Advertisement

ಡಾ|ಕೇದಾರಿ ಧನವಾಡೆಯ ಮಾದರಿ ಕೃಷಿ

04:55 PM Nov 14, 2022 | Kavyashree |

ವಿಜಯಪುರ: ಮಳೆ ಸಮಸ್ಯೆ, ವರ್ಷದಲ್ಲಿ ಎರಡು ಬಾರಿ ಬಿತ್ತನೆಗೆ ಕಾಳು, ಆಳು, ಕಳೆ ಅಂತೆಲ್ಲ ಹೆಣಗಾಟಕ್ಕೆ ವಿದಾಯ ಹೇಳಲು ಬಹುತೇಕರು ತೋಟಗಾರಿಕೆಗೆಗೆ ಮೊರೆ ಹೋಗುತ್ತಿದ್ದಾರೆ. ಆದರೆ ನೀರಿನ ಸಮಸ್ಯೆ, ಉತ್ತಮ ಗುಣಮಟ್ಟದ ಸಸಿಗಳ ಪೂರೈಸುವ ನರ್ಸರಿಗಳ ಅಭಾವವೂ ರೈತರನ್ನು ಕಾಡುತ್ತಿವೆ. ತೋಟಗಾರಿಕೆಯಲ್ಲಿ ಸಂಶೋಧನೆ ಮಾಡಿ ಉನ್ನತ ಪದವಿ ಪಡೆದಿರುವ ಡಾ|ಕೇದಾರಿ ಧನವಾಡೆ ಇಂಥದ್ದಕ್ಕೆಲ್ಲ ಪರಿಹಾರ ಕಂಡು ಹಿಡಿದಿದ್ದಾರೆ.

Advertisement

ಧಾರವಾಡದಲ್ಲಿ ತೋಟಗಾರಿಕೆ ವಿಷಯದಲ್ಲಿ ಪದವಿ, ಮಹಾರಾಷ್ಟ್ರದ ರಾಹುರಿ ವಿವಿಯಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಸಂಶೋಧನೆ ಪಡೆದ ಕೇದಾರಿ ಅದೇ ವಿವಿಯಲ್ಲಿ ಸೀನಿಯರ್‌ ವಿಜ್ಞಾನಿಯಾಗಿ ಕೆಲಸ ಮಾಡುತ್ತಲೇ, ಸಣ್ಣದಾಗಿ ನರ್ಸರಿ ಉದ್ಯಮವನ್ನೂ ಆರಂಭಿಸಿದ್ದರು. ಈ ಹಂತದಲ್ಲೇ ಕೇದಾರಿ ಅವರ ಅಣ್ಣ ಉಲ್ಲಾಸ ಅಕಾಲಿಕ ಸಾವು ಕೌಟುಂಬಿಕ ತಲ್ಲಣಕ್ಕೆ ಕಾರಣವಾಗಿ ತವರೂರು ಧನವಾಡಕ್ಕೆ ಬಂದರು. ತಂದೆ ಖಂಡೋಬಾ ಅವರು ನೀಡಿದ 3 ಎಕರೆ ಬಂಜರು ಭೂಮಿಯಲ್ಲಿ 42 ಕೊಳವೆ ಬಾವಿ ಕೊರೆಯಿಸಿದರೂ ಬೊಗಸೆ ನೀರು ಸಿಕ್ಕಿರಲಿಲ್ಲ. ತಂದೆ ಮಾಡಿದ್ದ ದ್ರಾಕ್ಷಿ ನೀರಿಲ್ಲದೇ ಒಣಗಿತ್ತು.

ಅಂತಿಮವಾಗಿ ತಾನು ಕಲಿತ ತೋಟಗಾರಿಕೆ ಪದವಿ, ಸಂಶೋಧನೆಯನ್ನೇ ತನ್ನ ಜೀವನದ ಸಾಧನೆಗೆ ಮೆಟ್ಟಿಲಾಗಿಸಿಕೊಂಡರು.ಫಲವಾಗಿ ಕೊರೆಸಿದ 43ನೇ ಕೊಳವೆ ಬಾವಿಯಲ್ಲಿ ಅರ್ಧ ಇಂಚು ಜೀವಸೆಲೆ ಉಕ್ಕಿತ್ತು. ಅದನ್ನೇ ನಂಬಿ 1ಎಕರೆ ಮಿಶ್ರಬೆಳೆಗಳ ತೋಟಗಾರಿಕೆಗೆ ಮುಂದಾದರು. ತಮ್ಮೂರಿನ ಪರಿಸರಕ್ಕೆ ಒಗ್ಗುವ ಭಾರತೀಯ ತಳಿ ಮಾತ್ರವಲ್ಲ ವಿದೇಶಿ ತಳಿ ಗುರುತಿಸಿದರು.ಈ ಹಂತದಲ್ಲಿ ತೋಟದಲ್ಲೇ ವಾಸ್ತವ್ಯಕ್ಕೆ ಕಟ್ಟುತ್ತಿದ್ದ ಮನೆ ಬುನಾದಿಯಲ್ಲೇ ಮಳೆ ನೀರು ಸಂಗ್ರಹದ ಬೃಹತ್‌ ತೊಟ್ಟಿ ಮಾಡಿಕೊಂಡರು. ಬಸಿಯುತ್ತಿದ್ದ ಕೊಳವೆ ಬಾವಿ ನೀರು ಸಂಗ್ರಹಕ್ಕೆ ಸಣ್ಣದೊಂದು ನೀರಿನ ತೊಟ್ಟಿ ಮಾಡಿಕೊಂಡು ಏಡಿಗಳನ್ನು ಸಾಕಿ ಮಾರಾಟ ಮಾಡಿದರು.

