Advertisement

ಯುವತಿಯ ಜೀವ ಉಳಿಸಿದ ಮೊಬೈಲ್‌ ಕರೆ

10:41 PM Jun 12, 2020 | Sriram |

ಕುಂದಾಪುರ: ಪತಿ ಮನೆಯವರ ಹಿಂಸೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಿಂದ ದೂರ ಬಂದಾಕೆ ಅಂಗಡಿಯಾತನ ಕಾರ್ಯಕ್ಷಮತೆಯಿಂದ ಮರಳಿ ತವರಿಗೆ ಸೇರಿದ ಘಟನೆ ಕುಂದಾಪುರದ ಬಸ್‌ ನಿಲ್ದಾಣದಲ್ಲಿ ನಡೆದಿದೆ.

Advertisement

ಕುಂದಾಪುರ ಹೊಸ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ ಬುಕ್ಕಿಂಗ್‌ ಸಹಿತ ಫ್ಯಾನ್ಸಿ ಅಂಗಡಿಯಿರಿಸಿದ ಆಗಸ್ಟಿನ್‌ ಅವರ ಅಂಗಡಿಗೆ ಬುರ್ಖಾ ಧರಿಸಿದ ಯುವತಿಯೊಬ್ಬರು ಬಂದು, ಒಂದು ದೂರವಾಣಿ ಕರೆ ಮಾಡಬೇಕಿದ್ದು ಕಾಯಿನ್‌ ಬಾಕ್ಸ್‌ ಎಲ್ಲಿದೆ ಎಂದು ವಿಚಾರಿಸಿದರು. ಅವರು ದುಗುಡದಿಂದ ಇರುವುದನ್ನು ಗಮನಿಸಿದ ಆಗಸ್ಟಿನ್‌ ಏನೋ ಎಡವಟ್ಟಾಗಿದೆ ಎಂದು ಭಾವಿಸಿದವರೇ ಕಾಯಿನ್‌ ಬಾಕ್ಸ್‌ ಇಲ್ಲ ,ಬೇಕಾದರೆ ನನ್ನ ಮೊಬೈಲ್‌ನಿಂದ ಕರೆ ಮಾಡು ಎಂದು ಮೊಬೈಲ್‌ ನೀಡಿದರು. ಯುವತಿ ಮಾತನಾಡಿದ ಬಳಿಕ ಮೊಬೈಲ್‌ ಹಿಂತಿರುಗಿಸಿ ನಡೆದರು.

ಆಗ ಮತ್ತೆ ಮೊಬೈಲ್‌ ರಿಂಗಣಿಸಿತು. ಅತ್ತಲಿಂದ ನಾವು ಮುರ್ಡೇಶ್ವರದಿಂದ ಮಾತನಾಡುತ್ತಿರುವುದು, ಈಗ ಈ ನಂಬರ್‌ನಿಂದ ಕಾಲ್‌ ಮಾಡಿದಾಕೆ ನನ್ನ ಮಗಳು. ಅವಳು ಜೀವಕ್ಕೆ ಅಪಾಯ ಮಾಡಿಕೊಳ್ಳುವ ಸಾಧ್ಯತೆ ಇದೆ. ದಯವಿಟ್ಟು ಅವಳನ್ನು ಹೇಗಾದರೂ ಮಾಡಿ ಅಲ್ಲಿಯೇ ಇರುವಂತೆ ಮಾಡಿ. ನಾವು ಕೂಡಲೇ ಬರುತ್ತೇವೆ ಎಂದರು. ನಿಲ್ದಾಣದ ಅನತಿದೂರ ಕ್ರಮಿಸಿದ್ದ ಯುವತಿಯನ್ನು ಮನೆಯವರ ವಿನಂತಿಯಂತೆ ಅಂಗಡಿಗೆ ಕರೆ ತಂದು ಕೂರಿಸಿದ ಆಗಸ್ಟಿನ್‌ ಅವರು ಕಾರೊಂದರಲ್ಲಿ ಆತಂಕದಿಂದ ಆಗಮಿಸಿದ ಯುವತಿಯ ಮನೆಯವರಿಗೆ ಯುವತಿಯನ್ನು ಜತೆಯಾಗಿಸಿದರು.

ಎಂಜಿನಿಯರ್‌ ಮುಗಿಸಿರುವ ನನ್ನ ಮಗಳು ಇದೀಗ ಮಾನಸಿಕವಾಗಿ ಜರ್ಝರಿತಳಾಗಿದ್ದಾಳೆ. ಆಕೆಯ ಗಂಡನ ಮನೆಯವರು ಇದಕ್ಕೆ ಕಾರಣ. ಎರಡು ವರ್ಷಗಳ ಹಿಂದೆ ಒಳ್ಳೆಯ ಸಂಬಂಧ ಎಂದು ವಿದೇಶದಲ್ಲಿ ಉತ್ತಮ ಕೆಲಸದಲ್ಲಿರುವ ಹೊನ್ನಾವರದ ನಿವಾಸಿಗೆ ಮದುವೆ ಮಾಡಿ ಕೊಟ್ಟಿದ್ದೇವೆ. ಆದರೆ ಅಂದಿನಿಂದ ಇಂದಿನವರೆಗೂ ಗಂಡನ ಮನೆಯವರಿಂದ ಅವಳಿಗೆ ದೈಹಿಕ, ಮಾನಸಿಕ ಹಿಂಸೆ ದೊರೆಯಿತೇ ವಿನಾ ಸುಖ, ನೆಮ್ಮದಿ ದೊರೆಯಲಿಲ್ಲ. ರಾಜಿ ಸಂಧಾನಗಳು ವಿಫ‌ಲವಾದವು. ಬಡತನದಲ್ಲಿರುವ ನಮಗೆ ಹೊರೆ ಯಾಗಬಾರದು ಎಂಬ ಕಾರಣಕ್ಕೆ ಗಂಡನ ಮನೆಯವರ ಹಿಂಸೆ ಸಹಿಸಿ ತಾಳಲಾಗದೇ ಇಲ್ಲಿಗೆ ಎಲ್ಲರಿಂದಲೂ ದೂರವಾಗಲು ಬಂದಿದ್ದಳು ಎಂದು ಆಕೆಯ ತಂದೆ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next