. ಅವರನ್ನು ಖುಷಿ ಯಿಂದ ಇರಿಸಬೇಕೆಂಬುದಷ್ಟೇ ನನ್ನ ಬಯಕೆ. ನಮ್ಮ ಭಾರತ ದರ್ಶನಕ್ಕೆ ನಾನು ಯಾರಿಂದಲೂ ಆರ್ಥಿಕ ನೆರವು, ಕಾಣಿಕೆ ಪಡೆ ಯದೇ ನನ್ನ ಸ್ವಂತ ಹಣವನ್ನು ಬಳಸುತ್ತಿದ್ದೇನೆ ಎನ್ನುತ್ತಾರೆ ಮೈಸೂರಿನ ಕೃಷ್ಣ ಕುಮಾರ.
* ಎನ್. ನಂಜುಂಡೇಗೌಡ