ಮಂಗಳೂರು: ಕಳ್ಳತನ ಅಥವಾ ಬೇರೆ ಯಾವುದೇ ರೀತಿಯಲ್ಲಿ ಮೊಬೈಲ್ ಫೋನ್ ಕಳೆದುಕೊಂಡರೆ ಅದನ್ನು ಬ್ಲಾಕ್ ಮಾಡಲು ದೂರಸಂಪರ್ಕ ಇಲಾಖೆ ಹೊಸ ವಿಧಾನ ಜಾರಿಗೆ ತಂದಿದೆ.
ಮೊಬೈಲ್ ಫೋನ್ ಕಳೆದುಹೋದ ಕೂಡಲೇ KSP E-Lost ಅಪ್ಲಿಕೇಶನ್‌ನಲ್ಲಿ ದೂರು ಸಲ್ಲಿಸಿ ಡಿಜಿಟಲ್ ಇ-ಸ್ವೀಕೃತಿ ಪಡೆದುಕೊಳ್ಳಬೇಕು.
ಕಳೆದುಕೊಂಡಿರುವ ಮೊಬೈಲ್ ನಂಬರ್‌ನ ನಕಲಿ ಸಿಮ್ ಕಾರ್ಡ್‌ನ್ನು ಈ ಹಿಂದೆ ಸೇವೆ ಪಡೆಯುತ್ತಿದ್ದ ಸರ್ವಿಸ್ ಪ್ರೊವೈಡರ್‌ನಿಂದ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಓಟಿಪಿ ಪಡೆಯಲು ಅದನ್ನು ಚಾಲನೆ ಮಾಡಿಟ್ಟುಕೊಳ್ಳಬೇಕು. ಅನಂತರ www.ceir.gov.in ವೆಬ್‌ಸೈಟ್‌ಗೆ ಹೋಗಿ ಕಳೆದುಕೊಂಡ ಮೊಬೈಲ್ ಫೋನ್‌ನ ಮಾಹಿತಿ ನಮೂದಿಸಬೇಕು. ಮಾಹಿತಿ ನಮೂದಿಸಿದ 24 ಗಂಟೆಗಳೊಳಗೆ ಮೊಬೈಲ್ ಫೋನ್ ಬ್ಲಾಕ್ ಆಗುತ್ತದೆ.
ಒಂದು ವೇಳೆ ಮೊಬೈಲ್ ಫೋನ್ ಪತ್ತೆಯಾದರೆ CEIR ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಅನ್‌ಬ್ಲಾಕ್ ಮಾಡಿ ಉಪಯೋಗಿಸಬಹುದು. ಅಲ್ಲದೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೂ CEIR ಪೋರ್ಟಲ್ ಮೂಲಕ ಮೊಬೈಲ್‌ಫೋನ್ ಬ್ಲಾಕ್ ಮಾಡಲಾಗುವುದು. ಪತ್ತೆಯಾದರೆ ಅನ್‌ಬ್ಲಾಕ್ ಮಾಡಲಾಗುವುದು.
ಮೊಬೈಲ್ ಕಳೆದುಕೊಂಡರೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಬ್ಲಾಕ್ ಮಾಡಿಸುವುದು ಅಗತ್ಯ ಎಂದು ಪೊಲೀಸರು ತಿಳಿಸಿದ್ದಾರೆ.