ನೇರಳೆ, ಮಾವು, ಹಲಸು ಅಂತೆಲ್ಲ ಹಲವು ವೈವಿಧ್ಯ ತಳಿಯ ಹಣ್ಣಿನ ಸಸಿ ನೆಟ್ಟು ಮರಗಳಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮ ಇವರ ಬಳಿ ಪಿಕೆಎಂ, ಸ್ವೀಟ್‌ ಟಮರೀನ್‌ ಸೇರಿದಂತೆ ನಾಲ್ಕಾರು ಬಗೆಯ 50 ಹುಣಸೆ ಮರಗಳಿವೆ. ಸೀತಾಫಲ, ರಾಮಫಲ, ಲಕ್ಷ್ಮಣಫಲ ಸೇರಿದಂತೆ 163 ಮರಗಳಿವೆ. ಈಚೆಗೆ ಅತಿ ಹೆಚ್ಚು ಬೇಡಿಕೆ ಇರುವ ಸಿದ್ದು, ಜಿಗಿರಹಿತ, ಪ್ರೇಮ್‌ಚಂದ, ರುದ್ರಾಕ್ಷಿ ತಳಿ, ಕಾಂಚನ ತಳಿಯ 60 ಹಲಸು ಹಣ್ಣಿನ ಮರಗಳೂ ಇವೆ. ವರ್ಷ ಪೂರ್ತಿ ಎಲ್ಲ ಋತುಗಳಲ್ಲೂ ಹಣ್ಣು ನೀಡುವ ವಿದೇಶಿ ತಳಿಯ ಮಾವು, ಕಾಟಿಮೋನಿ, ಮಿಯಾಜಾಕಿ, ಕೇಸರ್‌, ಮಲ್ಲಿಕಾ, ಬೇನಿಶ ಸೇರಿದಂತೆ ವಿವಿಧ ತಳಿಯ 52 ಮಾವಿನ ಮರಗಳಿವೆ.

ಡೈಮಂಡ್‌, ಧೂಪದಾಳ, ಬದಾಮ, ಜಂಬು ನೆರಳೆ, ಬಿಳಿ ನೇರಳೆ ಸೇರಿ 180 ನೇರಳೆ ಇದೆ. ಕಾಗಿj, ಶ್ವೇತಾಂಬರಿ, ಶರಬತಿ, ಸೀಡ್‌ ಲೆಸ್‌ ಸೇರಿದಂತೆ ಹಲವು ಜಾತಿ ಲಿಂಬೆಯ 60 ಗಿಡಗಳಿವೆ. ತೋಟದ ಸುತ್ತ ನೆಟ್ಟಿರುವ ನುಗ್ಗೆ ಸದಾ ಹೂ ಬಿಡುವ ಕಾರಣ ನೈಸರ್ಗಿಕ ಪರಾಗಕ್ಕಾಗಿ ಜೇನುಹುಳುಗಳುತೋಟದಲ್ಲಿ ಗೂಡು ಕಟ್ಟಿವೆ. ತೋಟದಲ್ಲಿ ಹಣ್ಣು ಮಾರುವ ಜತೆಗೆ ತಮ್ಮಂತೆ ನೀರಿನ ಅಭಾವ ಇರುವ ರೈತರ ಅನುಕೂಲಕ್ಕಾಗಿ ತಮ್ಮೂರ ಗ್ರಾಮದೇವತೆ ವಾಗ್ದೇವಿ ಹೆಸರಿನಲ್ಲಿ ನರ್ಸರಿ ಆರಂಭಿಸಿದ್ದಾರೆ.

