Advertisement
ಚೀನಾದಲ್ಲಿ ಜಾನ್, ಕೊರಿಯಾದಲ್ಲಿ ಸಿಯೋನ್, ಜಪಾನಿನಲ್ಲಿ ಝೆನ್ ಎಂದು ಪರಿಚಯದಲ್ಲಿರುವ ತತ್ವ ಮೂಲತಃ ನಮ್ಮ ಸಂಸ್ಕೃತ ಪದವಾದ ‘ಧ್ಯಾನ’ದಿಂದ ಹುಟ್ಟಿಕೊಂಡಿರುವಂಥದ್ದು. ಅದು ಪಾಲಿ ಲಿಪಿಯಲ್ಲಿ ಝಾನ ಆಗಿ ಕೊನೆಗೆ ಝೆನ್ ಎಂಬ ಹೆಸರಿನಿಂದ ಸುಪ್ರಸಿದ್ಧವಾಗಿದೆ. ಝೆನ್ ತತ್ವವನ್ನು ಅನುಸರಿಸುವ ಮತ್ತು ಪಾಲಿಸುವ ಜನರು ತಮ್ಮದು ಝೆನ್ ತತ್ವ ಎಂದು ಪರಿಚಯಿಸಿಕೊಳ್ಳುತ್ತಾರೆ. ಹಾಗೆ ಝೆನ್ ತತ್ವವನ್ನು ಸಾರುವ ಧರ್ಮ ಝೆನ್ ಎಂದೇ ಕರೆಸಿಕೊಳ್ಳುತ್ತದೆ. ಸಾಮಾನ್ಯ ಜನರಿಗೆ ಝೆನ್ ಪದ ಕೇಳಿದ ತತ್‌ಕ್ಷಣ ನೆನಪಾಗುವುದು ಕಾರು – ಮಾರುತಿ ಝೆನ್. ಅದು ಬೌದ್ಧ ಧರ್ಮದ ಒಂದು ಕವಲು ತತ್ವ ಎಂದು ಎಲ್ಲರಿಗೂ ತಿಳಿದಿಲ್ಲ. ಝೆನ್ ಬಗ್ಗೆ ಕೇಳಿ ತಿಳಿದವರಿಗೂ ಹೆಚ್ಚಾಗಿ ಪರಿಚಯವಿರುವುದು ಝೆನ್ ಕತೆಗಳಷ್ಟೆ.
ಇಲ್ಲೊಂದು ಉದಾಹರಣೆಯನ್ನು ನೋಡಿ: ಜಿಜ್ಞಾಸುವಾದ ಒಬ್ಬ ಭಿಕ್ಷು ಝೆನ್ ಗುರುವಿನ ಬಳಿ ಬಂದಾಗ ಪ್ರಶ್ನೋತ್ತರಗಳು ಪ್ರಾರಂಭವಾದವು.
“ಗುರುವೇ ಮಾರ್ಗ ಯಾವುದು?’
“ನೇರ ನಿನ್ನ ಕಣ್ಣೆದುರೇ ಕಾಣುತ್ತಿದೆಯಲ್ಲ!’
“ನನಗೇಕೆ ಅದು ಕಾಣಿಸುತ್ತಿಲ್ಲ?’
“ಏಕೆಂದರೆ, ನೀನು ಬರೀ ನಿನ್ನ ಬಗ್ಗೆಯೇ ಚಿಂತಿಸುತ್ತಿರುವೆ.’
“ಹಾಗಾದರೆ ನಿಮಗದು ಕಾಣುತ್ತಿದೆಯಾ?’
“ನಾನು – ನೀನು ಎಂಬ ದ್ವಂದ್ವವನ್ನೇ ಕಾಣುತ್ತಿರುವ ತನಕ ನಿನ್ನ ಕಣ್ಣುಗಳು ಮಂಜಾಗಿರುತ್ತವೆ.’
“ನಾನು ಎಂಬುದಾಗಲೀ, ನೀನು ಎಂಬುದಾಗಲೀ ಮರೆಯಾದಾಗ ಅದನ್ನು ಕಾಣುವುದಕ್ಕಾದೀತೇ?’
“ನಾನು – ನೀನು ಎಂಬುದು ನಮ್ಮಿಂದ ದೂರವಾದಾಗ, ಅದನ್ನು ನೋಡಬೇಕು ಎಂದು ಅಪೇಕ್ಷಿಸುವವರಾದರೂ ಯಾರು?’
