ಎಚ್.ಡಿ.ಕೋಟೆ: ಬರಗಾಲ ಹಾಗೂ ಬೇಸಿಗೆಯ ತಾಪಮಾನದಿಂದ ತತ್ತರಿಸಿದ್ದ ಇಳೆಗೆ ತಾಲೂಕಿನ ವಿವಿಧೆಡೆ ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಕಳೆದ ವರ್ಷ ನಿರೀಕ್ಷೆ ಪ್ರಮಾಣದಲ್ಲಿ ಮಳೆಯಾಗದೆ ಸತತ ಬರಗಾಲ ಎದುರಾಗಿ ರೈತರು ತತ್ತರಿಸಿ ಹೋಗಿದ್ದರು.
ಕುಡಿಯುವ ನೀರಿಗಾಗಿ ಜನ ಜಾನುವಾರುಗಳು ಪಡುತ್ತಿರುವ ಬವಣೆ ಹೇಳ ತೀರದಾಗಿದೆ. ಹಿಂದೆಂದೂ ಕಂಡರಿಯದಷ್ಟು ಬೇಸಿಗೆಯ ಬಿಸಿಲಿನ ತಾಪಮಾನ ಕಾಡಲಾರಂಭಿಸಿದೆ. ಕಳೆದ ಒಂದು ತಿಂಗಳಿಂದ ಬಿಸಿಲಿನ ಝಳಕ್ಕೆ ಬಸವಳಿದಿದ್ದ ಎಚ್.ಡಿ.ಕೋಟೆ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಕೆಲಕಾಲ ಸುರಿದ ಮಳೆ ಕೊಂಚ ತಂಪರೆಯಿತಾದರೂ ಕೃಷಿ ಚಟುವಟಿಕೆಗೆ ಉಪಯೋಗವಾಗಿರಲಿಲ್ಲ.
ಬುಧವಾರ ತಡರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಭಾರಿ ಗುಡುಗು ಸಿಡಿಲಿನೊಂದಿಗೆ ಆರಂಭಗೊಂಡ ಬಿರುಗಾಳಿ ಸಮೇತ ಬಿದ್ದ ಮಳೆ ಸುಮಾರು ಒಂದೂವರೆ ತಾಸಿಗೂ ಅಧಿಕಕಾಲ ಬೀಳುವ ಮೂಲಕ ಬಿಸಿಲಿನ ತಾಪದಿಂದ ಉರಿಯುತ್ತಿದ್ದ ಭೂಮಿಯನ್ನು ತಂಪುಗೊಳಿಸಿತು.
ನೀರಿಲ್ಲದೇ ಬಿಸಿಲಿನಿಂದ ಬಸವಳಿದ್ದ ಭೂಮಿಗೆ ಬಿದ್ದ ಹದವಾದ ಮಳೆಯಿಂದ ಕೊಂಚ ಖುಷಿಗೊಂಡ ತಾಲೂಕಿನ ಹಲವು ರೈತರು ಗುರುವಾರ ಮುಂಜಾನೆಯಿಂದಲೇ ಟ್ರ್ಯಾಕ್ಟರ್‌ಗಳಲ್ಲಿ ಭೂಮಿ ಉಳುಮೆ ಮಾಡಿಸುವ ಮೂಲಕ ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ಈ ಅವಧಿಯಲ್ಲಿ ಇನ್ನೊಮ್ಮೆ ಮಳೆ ಬಿದ್ದರೆ ಬಿತ್ತನೆ ನಡೆಸಲು ಸಜಾಗಲಿದ್ದಾರೆ.
ಹತ್ತಿ ಬೀಜ ದಾಸ್ತಾನು ಮಾಡಿಕೊಳ್ಳಿ: ರೈತರ ವಾಣಿಜ್ಯ ಬೆಳೆಯಾದ ಹತ್ತಿ ತಾಲೂಕಿನಲ್ಲಿ ಬೆಳೆಯುವ ಹತ್ತಿಗೆ ನೆರೆಯ ತಮಿಳುನಾಡಿನಲ್ಲಿ ವಿಶೇಷ ಬೇಡಿಕೆ ಇದೆ. ಹತ್ತಿ ಬಿತ್ತನೆ ಜೀಜ ಖರೀದಿ ಸಂದರ್ಭದಲ್ಲಿ ರೈತರನ್ನು ನಿಯಂತ್ರಿಸಲು ಸಾಧ್ಯವಾಗದೇ ಗೋಲಿಬಾರ್‌ಗೆ ರೈತನೊಬ್ಬ ಪ್ರಾಣತೆತ್ತ ನಿದರ್ಶನ ಇದ್ದು, ತಾಲೂಕಿನಲ್ಲಿ ಮಳೆಯಾಗುತ್ತಿದ್ದಂತೆಯೇ ಹತ್ತಿ ಬಿತ್ತನೆ ಕಾರ್ಯ ಆರಂಭಿಸುವ ರೈತರಿಗೆ ಸಮರ್ಪಕವಾಗಿ ಬಿತ್ತನೆಗೆ ಬೇಕಾಗುಷ್ಟು ಹತ್ತಿ ಬೀಜ ಶೇಖರಣೆಗೆ ಸರ್ಕಾರ ಈಗಿಂದಲೇ ದಾಸ್ತಾನು ಮಾಡಿಕೊಳ್ಳಬೇಕಿದೆ.