Advertisement

ಬೇಲೂರು-ಹಳೆಬೀಡು ನೋಡದ ತಾಯಿಗೆ ಭಾರತ ತೋರಿಸಲು ಹೊರಟ ಮಗ!

11:57 AM Nov 28, 2018 | |

ಮಹಾನಗರ: ಊರ ಸನಿಹದ ಬೇಲೂರು-ಹಳೆಬೀಡನ್ನೇ ನೋಡದ ತಾಯಿಗೆ, ಕೇವಲ ಬೇಲೂರು- ಹಳೆಬೀಡಲ್ಲ; ಇಡೀ ಭಾರತವನ್ನೇ ತೋರಿಸುತ್ತೇನೆ ಎಂದ ಮಗ ಇದೀಗ ತಾಯಿಯೊಂದಿಗೆ ದೇಶ ಪರ್ಯಟನೆಯಲ್ಲಿ ತೊಡಗಿದ್ದಾರೆ. ವಿಶೇಷವೆಂದರೆ ಈ ತಾಯಿ ಮಗ ಇಬ್ಬರೂ ದೇಶ ಸುತ್ತಲು ಹೊರಟಿರುವುದು ಇಪ್ಪತ್ತು ವರ್ಷಗಳ ಹಳೆಯ ಬಜಾಜ್‌ ಸ್ಕೂಟರ್‌ನಲ್ಲಿ. ಮೈಸೂರು ನಿವಾಸಿ 39 ವರ್ಷದ ಡಿ. ಕೃಷ್ಣಕುಮಾರ್‌ ಅವರೇ ತಾಯಿಯನ್ನು ಕರೆದುಕೊಂಡು ದೇಶ ತೋರಿಸಲು ಹೊರಟಿರುವ ಆಧುನಿಕ ಶ್ರವಣಕುಮಾರ. ತನ್ನ ಈ ಪರ್ಯಟನೆಗೆ ‘ಮಾತೃ ಸೇವಾ ಸಂಕಲ್ಪ ಯಾತ್ರೆ’ ಎಂಬುದಾಗಿ ಹೆಸರಿಟ್ಟಿದ್ದಾರೆ.

Advertisement

ಕಾರ್ಪೊರೇಟ್‌ ಟೀಂ ಲೀಡರ್‌ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣಕುಮಾರ್‌ ಅವರದ್ದು ಕೂಡು ಕುಟುಂಬ. ನಾಲ್ಕು ವರ್ಷಗಳ ಹಿಂದೆ ತಂದೆ ಕಾಲವಾದ ಅನಂತರ ಕುಟುಂಬದಲ್ಲಿದ್ದ ಸಂಬಂಧಿಕರು ಬೇರೆಡೆ ವಾಸಿಸುತ್ತಿದ್ದು, ಕೃಷ್ಣಕುಮಾರ್‌ ಅವರು ತಾಯಿ ಚೂಡಾರತ್ನರೊಂದಿಗೆ (70) ವಾಸಿಸುತ್ತಿದ್ದಾರೆ. 69 ವರ್ಷಗಳಿಂದ ತಂದೆ ಮತ್ತು ಏಕೈಕ ಪುತ್ರ ಅವರ ಸೇವೆಗಾಗಿಯೇ ತನ್ನ ಬದುಕು ಮುಡಿಪಾಗಿಟ್ಟ ತಾಯಿ ಮೈಸೂರಿಗೆ ಸನಿಹದಲ್ಲೇ ಇರುವ ಬೇಲೂರು ಹಳೆಬೀಡನ್ನೂ ನೋಡಿಲ್ಲ ಎಂದಾಗ ಕೃಷ್ಣಕುಮಾರ್‌ ಬೇಸರಿಸಿಕೊಂಡರು.

ತಾಯಿಯ ಈ ಕನವರಿಕೆ ಇಡೀ ದೇಶವನ್ನೇ ಆಕೆಗೆ ತೋರಿಸಬೇಕೆಂಬ ಹಠಕ್ಕೆ ಕಾರಣವಾಯಿತು. ಕಳೆದ ಜನವರಿ 16ರಂದು ತಂದೆ ಬಳಸುತ್ತಿದ್ದ ಬಜಾಜ್‌ ಸ್ಕೂಟರ್‌ನಲ್ಲಿ ತಾಯಿಯನ್ನು ಕೂರಿಸಿಕೊಂಡು ದೇಶ ಸುತ್ತಾಡಲು ಹೊರಟರು. ಮಂಗಳೂರಿನಲ್ಲಿ ಒಂದಷ್ಟು ದಿನ ಈಗಾಗಲೇ ತಾಯಿ ಮತ್ತು ಮಗ ಮೈಸೂರಿನಿಂದ ಹೊರಟು, ನಂಜನಗೂಡು, ಊಟಿ, ಕೇರಳ, ತಮಿಳುನಾಡು, ಆಂಧ್ರ, ಕರ್ನಾಟಕ, ತೆಲಂಗಾಣ, ಗೋವಾ ಮುಂತಾದೆಡೆ ಪ್ರೇಕ್ಷಣೀಯ ಸ್ಥಳ, ಧಾರ್ಮಿಕ ಮಂದಿರಗಳನ್ನು ವೀಕ್ಷಣೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಉಡುಪಿಗೂ ಆಗಮಿಸಿದ್ದರು. ಸೋಮವಾರ ರಾತ್ರಿ ಮಂಗಳೂರಿಗೆ ಬಂದಿದ್ದು, ನಗರದ ರಾಮಕೃಷ್ಣ ಮಠದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇಲ್ಲಿಯ ಶರವು, ಕದ್ರಿ ಮಂಜುನಾಥ, ಕುದ್ರೋಳಿ ಗೋಕರ್ಣನಾಥ, ಮಂಗಳಾದೇವಿ ದೇವಸ್ಥಾನ ಸಹಿತ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ತಾಯಿಗೆ ತೋರಿಸುವ ಇಚ್ಛೆ ಹೊಂದಿರುವುದಾಗಿ ಕೃಷ್ಣಕುಮಾರ್‌ ತಿಳಿಸಿದ್ದಾರೆ.

