Advertisement

ಕಸಾಪದಿಂದ ಆಧುನಿಕ ದಲಿತ ಸಾಹಿತ್ಯ ಸಂಪುಟ

11:47 AM Nov 09, 2018 | |

ಬೆಂಗಳೂರು: ಭಾರತದ ಸ್ವಾತಂತ್ರ್ಯ ನಂತರ ದಲಿತ ಸಾಹಿತ್ಯದಲ್ಲಾದ ಬದಲಾವಣೆಯನ್ನು “ಸಂಪುಟ’ರೂಪದಲ್ಲಿ ಕಟ್ಟಿಕೊಡಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ.

Advertisement

ಈಗಾಗಲೇ ಕನ್ನಡ ಸಾಹಿತ್ಯ ದಿಗ್ಗಜರ ಕವಿತೆಗಳನ್ನು ನೇಪಾಳಿ ಭಾಷೆಗೆ ಹಾಗೂ ಅಲ್ಲಿಯ ಕವಿಗಳ ಕವಿತೆಗಳನ್ನು ಕನ್ನಡಕ್ಕೆ ತರುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿರುವ ಕನ್ನಡ ಸಾಹಿತ್ಯ ಪರಿಷತ್ತು, ಇದೀಗ ದಲಿತ ಸಾಹಿತ್ಯ ಕುರಿತಾದ ಸಮಗ್ರ ಸಂಪುಟವನ್ನು  “ಆಧುನಿಕ ದಲಿತ ಸಾಹಿತ್ಯ ಸಂಪುಟಗಳು’ ಹೆಸರಿನಲ್ಲಿ ದಾಖಲಿಸಲು ತೀರ್ಮಾನಿಸಿದೆ.

ದಲಿತ ಸಾಹಿತಿಗಳ ಬರಹಗಳ ಮೇಲೆ ಸಮಾಜವಾದಿ ಚಿಂತಕ ರಾಮ ಮನೋಹರ ಲೋಹಿಯಾ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರಭಾವ. ಕಥೆ, ಕವಿತೆ, ನಾಟಕ, ಪ್ರಬಂಧ, ಆತ್ಮಕಥೆ, ವಿಮರ್ಶೆ ಮತ್ತು ಸಂಶೋಧನೆಯ ಪ್ರಕಾರಗಳಲ್ಲಿ ದಲಿತ ಲೇಖಕರು ಹೇಗೆ ತೊಡಗಿಸಿಕೊಂಡಿದ್ದಾರೆ.

ಅವರ ಆಕಾಂಕ್ಷೆಗಳು ಏನಿದ್ದವು.ಅಕ್ಷರ ಕಲಿತ ಮೇಲೆ ಅವರಲ್ಲಿ ಉಂಟಾದ ಭಾವನೆ ಹೇಗಿತ್ತು. ಪ್ರಸ್ತುತ ಅವರು ಯಾವ ರೀತಿಯ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬುವುದರ ಕುರಿತ ಸಮಗ್ರ ನೋಟವನ್ನು ಸಂಪುಟ ಕಟ್ಟಿಕೊಡಲಿದೆ ಎಂದು ಹೇಳಲಾಗಿದೆ.

ಸಮಗ್ರ ಸಂಪುಟ ಪ್ರಕಟ: ಸಂಸ್ಕೃತ ಚಿಂತಕ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ಅವರ ಮಾರ್ಗ ದರ್ಶನದಲ್ಲಿ ಸಮಗ್ರ ಸಂಪುಟ ಪ್ರಕಟವಾಗಲಿದ್ದು “ಕಾವ್ಯ ಸಂಪಾದನೆ’ ಜವಾಬ್ದಾರಿ ಮೂಡ್ನಾಕೂಡು ಚಿನ್ನಸ್ವಾಮಿ,  “ಜಾನಪದ’ಕ್ಕೆ ಸಂಬಂಧಿಸಿದ ವಿಷಯ ಸಂಗ್ರಹಣೆ ಹೊಣೆ ಕಲಬುರ್ಗಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಚ್‌.ಟಿ.ಕೋಟೆ,