Advertisement

ತಮ್ಮ ಬಳಿ ಸಸಿಗಳು ಲಭ್ಯವಿಲ್ಲದ ಸಂದರ್ಭದಲ್ಲಿ ತಮ್ಮದೇ ಸಮಾನ ಮನಸ್ಕ ಹಾಗೂ ವಿಶ್ವಾಸಾರ್ಹ ಸಸಿ ತರಿಸಿ ರೈತರಿಗೆ ನೀಡುತ್ತಾರೆ. ತೋಟದಲ್ಲಿನ ಕಳೆ ನಿರ್ವಹಣೆಗೆ ವಿವಿಧ ತಳಿಗಳ ದೇಶಿ ಕೋಳಿಗಳನ್ನು ಸಾಕಿದ್ದಾರೆ. ಫೈಟರ್‌ 200, ಗಿರಿರಾಜ 900, ಖಡಕನಾಥ 300, ಡಿಪಿ ಕ್ರಾಸ್‌ 500, 5 ಬಾತುಕೋಳಿ ಸೇರಿದಂತೆ ಕೋಳಿಗಳ ನಿತ್ಯದ ಆಹಾರದ ಶೇ.80 ಸಮಸ್ಯೆಗೆ ತೋಟದಲ್ಲಿನ ಕಳೆಯಲ್ಲೇ ಸಿಗುತ್ತಿದೆ. ಜತೆಗೆ ಕಳೆ ತೆಗೆಯುವ ಕಾರ್ಮಿಕರ ಖರ್ಚು ಉಳಿಸಿದ್ದು, ತೋಟದಲ್ಲಿ ಒಂದೇ ಒಂದು ಕಸ-ಕಳೆಯ ಕುರುಹು ಇಲ್ಲ. ತೋಟದಲ್ಲಿನ ಗಿಡಗಳಿಗೆ ಕೋಳಿ ಗೊಬ್ಬರ ಉಚಿತವಾಗಿ ಸಿಗುತ್ತಿದೆ.

ಇನ್ನು ತೋಟದಲ್ಲಿ ಕೋಳಿಗಳನ್ನು ಸಾಕುವ ಕಾರಣ ಹಾವು, ಮುಂಗುಸಿ, ಹೆಗ್ಗಣ, ಬೆಕ್ಕು, ಹದ್ದುಗಳಂಥ ಜೀವಿಗಳಿಂದ ರಕ್ಷಣೆಗಾಗಿ 1 ಜೋಡಿ ಟರ್ಕಿ, ಒಂದು ಜೋಡಿ ಗಿನಿಪೌಲ್‌ ಕೋಳಿಗಳು ಸಾಕಿದ್ದು, ಇವರು ಸೈನಿಕನಂತೆ ರಕ್ಷಣೆ ನೀಡುತ್ತಿವೆ. ಹವ್ಯಾಸಕ್ಕೆ ಪಾರಿವಾಳಗಳೂ ಇವರ ತೋಟದ ಗೂಡಿನಲ್ಲಿ ಆಶ್ರಯ ಪಡೆದಿವೆ.ಪಕ್ಕದಲ್ಲಿನ ಇನ್ನೊಂದು ಎಕರೆ ಜಮೀನನ್ನೂ ಇದೀಗ ತೋಟವಾಗಿ ಪರಿವರ್ತನೆ ಮಾಡಿಕೊಂಡಿದ್ದು, ಎರಡು ಎಕರೆ ಜಮೀನಿಗೆ ಸಿಮೆಂಟ್‌ ಬ್ಲಾಕ್‌ ರಕ್ಷಣಾ ಗೋಡೆ ಮಾಡಿಕೊಂಡಿದ್ದಾರೆ.

ತೋಟದಲ್ಲಿ ನಿರ್ಮಿಸಿರುವ ವಾಸದ ಮನೆಗೆ ಸೋಲಾರ್‌ ಅಳವಡಿಸಿದ್ದು, ಇದರಲ್ಲೇ ನೀರಿನ ತೊಟ್ಟಿ ನೀರು ಬಳಸಲು, ಮನೆಯಲ್ಲಿ ನಾಲ್ಕಾರು ಬಲ್ಬ್ಗಳು, ಮೂರು ಫ್ಯಾನು, ಒಂದು ಟಿವಿ ಅಂತೆಲ್ಲ ವಿದ್ಯುತ್‌ ಸ್ವಾವಲಂಬಿತನವನ್ನೂ ಸಾಧಿಸಿದ್ದಾರೆ. ಒಂದು ಬಾರಿ 50 ಸಾವಿರ ಬಂಡವಾಳ ಹೂಡಿದರೆ ವಿದ್ಯುತ್‌ ಸಮಸ್ಯೆ ಇಲ್ಲ ಎಂಬುದು ಇವರ ವಾದ.