ಬೋಧಿ ಧರ್ಮ ಚೀನಾಕ್ಕೆ ಹೋಗಿ ಅಲ್ಲಿನ ರಾಜನನ್ನು ಭೇಟಿಯಾಗಿ ಶೂನ್ಯತಣ್ತೀದ ಬಗ್ಗೆ ವಿವರಿಸಿದನಂತೆ. ಬೌದ್ಧ ಧರ್ಮದಲ್ಲಿ ಅದನ್ನು ಸನ್ನಾಟ ಶೂನ್ಯತೆ ಎಂದು ಕರೆಯುತ್ತಾರೆ. ಆ ಮಹಾರಾಜನು ಬೋಧಿ ಧರ್ಮನಿಗೆ ತಾನು ಮಾಡಿದ ಧರ್ಮಕಾರ್ಯಗಳನ್ನು ವಿವರಿಸತೊಡಗಿದ. ಆಗ ಬೋಧಿಧರ್ಮ ಅವೆಲ್ಲ ನಿಷ್ಫಲವಾದದ್ದು ಎಂದ. ಅದಕ್ಕೆ ರಾಜ, “ಹಾಗಾದರೆ ನಿಶ್ಚಲವಾದ ಸತ್ಯ ಯಾವುದು?’ ಎಂದು ಪ್ರಶ್ನೆಯೊಡ್ಡಿದ. “ಮಹಾಶೂನ್ಯದಲ್ಲಿ ನಿಶ್ಚಲವೆಂಬುದೂ ಇಲ್ಲ, ಸತ್ಯವೆಂಬುದೂ ಇಲ್ಲ’ ಎಂದು ಬೋಧಿಧರ್ಮ ಉತ್ತರಿಸಿದನಂತೆ. ಮಹಾರಾಜ ಕೋಪಗೊಂಡು ಹಾಗಾದರೆ “ಇಷ್ಟೆಲ್ಲ ಮಾತನಾಡುತ್ತಿರುವ ನೀನು ಯಾರು?’ ಎಂದು ಕೇಳಿದನಂತೆ.
“ಅದು ನನಗೇ ತಿಳಿಯದು’ ಎಂದಿದ್ದನಂತೆ ಬೋಧಿಧರ್ಮ.
ಝೆನ್ ತತ್ವ ಹುಟ್ಟಿಕೊಂಡಿದ್ದು ಬುದ್ಧನಿಂದಲೇ. ಬುದ್ಧ, ತನ್ನ ಶಿಷ್ಯನಾದ ಕಶ್ಯಪನಿಗೆ ಹೇಳುತ್ತಾನೆ, “ಧರ್ಮದ ಮೂಲ ಧರ್ಮ ಎಂದಲ್ಲ. ಅದಕ್ಕೆ ಧರ್ಮವೇ ಇಲ್ಲ. ಧರ್ಮದ ಶೂನ್ಯತೆ ಕೂಡ ಧರ್ಮವೇ, ಅದೂ ಸುಳ್ಳಲ್ಲ’ ಇವೇ ಝೆನ್ ಮೂಲಗಳೆಂದು ಬೌದ್ಧ ಸಂಪ್ರದಾಯಗಳು ಭಾವಿಸುತ್ತವೆ.
ಝೆನ್‌ನ ಮೊದಲ ಗುರು ಕಶ್ಯಪ (ಬುದ್ಧನ ಶಿಷ್ಯ). ಅವನಿಂದ ನೇರವಾಗಿ ಈ ಜ್ಞಾನ ಪ್ರಸರಿಸುತ್ತಾ, ಗುರುವಿನಿಂದ ಗುರುವಿಗೆ ಮೌಖೀಕವಾಗಿ ಹರಿಯುತ್ತಾ ಬಂತು ಎಂಬುದು ಝೆನ್ ಪಂಥೀಯರ ಅಭಿಪ್ರಾಯ. ಅದನ್ನು ಅವರು ಸಮಾಸಮ್ ಬುದ್ಧ ಎಂದೂ ಕೂಡ ಕರೆಯುತ್ತಾರೆ. ಹಾಗೆಂದರೆ ಬುದ್ಧನಿಗೆ ಸರಿಸಮಾನನಾದವನು ಎಂದರ್ಥ ಮತ್ತು ಧರ್ಮವನ್ನು ಅರಿತು, ಧರ್ಮವನ್ನು ತಿಳಿಸಿಕೊಡಲು ಯೋಗ್ಯನಾದವನು ಎಂದರ್ಥ. ಮಹಾಕಶ್ಯಪನ ಅನಂತರ ಬಂದ ಎರಡನೇ ಗುರು ಆನಂದ, ಬುದ್ಧನ ಶಿಷ್ಯ ಹಾಗೂ ಸಂಬಂಧಿ.
