ಮುಂಬೈ: ಸೂಟ್ ಕೇಸ್ ನೊಳಗೆ ತುಂಬಿದ್ದ 20ರ ಹರೆಯದ ಪ್ರಸಿದ್ಧ ರೂಪದರ್ಶಿಯೊಬ್ಬಳ ಶವ ಮುಂಬೈನ ಮಲಾಡ್ ನಲ್ಲಿ ಪತ್ತೆಯಾಗಿದ್ದು, ಪೊಲೀಸರು ಪ್ರಕರಣದ ಸಂಬಂಧ 19 ವರ್ಷದ ಯುವಕನನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ಕೊಲೆಗೀಡಾದ ರೂಪದರ್ಶಿಯನ್ನು ಮಾನ್ಸಿ ದೀಕ್ಷಿತ್ ಎಂದು ಗುರುತಿಸಲಾಗಿದೆ. ಈಕೆ ರಾಜಸ್ಥಾನ್ ಮೂಲದವಳಾಗಿದ್ದು ಮುಂಬೈನ ಅಂಧೇರಿಯ ಫ್ಲ್ಯಾಟ್ ವೊಂದರಲ್ಲಿ ವಾಸವಾಗಿದ್ದಳು. ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದ ಮಾನ್ಸಿ ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಳು ಎಂದು ವರದಿ ತಿಳಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಕ್ಯಾಬ್ ಡ್ರೈವರ್ ನೀಡಿದ ಸುಳಿವಿನ ಮೇರೆಗೆ ಯುವಕನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಮುಝಾಮ್ಮಿಲ್ ಸಯ್ಯದ್ ಎಂಬಾತ ರೂಪದರ್ಶಿಯ ದೇಹವನ್ನು ಸೂಟ್ ಕೇಸ್ ನೊಳಗೆ ತುಂಬಿ ಕಾರಿನಲ್ಲಿ ಕೊಂಡೊಯ್ದಿದ್ದ. ಸಂಶಯಗೊಂಡ ಕ್ಯಾಬ್ ಡ್ರೈವರ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಯಲ್ಲಿ ಸಯ್ಯದ್ ನನ್ನು ವಶಕ್ಕೆ ಪಡೆದಿರುವುದಾಗಿ ವಿವರಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಸಯ್ಯದ್ ಪರಿಚಯವಾಗಿದ್ದು, ಆತ ಮಾನ್ಸಿಯನ್ನು ತನ್ನ ಮನೆಗೆ ಆಹ್ವಾನಿಸಿದ್ದ. ಸೋಮವಾರ ಮಾನ್ಸಿ ಸಯ್ಯದ್ ಮನೆಗೆ ಹೋದಾಗ ಇಬ್ಬರ ನಡುವೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ರೋಪ್ ನಲ್ಲಿ ಆಕೆಯ ಕುತ್ತಿಗೆಯನ್ನು ಬಿಗಿದು ಹತ್ಯೆಗೈದಿರುವುದಾಗಿ ತಿಳಿಸಿದ್ದಾರೆ.
ಬಳಿಕ ಈತ ಆಕೆಯ ದೇಹವನ್ನು ಸೂಟ್ ಕೇಸ್ ನೊಳಗೆ ತುಂಬಿ, ಕ್ಯಾಬ್ ಬುಕ್ ಮಾಡಿ ಅದರಲ್ಲಿ ಹೋಗಿದ್ದ. ತದನಂತರ ಮಲಾಡ್ ಪ್ರದೇಶಕ್ಕೆ ಹೋಗುವಂತೆ ಕ್ಯಾಬ್ ಚಾಲಕನಿಗೆ ಸೂಚಿಸಿದ್ದ. ಅಲ್ಲಿಂದ ನಿರ್ಜನ ಪ್ರದೇಶದಲ್ಲಿ ಸೂಟ್ ಕೇಸ್ ಅನ್ನು ಎಸೆದು, ಕಾರನ್ನು ಬಿಟ್ಟು ರಿಕ್ಷಾ ಹತ್ತಿ ಪರಾರಿಯಾಗಿರುವುದಾಗಿ ವರದಿ ತಿಳಿಸಿದೆ.