ಸ್ಕೂಟರ್‌ನಲ್ಲೇ ದೊಡ್ಡ ಲಗೇಜ್‌
ದೇಶ ಪರ್ಯಟನೆಗೆ ಹೊರಟ ತಾಯಿ-ಮಗ ತಮ್ಮೊಂದಿಗೆ ದೊಡ್ಡ ಲಗೇಜ್‌ನ್ನೇ ಹೊತ್ತು ತಂದಿದ್ದಾರೆ. ಸಣ್ಣ ಸ್ಕೂಟರ್‌ನಲ್ಲಿ ತುಂಬಿಸಲು ಸಾಧ್ಯವಾದಷ್ಟು ಜತೆಗಿಟ್ಟುಕೊಂಡಿದ್ದಾರೆ. ಇಬ್ಬರ ಬಟ್ಟೆ, ಚಾಪೆ, ಬೆಡ್‌ಶೀಟ್‌, ಜರ್ಕಿನ್‌, ಹೆಲ್ಮೆಟ್‌ ಎಲ್ಲವೂ ಜತೆಗಿದೆ. ತಾಯಿಗೆ ಯಾವುದೇ ತೊಂದರೆಯಾಗದಂತೆ ಹೊತ್ತೂತ್ತಿಗೆ ಊಟ, ತಿಂಡಿ, ನಿದ್ದೆ ಎಲ್ಲವನ್ನೂ ಸಾಂಗವಾಗಿ ನೆರವೇರಿಸುತ್ತಿದ್ದಾರೆ ಮಗ. ಅವರ ಈ ಯಾತ್ರೆ ಎಷ್ಟು ದಿನಗಳ ಕಾಲ ನಡೆಯುತ್ತದೆ ಎಂಬುದನ್ನು ಈಗಲೇ ನಿರ್ಧರಿಸಿಲ್ಲ. ಇಡೀ ದೇಶ ಸುತ್ತಲು ಬೇಕಾದಷ್ಟು ಹಣವನ್ನು ತನ್ನ ಉದ್ಯೋಗದಿಂದ ಸಂಗ್ರಹಿಸಿಟ್ಟುಕೊಂಡಿದ್ದೇನೆ. ಸ್ನೇಹಲೋಕ ಚೆನ್ನಾಗಿರುವುದರಿಂದ ಉಳಿದುಕೊಳ್ಳಲು ಸಮಸ್ಯೆ ಇಲ್ಲ. ಆಶ್ರಮ, ಮಠ, ಸ್ನೇಹಿತರ ಮನೆಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತೇವೆ ಎನ್ನುತ್ತಾರವರು.

ತಾಯಿಯ ಬಾಲ್ಯಸ್ನೇಹಿತೆಯ ಭೇಟಿ!
ವಿಶೇಷವೆಂದರೆ ತನ್ನ ತಾಯಿಯ ಬಾಲ್ಯ ಸ್ನೇಹಿತೆ ವಿಟ್ಲ ನಿವಾಸಿಯಾಗಿರುವ ಧನಲಕ್ಷ್ಮೀ ಅವರನ್ನೂ ಭೇಟಿ ಮಾಡಿಸಲಿದ್ದಾರಂತೆ ಈ ಮಗ. ವಿಟ್ಲದಲ್ಲಿ ಆ ಸ್ನೇಹಿತೆಯ ಮನೆ ಎಲ್ಲಿ ಎಂದು ತಿಳಿದಿಲ್ಲ. ಆದಾಗ್ಯೂ ಮಂಗಳೂರಿನಲ್ಲಿ ಮೂರ್‍ನಾಲ್ಕು ದಿನ ಇದ್ದು, ಬಳಿಕ ವಿಟ್ಲಕ್ಕೆ ತೆರಳಿ ಅವರ ಮನೆಯ ಮಾಹಿತಿ ಪಡೆದುಕೊಂಡು ಅವರ ಮನೆಗೆ ತಾಯಿಯನ್ನು ಕರೆದೊಯ್ಯಲಾಗುವುದು ಎಂದು ಕೃಷ್ಣಕುಮಾರ್‌ ಹೇಳಿದ್ದಾರೆ.

Advertisement

ಮಗನ ಬಗ್ಗೆ ಹೆಮ್ಮೆ
ಇದೆ ಮನೆಯಾಚೆಯ ಪ್ರಪಂಚವೇ ತಿಳಿದಿರದ ನನಗೆ ದೇಶವನ್ನೇ ತೋರಿಸುತ್ತಿರುವ ಮಗನ ಬಗ್ಗೆ ಹೆಮ್ಮೆಯಾಗುತ್ತಿದೆ. ಮಗನೊಂದಿಗೆ ಭಾರತ ಯಾತ್ರೆ ಮಾಡಲು ಖುಷಿಯಾಗುತ್ತಿದೆ. ದೇಶ ಇಷ್ಟೊಂದು ಸುಂದರವಾಗಿದೆ ಎಂದು ಈ ಇಳಿ ವಯಸ್ಸಿನಲ್ಲಾದರು ತಿಳಿದುಕೊಳ್ಳಲು ಮಗನಿಂದ ಸಾಧ್ಯವಾಯಿತು.
– ಚೂಡಾರತ್ನ, ತಾಯಿ

Advertisement

Udayavani is now on Telegram. Click here to join our channel and stay updated with the latest news.

Next