Related Articles
Advertisement
ಒಮ್ಮೆ ಒಬ್ಬ ಭಿಕ್ಷು, ಗುರುಗಳ ಬಳಿ ಬಂದು ಕೇಳಿದ, “ನನ್ನ ಮನಸ್ಸಿನಲ್ಲಿ ಯಾವುದೇ ಚಿಂತೆಗಳಿಲ್ಲ. ಹೀಗಿರುವ ಮನಸ್ಥಿತಿ ಸರಿಯಾದದ್ದು ಅಲ್ಲವೇ ಗುರುಗಳೇ?’ “ಚಿಂತೆಗಳನ್ನು ತೆಗೆದು ಹೊರಬಿಸಾಕು’ ಎಂದರು ಗುರುಗಳು. “ನನಗೆ ಚಿಂತೆಗಳೇ ಇಲ್ಲವಲ್ಲ. ಬಿಸಾಕುವುದಾದರೂ ಏನನ್ನು?’
“ನಿನ್ನ ಮನಸ್ಸಿನಲ್ಲಿ ಚಿಂತೆಗಳೇ ಇಲ್ಲವೆಂದು ಚಿಂತಿಸುತ್ತಿದ್ದೀಯಲ್ಲ. ಅದನ್ನ ಬಿಸಾಕು! ಇಟ್ಟುಕೊಳ್ಳುವುದಾದರೆ ನಿನ್ನಿಷ್ಟ’ ಎಂದನಂತೆ ಗುರು. ಇಬ್ಬರು ಭಿಕ್ಷುಗಳು ನಿಂತು ಎದುರಿಗಿದ್ದ ಧ್ವಜವನ್ನು ನೋಡುತ್ತಿದ್ದರು. ಜೋರಾಗಿ ಗಾಳಿ ಬೀಸುತ್ತಿತ್ತು. ಅದರಲ್ಲಿ ಒಬ್ಬ ಭಿಕ್ಷು “ಚಲಿಸುತ್ತಿರುವುದು ಗಾಳಿಯಲ್ಲ, ಧ್ವಜ’ ಎಂದ. ಇನ್ನೊಬ್ಬ ಅದಕ್ಕೆ ವಿರುದ್ಧವಾಗಿ, “ಇಲ್ಲ ಗಾಳಿಯೇ ಚಲಿಸುತ್ತಿರುವುದು. ಆದ್ದರಿಂದ ಧ್ವಜ’ ಎಂದ. ಅಲ್ಲೇ ನಡೆದುಹೋಗುತ್ತಿದ್ದ ಮತ್ತೂಬ್ಬ ಇವರಿಬ್ಬರ ವಾದಗಳನ್ನು ಕೇಳಿ ತನ್ನ ತೀರ್ಮಾನ ಹೇಳಿದ, “ಗಾಳಿಯೂ ಚಲಿಸುತ್ತಿಲ್ಲ, ಧ್ವಜವೂ ಚಲಿಸುತ್ತಿಲ್ಲ; ಚಲಿಸುತ್ತಿರುವುದು ನಿಮ್ಮ ಚಿತ್ತ.’ ಗುರುವೊಬ್ಬನ ಬಳಿಗೆ ಯೂನಿವರ್ಸಿಟಿ ಪ್ರೊಫೆಸರ್ ಒಬ್ಬ ಝೆನ್ ತತ್ವದ ಬಗ್ಗೆ ತಿಳಿದುಕೊಳ್ಳಲು ಬಂದ. ತನಗೆ ತಿಳಿದಿದ್ದನ್ನೆಲ್ಲ ಹೇಳಿದ ಮೇಲೆ ಪ್ರೊಫೆಸರ್ ಕೇಳಿದ, “ಗುರುಗಳೇ ಝೆನ್ ತತ್ವದಲ್ಲೇನಿದೆ?’
