Advertisement

ಟವರ್‌ ಇದ್ದರೂ ಬೆಟ್ಟ-ಗುಡ್ಡ  ಅಲೆಯುವುದು ತಪ್ಪುತ್ತಿಲ್ಲ

12:32 PM Aug 13, 2018 | |

ಬೆಳ್ಳಾರೆ : ಇಂದು ಹಳ್ಳಿ ಹಳ್ಳಿಗಳಲ್ಲೂ ಡಿಜಿಟಲ್‌ ಯುಗ ಕಾಲಿಟ್ಟಿದೆ. ಆದರೆ ಈ ಊರಲ್ಲಿ ಟವರ್‌ ಅಸ್ತಿತ್ವದಲ್ಲಿದ್ದು ಆದರೂ ಸಿಗ್ನಲ್‌ಗಾಗಿ ಬೆಟ್ಟ-ಗುಡ್ಡಗಳಿಗೆ ಅಲೆಯುವುದು ತಪ್ಪಿಲ್ಲ. ಅಂತರ್ಜಾಲದ ಸೇವೆ ತೀರಾ ನಿಧಾನಗತಿಯಲ್ಲಿದೆ. ಇದು ಬೆಳ್ಳಾರೆಯ ಸಮೀಪದಲ್ಲಿಯೇ ಇರುವ ಕೋಟೆಮುಂಡುಗಾರು ಹಾಗೂ ಆಸುಪಾಸಿನ ಪ್ರದೇಶದ ಮೊಬೈಲ್‌ ಬಳಕೆದಾರರ ಅಳಲು.

Advertisement

ಕಳಂಜ ಗ್ರಾಮದ ಹಾಗೂ ಶೇಣಿ ಭಾಗದ ಜನರ ಅವಿರತವಾದ ನಿರಂತರ ಹೋರಾಟದೊಂದಿಗೆ, ಸಂಸದರ ಶಿಫಾರಸ್ಸಿನ ಮೇರೆಗೆ ಕಳೆದ ವರ್ಷವೇ ಕೋಟೆಮುಂಡುಗಾರಿನಲ್ಲಿ ಬಿಎಸ್ಸೆನ್ನೆಲ್‌ ಟವರ್‌ ಅಳವಡಿಕೆಯಾಗಿತ್ತು. ಮೊದಮೊದಲು ಬಹಳ ಉತ್ತಮ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಟವರ್‌ ಇತ್ತೀಚೆಗೆ ಲೆಕ್ಕಕ್ಕುಂಟು, ಆಟಕ್ಕಿಲ್ಲ ಎಂಬಂತಾಗಿದೆ. ಅಸ್ತಿತ್ವದಲ್ಲಿದ್ದರೂ ಉಪಯೋಗಕ್ಕೆ ಸಿಗುತ್ತಿಲ್ಲ. ಮಳೆ ಬಂದರೆ ಸ್ಥಗಿತಗೊಳ್ಳುವ ಟವರ್‌ ಮತ್ತೆ ದುರಸ್ತಿಯಾಗಲು ಸಾಕಷ್ಟು ದಿನಗಳೇ ಹಿಡಿಯುತ್ತಿವೆ. ಪದೇ ಪದೇ ದುರಸ್ತಿಗೆ ಬರುತ್ತಿದೆ.

ಗ್ರಾಮಸ್ಥರ ಮೂಗಿಗೆ ತುಪ್ಪ ಸವರಲು ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಟವರ್‌ಅನ್ನು ಬಿಎಸ್ಸೆನ್ನೆಲ್‌ ಅಳವಡಿಕೆ ಮಾಡಿತೇ? ಇದಕ್ಕೆ ಬಳಸಿದ ಬಿಡಿ ಭಾಗಗಳು ತೀರಾ ಕಳಪೆ ದರ್ಜೆಯದಾಗಿವೆ. ಟವರ್‌ಗೆ ಬಳಸುವ ವಿದ್ಯುತ್‌ ಜನರೇಟರ್‌ ಕೂಡ ಹಾಳಾಗಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಾಗಲೆಲ್ಲ ಟವರ್‌ ಕೆಲಸ ಮಾಡುವುದನ್ನೇ ನಿಲ್ಲಿಸುತ್ತದೆ. ಆಗ ಸಂವಹನ ನಡೆಸಬೇಕಾದರೆ ಮೊಬೈಲ್‌ ಹಿಡಿದು ಗುಡ್ಡ, ಮರಗಳನ್ನು ಏರಬೇಕಾಗುತ್ತದೆ.

