ಮುಂಬಯಿ: ಮೋಡೆಲ್ ಕೋ. ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದರ ಮಲಾಡ್ ಪಶ್ಚಿಮದ ಓರೆಲಮ್ ಶಾಖೆಯನ್ನು ಸ್ಥಾನೀಯ ಟ್ಯಾಂಕ್ ರೋಡ್‌ನಲ್ಲಿನ ಪರ್ಲಿ ಶೆಲ್ಫ್ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಗುರುವಾರ ಪೂರ್ವಾಹ್ನ ಉದ್ಘಾಟಿಸಲಾಯಿತು.
ಮೋಡೆಲ್ ಬ್ಯಾಂಕಿನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ. ಡಿ’ಸೋಜಾ ಅಧ್ಯಕ್ಷತೆಯಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ಅವರ್ ಲೇಡಿ ಆಫ್ ಲೂರ್ಡ್ಸ್
ಚರ್ಚ್ ಓರೆಲಮ್ ಮಲಾಡ್ ಇದರ ಪ್ರಧಾನ ಧರ್ಮಗುರು ರೆ| ಫಾ| ಸೆಡ್ರಿಕ್ ರೊಸಾರಿಯೋ ಅವರು ರಿಬ್ಬನ್ ಕತ್ತರಿಸಿ ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಿ, ದೀಪ ಬೆಳಗಿಸಿ ಆಶೀರ್ವಚನಗೈದು ಬ್ಯಾಂಕಿಂಗ್ ಸೇವೆಗಳಿಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಮೋಡೆಲ್ ಬ್ಯಾಂಕಿನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ. ಡಿ’ಸೋಜಾ ಅವರು, ಮೋಡೆಲ್ ಬ್ಯಾಂಕ್ ಎಲ್ಲ ಸಮಯದಲ್ಲೂ ಗ್ರಾಹಕರ ಆಸಕ್ತಿದಾಯಕ ಮತ್ತು ಉಪಯುಕ್ತ ಸೇವೆಗಳನ್ನು ಪರಿಗಣಿಸುತ್ತಾ ಗ್ರಾಹಕರ ಇಚ್ಛಾನುಸಾರ ಕಾರ್ಯಪ್ರವೃತ್ತವಾಗುತ್ತಿದೆ. ಜಾಗತೀಕರಣ ಮತ್ತು ಕೊರೊನಾದ ಸಂದಿಗ್ಧ ಸಮಯದಲ್ಲಿ ಹೆಚ್ಚು ಪರಿಣಾಮಕಾರಿ ಕಾರ್ಯತಂತ್ರಗಳೊಂದಿಗೆ ಸೇವಾ ನಿರತರಾಗಲು ವಿಸ್ತೃತ ಮತ್ತು ಅನುಕೂಲಕರ ಸ್ಥಳಗಳಲ್ಲಿ ಶಾಖೆಗಳ ಸ್ಥಳಾಂತರಿಸಲಾಗಿದೆ. ಈ ಮೂಲಕ ಮೋಡೆಲ್ ಬ್ಯಾಂಕ್ ಬ್ಯಾಂಕಿಂಗ್ ಭವಿಷ್ಯವನ್ನು ಬಲಪಡಿಸುತ್ತಿದೆ. ಪ್ರಸ್ತುತ ವರ್ಷದಲ್ಲಿ ನಮ್ಮದೇ ಆದ ಐಎಫ್‌ಎಸ್‌ಸಿ ಕೋಡ್ ಅನ್ನು ಸಕ್ರಿಯಗೊಳಿಸಲು ಬ್ಯಾಂಕ್‌ಗೆ ಸಾಧ್ಯವಾಗಿದೆ. ಇದು ನೆಫ್ಟ್ ಮತ್ತು ಆರ್‌ಟಿಜಿಎಸ್ ವಹಿವಾಟುಗಳನ್ನು ವೇಗವಾಗಿ ಪ್ರಕ್ರಿಯೆಗೊಳಿಸಲು ಅನುವು ಮಾಡಿಕೊಟ್ಟಿದ್ದು, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ನಲ್ಲಿ ಐಎಂಪಿಎಸ್ ಮತ್ತು ಯುಪಿಐ ಪಾವತಿ ಪ್ಲ್ಯಾಟ್‌ಫಾರ್ಮ್ಗಳನ್ನು ಒದಗಿಸಿದೆ. ನಮ್ಮ ಬ್ಯಾಂಕ್ ವೈಶಿಗಳೊಂದಿಗೆ ಇತರ ಸೇವೆಗಳನ್ನು ಪರಿಚಯಿಸಿ ಶೈಕ್ಷಣಿಕ ಮತ್ತು ಇತರ ಸಂಸ್ಥೆಗಳಿಗೆ ಆನ್‌ಲೈನ್ ಶುಲ್ಕ ಪಾವತಿಗಳನ್ನು ಸ್ವೀಕರಿಸಲು, ಆಕರ್ಷಕ ಚಿನ್ನದ ಸಾಲ ಯೋಜನೆಯನ್ನು ಪ್ರಾರಂಭಿಸಿದೆ. ಆರ್‌ಬಿಐಯ ಸೇವಾ ನಿರ್ವಹಣೆ, ನಿಯಂತ್ರಕತೆ, ಕಾರ್ಯಾಚರಣೆಯ ಜತೆಗೂ ನಮ್ಮ ಗ್ರಾಹಕರು ಮತ್ತು ಷೇರುದಾರರ ಬೆಂಬಲದೊಂದಿಗೆ ಬ್ಯಾಂಕ್ ಸದೃಢವಾಗಿ ಬೆಳೆದು ನಿಂತಿದೆ ಎಂದು ತಿಳಿಸಿದರು.
ಬ್ಯಾಂಕಿನ ನಿರ್ದೇಶಕರಾದ ಸಿಎ ಪೌಲ್ ನಝರೆತ್, ಸಂಜಯ್ ಶಿಂಧೆ, ಜೆರಾಲ್ಡ್ ಕಡೋìಜಾ, ಆ್ಯನ್ಸಿ ಡಿ’ಸೋಜಾ, ಪ್ರಧಾನ ಪ್ರಬಂಧಕ ಝೆನೊನ್ ಡಿ’ಕ್ರೂಜ್, ಸಹಾಯಕ ಪ್ರಧಾನ ಪ್ರಬಂಧಕ ನರೇಶ್ ಠಾಕೂರ್, ಶಾಖಾ ಪ್ರಬಂಧಕ ಲಾರೇನ್ಸ್ ನೊರೋನ್ಹಾ ಮತ್ತಿತರ ಗಣ್ಯರು ಹಾಜರಿದ್ದು ಶುಭಹಾರೈಸಿದರು.
ಬ್ಯಾಂಕಿನ ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು, ಬ್ಯಾಂಕಿನ ಷೇರುದಾರರು, ಸ್ಥಾನೀಯ ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಆಲ್ಬರ್ಟ್ ಡಿ’ಸೋಜಾ ಉಪಸ್ಥಿತ ಗಣ್ಯರಿಗೆ ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಸಹಾಯಕ ಪ್ರಧಾನ ಪ್ರಬಂಧಕ ಓಸ್ಡೆನ್ ಫೂನ್ಸೆಕಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಝೆನೊನ್ ಡಿಕ್ರೂಜ್ ವಂದಿಸಿದರು.
-ಚಿತ್ರ- ವರದಿ : ರೋನ್ಸ್ ಬಂಟ್ವಾಳ್