ಗುರು ಆಗಷ್ಟೇ ತನ್ನ ಅತಿಥಿಗೆ ಟೀ ಮಾಡಿಕೊಂಡು ತಂದಿದ್ದ. ಪ್ರೊಫೆಸರ್ ಎದುರು ಒಂದು ಖಾಲಿ ಕಪ್ ಇರಿಸಿ ಅದರೊಳಗೆ ಟೀ ಸುರಿಯತೊಡಗಿದ. ಕಪ್ ತುಂಬಿದ ಮೇಲೂ ಸುರಿಯುತ್ತಲೇ ಇದ್ದ. ಪ್ರೊಫೆಸರ್ ಹೇಳಿದ, “ಗುರುಗಳೇ ಕಪ್ ತುಂಬಿ ಚೆಲ್ಲುತ್ತಿದೆ.’
ಗುರು ಹೇಳಿದ, “ನೀನು ಕೂಡ ಈ ಕಪ್‌ನಂತೆ ಅಭಿಪ್ರಾಯಗಳಿಂದ ತುಂಬಿ ತುಳುಕುತ್ತಿದ್ದೀ. ನೀನು ಖಾಲಿಯಾಗದಿದ್ದರೆ ಝೆನ್ ಅಂದರೇನು ಅಂತ ಹೇಗೆ ಹೇಳಲಿ?’ ಗುರು ಹಾಗೂ ಶಿಷ್ಯ ಆಶ್ರಮಕ್ಕೆ ಮರಳುತ್ತಿದ್ದರು. ಸಂಜೆ ಹೊತ್ತು ಆಗಷ್ಟೇ ಮಳೆ ಹೊಯ್ದಿತ್ತು. ರಸ್ತೆಯಲ್ಲೊಂದು ಸಣ್ಣ ಹಳ್ಳ. ಅದು ತುಂಬಿ ಹರಿಯುತ್ತಿತ್ತು. ಅದರ ಪಕ್ಕದಲ್ಲೇ ಹೆಂಗಸೊಬ್ಬಳು ನಿಂತು ಹಳ್ಳ ದಾಟುವುದು ಹೇಗೆಂದು ಚಿಂತಿಸುತ್ತಿದ್ದಳು.
ಗುರು ಅವಳ ಬಳಿ ಹೋಗಿ ಅವಳನ್ನೆತ್ತಿಕೊಂಡು ಹಳ್ಳ ದಾಟಿಸಿ ರಸ್ತೆಯ ಈ ಬದಿಗೆ ತಂದು ಬಿಟ್ಟ ಅನಂತರ ಗುರುಶಿಷ್ಯರು ಆಶ್ರಮಕ್ಕೆ ಹೋದರು.
ರಾತ್ರಿ ಶಿಷ್ಯ ಕೇಳಿದ, “ಗುರುಗಳೇ ಸನ್ಯಾಸಿಗಳಾದ ನಾವು ಹೆಂಗಸನ್ನು ಮುಟ್ಟಬಾರದಲ್ಲವೇ?’
“ಹೌದು ಮುಟ್ಟಬಾರದು.’
“ಆದರೆ ನೀವು ಆ ಹೆಂಗಸನ್ನು ಎತ್ತಿ ಹಳ್ಳ ದಾಟಿಸಿದಿರಿ?’
ಅದಕ್ಕೆ ಗುರು ಹೇಳಿದನಂತೆ, “ನಾನು ಅವಳನ್ನು ಹಳ್ಳ ದಾಟಿಸಿ ರಸ್ತೆಯ ಈ ಬದಿಗೆ ಬಿಟ್ಟು ಬಂದೆ. ನೀನಿನ್ನೂ ಅವಳನ್ನು ಹೊತ್ತುಕೊಂಡೇ ಇದ್ದೀಯೆ.’
ಚುಟುಕಾದ ಝೆನ್ ಕತೆಗಳು ಝೆನ್ ತತ್ವಗಳನ್ನು ಹೀಗೆ ಚುರುಕಾಗಿ ಹೇಳುತ್ತವೆ. – ರೂಪಾ ಅಯ್ಯರ್ ; roopaiyer.ica@gmail.com