ನೀರಿನ ಅಭಾವದ ಮಧ್ಯೆಯೂ ಮಿಶ್ರ ಬೆಳೆ ತೋಟಗಾರಿಕೆ ಜತೆಗೆ ಕಳೆ ನಿರ್ವಹಣೆಗೆ ಕೋಳಿ ಸಾಕುತ್ತಿರುವ ಕೇದಾರಿ, ಸಾವಯವ ಕೃಷಿಗಾಗಿ ಅಗತ್ಯ ಇರುವ ಗೊಬ್ಬರಕ್ಕಾಗಿ ದೇಶಿ ಗೋವುಗಳು, ಗೊಬ್ಬರದ ಜತೆಗೆ ಹೆಚ್ಚಿನ ಆದಾಯಕ್ಕೆ ಕುರಿ, ಮೇಕೆ ಸಾಕಾಣಿಕೆಯ ಗುರಿ ಹಾಕಿಕೊಂಡಿದ್ದಾರೆ.

ಒಣ ಬೇಸಾಯದಲ್ಲಿ ಹಾಗೂ ಕಡಿಮೆ ನೀರಿನಲ್ಲಿ ಡ್ರಿಪ್‌ ಸಹಿತ 1 ಎಕರೆ ಮಾದರಿ ತೋಟಗಾರಿಕೆ ರೂಪಿಸಲು 1.10 ಲಕ್ಷ ರೂ. ವೆಚ್ಚದಲ್ಲಿ 1300 ಸಸಿಗಳನ್ನು ನೆಟ್ಟು ಕೊಡುವ ಗುತ್ತಿಗೆ ಪಡೆಯುತ್ತಾರೆ. ಗುತ್ತಿಗೆ ನೀಡುವ ಮುನ್ನ ರೈತರ ಜಮೀನು, ನೀರಿನ ಪರಿಸ್ಥಿತಿ, ಹವಾಮಾನವನ್ನೆಲ್ಲ ಖುದ್ದು ಅಧ್ಯಯನ ಮಾಡುತ್ತಾರೆ. ಬಳಿಕ ಮಾಡಿಕೊಂಡ ಒಪ್ಪಂದಂತೆ ನೀರಿನ ಅಭಾವ ಇದ್ದರೂ ರೈತರ ಜಮೀನಿಗೆ ಒಗ್ಗಿಕೊಂಡು ಬೆಳೆಯುವ ವಿವಿಧ ಜಾತಿ, ತಳಿಗಳ ಹಣ್ಣಿನ ಸಸಿ ನೆಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಹೇಗೆಲ್ಲ ಆದಾಯ ಬರುತ್ತೆ?

ಸೀತಾಫಲದಿಂದ ಕಳೆದ ವರ್ಷ ಪ್ರತಿ ಕೆಜಿಗೆ 160 ರೂ.ನಂತೆ ಬೆಂಗಳೂರಿನ ಹಾಪ್‌ ಕಾಮ್ಸ್‌ಗೆ ಮಾರಾಟ ಮಾಡಿ 5 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಸ್ಥಳೀಯವಾಗಿಯೇ ನೇರಳೆ ಗುತ್ತಿಗೆ ನೀಡಿ 1.80 ಲಕ್ಷ ರೂ. ಆದಾಯ ಪಡೆದಿದ್ದಾರೆ. ಕೋಳಿಗಳಿಂದ ನಿತ್ಯವೂ 5-6 ನೂರು ಮೊಟ್ಟೆಗಳು ಸಿಗುತ್ತಿದ್ದು, ಸ್ಥಳೀಯವಾಗಿ 8 ರೂ., ವಿಜಯಪುರ ಮಾರುಕಟ್ಟೆಯಲ್ಲಿ 10 ರೂ. ನಂತೆ ಮಾರಾಟ ಮಾಡಿ ವಾರ್ಷಿಕ ಖರ್ಚೆಲ್ಲ ಕಳೆದು 5ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ ‌

ಕಡಿಮೆ ನೀರಿದ್ದರೂ ತೋಟ

ಇವರ ಸಾಧನೆಗೆ ಮಾರು ಹೋಗಿರುವ ರಾಜ್ಯದ ಕಲಬುರಗಿ ಆಳಂದ ಅರವಿಂದ ಪಾಟೀಲ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ದೇಶರಟ್ಟಿ ಕ್ರಾಸ್‌ನ ಬಾಹುಬಲಿ ಜೈನ್‌, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಹುಲಕುಂಡ ಗೋವಿಂದ ಗೌಡಪ್ಪಗೋಳ, ಚಡಚಣ ತಾಲೂಕಿನ ಬರಡೋಲ ಮಹೇಶ ಚೌಧರಿ ಹಲವರು ಇವರ ನೆರವಿನಿಂದ ಕಡಿಮೆ ನೀರಿದ್ದರೂ ತೋಟ ಮಾಡಿದ್ದಾರೆ.

-ಜಿ.ಎಸ್‌. ಕಮತ್

 

Advertisement

Udayavani is now on Telegram. Click here to join our channel and stay updated with the latest news.

Next