Advertisement

“ವೈಚಾರಿಕೆ ಬರಹ’ಕ್ಕೆ ಸಂಬಂಧಿಸಿದ ವಿಷಯ ಸಂಗ್ರಹಣೆ ಜವಾಬ್ದಾರಿ ಡಾ.ಬಿ.ಎಂ.ಪುಟ್ಟಯ್ಯಗೆ ವಹಿಸಲಾಗಿದೆ. “ಆತ್ಮಕತನಗಳ’ ಕುರಿತು ಅರ್ಜುನ್‌ ಗೊಳಸಂಗಿ ಹಾಗೂ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ “ದಲಿತ ಕನ್ನಡ ಸಂಶೋಧನೆ’ಕುರಿತು ಸಂಪುಟದಲ್ಲಿ ದಾಖಲಿಸಲಿದ್ದು ಒಟ್ಟು 8 ಸಂಪುಟಗಳಲ್ಲಿ ಇದು ಮೂಡಿಬರಲಿದೆ.

ದಕ್ಷಿಣ ಭಾರತದಲ್ಲಿ ಹೊಸ ಪ್ರಯತ್ನ: ಈ ಕುರಿತಂತೆ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ನೇತೃತ್ವದಲ್ಲಿ ಸದ್ಯದಲ್ಲೇ ಸಭೆ ನಡೆಯಲಿದ್ದು ಅಲ್ಲಿ ವಿಷಯ ಜೋಡಣೆ ಮತ್ತು ಸಮಗ್ರ ಸಂಪುಟದ ರೂಪರೇಷಗಳ ಕುರಿತು ಚರ್ಚೆ ನಡೆಯಲಿದೆ. ಡಿಸೆಂಬರ್‌ನಲ್ಲಿ ಮುದ್ರಣ ಕಾರ್ಯ ಆರಂಭವಾಗಲಿದೆ.

ಈ ಬಗ್ಗೆ”ಉದಯವಾಣಿ’ಯೊಂದಿಗೆ  ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ಮಾತನಾಡಿ, ದಲಿತ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಚರಿತ್ರೆ ದಾಖಲಿಸಲು ಇದು ಮೂಲ ಆಕಾರ ಗ್ರಂಥವಾಗಲಿದೆ. ದಲಿತ ಸಾಹಿತ್ಯದ ಬದಲಾವಣೆ ಕುರಿತಂತೆ ದಕ್ಷಿಣ ಭಾರತದಲ್ಲಿ ಇಂತಹ ಯಾವುದೇ ಪ್ರಯತ್ನ ನಡೆದಿಲ್ಲ.ಆ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಪುಟ ಹೊರತರುವ ಕುರಿತು ಸಲಹೆ ನೀಡಿದೆ.  

ದಲಿತ ಸಾಹಿತ್ಯದ ಮೇಲೆ ಬಂಡಾಯ ಮತ್ತು ನವ್ಯ ಸಾಹಿತ್ಯದ ಪ್ರಭಾವವೂ ಇರುವುದರಿಂದ ಅನೇಕ ರೀತಿಯ ಬದಲಾವಣೆಗಳಿಗೂ ಸಾಕ್ಷಿಯಾಗಿದೆ. ಹೀಗಾಗಿ, ಸಾಹಿತ್ಯ ಸಂಪುಟ ತರುತ್ತಿರುವುದು ಸೂಕ್ತವಾಗಿದೆ  ಎಂದು ಹೇಳಿದರು.

25ಲಕ್ಷ ರೂ. ಯೋಜನೆ: ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಸಮಗ್ರ ಸಂಪುಟ ಹೊರತರಲು ಮುಂದಾಗಿದೆ.ದಲಿತ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು, ಕೃತಿಗಳು ಒಂದು ಕಡೆ ಸಿಗಲಿ ಎಂಬ ಆಶಯ ಕೂಡ ಇದರಲ್ಲಿದೆ.ಈ ಯೋಜನೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಸುಮಾರು 25 ಲಕ್ಷ ರೂ.ಗಳನ್ನ ಮೂಡುಪಾಗಿಟ್ಟಿದೆ ಎಂದು ಕಸಾಪದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಕಸಾಪ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ. ದಲಿತ ಸಾಹಿತ್ಯಕ್ಕೆ ಸಂಬಂಧಿಸಿದ ಸಮಗ್ರ ಸಂಪುಟ ಹೊರತರಲಾಗುತ್ತಿದ್ದು,ಮಾರ್ಚ್‌ನಲ್ಲಿ ಬಿಡುಗಡೆಗೊಳ್ಳಲಿದೆ.
-ಡಾ.ಮನುಬಳಿಗಾರ್‌, ಕಸಾಪ ಅಧ್ಯಕ್ಷ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next