3ಜಿ ಮಾಡಲು ಹೋಗಿ ಹದಗೆಟ್ಟಿತು
ಇತ್ತೀಚೆಗೆ ಟವರ್‌ ಅಳವಡಿಸಿರುವ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು 2ಜಿಯಿಂದ 3ಜಿಗೆ ಬದಲಾಯಿಸಿ ಹೋಗಿದ್ದಾರೆ. ‘ಇದ್ದದ್ದೂ ಹೋಯಿತು ಮದ್ದಿನ ಗುಣಕ್ಕೆ’ ಎಂಬಂತೆ ಮದಲು ತಕ್ಕಮಟ್ಟಿಗೆ ಇದ್ದ ಸಿಗ್ನಲ್‌, ಆಮೇಲೆ ಪೂರ್ಣ ಕ್ಷೀಣಗೊಂಡಿತು. ಈ ಭಾಗದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಸಹಿತ ಗರಿಷ್ಠ ಸಂಖ್ಯೆಯ ಮೊಬೈಲ್‌ ಬಳಕೆದಾರರು ಅಂತರ್ಜಾಲವನ್ನೂ ಉಪಯೋಗಿಸುತ್ತಿದು, ದುರ್ಬಲ ಸಿಗ್ನಲ್‌ ನಿಂದ ಬೇಸತ್ತು ಖಾಸಗಿ ನೆಟ್‌ ವರ್ಕ್‌ ಕಡೆಗೆ ಮುಖ ಮಾಡಿದ್ದಾರೆ.

ಊರಿನಲ್ಲಿರುವ ಜನರನ್ನೆಲ್ಲ ಸೇರಿಸಿ ಬಳಕೆದಾರರ ವೇದಿಕೆ ರಚಿಸಲಾಗಿದ್ದು, ಆ ಮೂಲಕ ಈ ಸಮಸ್ಯೆ ಪರಿಹಾರಕ್ಕಾಗಿ ಲಿಖಿತವಾಗಿ ಹಾಗೂ ಮೌಖಿಕವಾಗಿ ದೂರು ನೀಡಿದ್ದರೂ ಬಗೆ ಹರಿದಿಲ್ಲ. ಅಧಿಕಾರಿಗಳು ಹಾಗೂ ಬಿಎಸ್ಸೆನ್ನೆಲ್‌ ತಂತ್ರಜ್ಞರು ವಾರಕ್ಕೆ ಎರಡು-ಮೂರು ಸಲ ಬಂದು ಟವರ್‌ ಪರಿಶೀಲಿಸುತ್ತಿದ್ದರೂ ದುರಸ್ತಿಯಾಗಿಲ್ಲ.

Advertisement

ಗುಡ್ಡ ಹತ್ತದೆ ವಿಧಿಯಿಲ್ಲ
ಮೊದಲೆಲ್ಲ ಉತ್ತಮವಿದ್ದ ಸಿಗ್ನಲ್‌ ಇದೀಗ ಬಹಳ ದುರ್ಬಲಗೊಂಡಿದೆ. ನಮ್ಮ ಮನೆಯ ಯಾವ ಮೊಬೈಲ್‌ಗೆ ಕರೆ ಮಾಡಿ ದರೂ ನಾಟ್‌ ರೀಚೆಬಲ್‌ ಎಂಬ ಸಂದೇಶವೇ ಬರುತ್ತಿದೆ ಎಂದು ಸಂಬಂಧಿಕರು, ಸ್ನೇಹಿತರು ಬಯ್ಯುತ್ತಿದ್ದಾರೆ. ಟವರ್‌ ಹತ್ತಿರದಲ್ಲೇ ಇದ್ದರೂ ಪದೇ ಪದೇ ಸಮಸ್ಯೆಯಾಗುತ್ತಿದೆ. ಇದಕ್ಕಾಗಿ ಗುಡ್ಡ ಅಲೆಯಬೇಕಾಗಿದೆ. ಬೇರೆ ವಿಧಿಯಿಲ್ಲ.
 - ಶ್ರೀಕೃಷ್ಣ ಕೋಟೆ.
    ಬಿಎನ್ನೆನ್ನೆಲ್‌ ಬಳಕೆದಾರ

 ಬಾಲಚಂದ್ರ ಕೋಟೆ

Advertisement

Udayavani is now on Telegram. Click here to join our channel and stay updated with the latest news.

Next