ಸುಳ್ಯ: ಲಾಕ್‌ಡೌನ್‌ನ ಬಿಸಿ ಮೊಬೈಲ್ ಬಳಕೆದಾರರಿಗೂ ತಟ್ಟಿದೆ. ಮೊಬೈಲ್ ರಿಚಾರ್ಜ್ ಅಂಗಡಿಗಳು ಬಂದ್ ಆಗಿ ಹಲವು ದಿನಗಳು ಕಳೆದಿದ್ದು, ಅವುಗಳನ್ನೇ ನಂಬಿರುವ ಗ್ರಾಮಾಂತರ ಪ್ರದೇಶಗಳ ಬಳಕೆದಾರರು ಕರೆನ್ಸಿ ಹಾಕಲು ಸಾಧ್ಯವಾಗದೆ ಅಗತ್ಯ ಸಂದರ್ಭಗಳಲ್ಲಿ ಸಂವಹನ ಸಾಧ್ಯವಾಗದೆ ಪರಿತಪಿಸುವಂತಾಗಿದೆ.
ನೆಟ್ ಬ್ಯಾಂಕಿಂಗ್ ಮೂಲಕ ರೀಚಾರ್ಜ್ ಮಾಡಬಹುದಾದರೂ ಬ್ಯಾಂಕ್ ಖಾತೆಗಳಲ್ಲಿ ಹಣ ಇದ್ದರೆ ಮಾತ್ರ ಅದು ಸಾಧ್ಯ.
ಗ್ರಾಮೀಣ ಜನರ ಖಾತೆಯಲ್ಲಿ ಹಣ ಇರುವುದು ಅಪರೂಪ.
ಇದರಿಂದಾಗಿ ಹಲವರ ಮೊಬೈಲ್‌ಗಳು ಈಗಲೇ ನಾಟ್ ರೀಚೆಬಲ್ ಎನ್ನಲಾರಂಭಿಸಿವೆ. ಅಗತ್ಯ ವಸ್ತುಗಳ ಜತೆಗೆ ಕರೆನ್ಸಿ ಹಾಕಲು ವ್ಯವಸ್ಥೆ ಇದೆಯೇ ಎಂದು ಜನರು ಪ್ರಶ್ನಿಸಲಾರಂಭಿಸಿದ್ದಾರೆ.
ಇಂಟರ್‌ನೆಟ್ ಪ್ಯಾಕ್ ಮುಗಿದ ಕಾರಣ ಸಾಮಾಜಿಕ ಜಾಲ ತಾಣಗಳ ವೀಕ್ಷಣೆಯೂ ಕಡಿಮೆಯಾಗುತ್ತಿದೆ. ದೇಶ ಹಾಗೂ ಹೊರದೇಶಗಳಲ್ಲಿರುವ ಮನೆ ಮಂದಿ, ಬಂಧುಗಳನ್ನು ಸಂಪರ್ಕಿಸಲು ದೂರವಾಣಿಯೇ ಪ್ರಮುಖ ಸಾಧನವಾಗಿದ್ದು, ಅದರ ಮೇಲೂ ಪರಿಣಾಮ ಬೀರಲಿದೆ.
ಟಿವಿ ಕರೆನ್ಸಿಗೂ ಬರ ಆವಶ್ಯಕ ಸೇವೆಗಳಷ್ಟೇ ಸದ್ಯ ಲಭ್ಯವಿರುವುದರಿಂದ ಟಿವಿ ಕರೆನ್ಸಿ ರೀಚಾರ್ಜ್ ಅಂಗಡಿಗಳೂ ಬಂದ್ ಆಗಿವೆ. ಹಲವು ಮನೆಗಳಲ್ಲಿ ಟಿವಿಗಳು ಕರೆನ್ಸಿ ಖಾಲಿಯಾಗಿ ಮೌನಕ್ಕೆ ಶರಣಾಗಿವೆ. ಲಾಕ್‌ಡೌನ್ ಕಾರಣ ಮನೆಯಲ್ಲೇ ಇರುವ ಮಂದಿಗೆ ಸಮಯ ಕಳೆಯಲು ಇರುವ ಟಿವಿ ಮಾಧ್ಯಮವೂ ದೂರವಾದಂತಾಗಿದೆ.