Advertisement

ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್‌ ಆ್ಯಪ್‌ ಬಳಕೆ

10:18 AM Sep 28, 2018 | |

ಸುಳ್ಯ: ರೈತರು ಬೆಳೆದ ಬೆಳೆ ಪಹಣಿ ಪತ್ರದಲ್ಲಿ ನಿಖರವಾಗಿ ದಾಖಲಾಗದೆ ಇರುವು ದರಿಂದ ಸರಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ತೊಂದರೆ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್‌ ಆ್ಯಪ್‌ ಮೂಲಕ ಮುಂಗಾರು ಬೆಳೆಯ ಸಮೀಕ್ಷೆಯನ್ನು ನಡೆಸಲು ಸರಕಾರ ಯೋಜನೆ ರೂಪಿಸಿದೆ.

Advertisement

ಸರಕಾರಿ ಅಧಿಕಾರಿಗಳು ಅಲ್ಲದೆ ಸ್ಥಳೀಯ ಖಾಸಗಿ ಯುವಕರನ್ನು ಬಳಸಿ ಕೊಳ್ಳುತ್ತಿರುವುದು ಈ ಬಾರಿಯ ವಿಶೇಷ. ಸ್ಮಾರ್ಟ್‌ಫೋನ್‌ ಹೊಂದಿರುವ ಸ್ಥಳೀಯ ಯುವಕರನ್ನು ಸಮೀಕ್ಷೆಗೆ ನೇಮಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಆ್ಯಪ್‌ ಕುರಿತು ನಾಲ್ಕು ತರಬೇತಿ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಯ ಜಂಟಿ ಅಧಿಕಾರಿಗಳ ತಂಡ ರಚಿಸಿದ್ದು, ತರಬೇತಿ ನೀಡಲಾಗಿದೆ.

ಮುಂಗಾರು ಫ‌ಸಲು ಸಮೀಕ್ಷೆಗೆ ಒಳಪಡುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ಸೆ. 14ರಂದು ವೀಡಿಯೋ ಕಾನ್ಫರೆನ್ಸ್‌ ನಡೆಸಿದ್ದಾರೆ. ಸಮೀಕ್ಷೆಯ ಸಿದ್ಧತೆ, ಖಾಸಗಿ ಸಮೀಕ್ಷಕರ ತರಬೇತಿ ಹಾಗೂ ತಯಾರಿಗಳ ಕುರಿತು ಮಾಹಿತಿ ಪಡಕೊಂಡಿದ್ದಾರೆ.

ಆ್ಯಪ್‌ ಬಳಸಿ ಸಮೀಕ್ಷೆ
ಮೊಬೈಲ್‌ ಆ್ಯಪ್‌ ಬಳಸಿ ಈ ಬಾರಿ ಸಮೀಕ್ಷೆ ನಡೆಸಲಾಗುತ್ತಿದೆ. ರಾಜ್ಯದ 30,061 ಹಳ್ಳಿ ಗಳ ಪೈಕಿ 22,853ನ್ನು ಸಮೀಕ್ಷೆ ಪಟ್ಟಿಯಲ್ಲಿ ಗುರುತಿಸಲಾಗಿದೆ. ಇಲ್ಲಿ ಸಮೀಕ್ಷೆಗೆ ಖಾಸಗಿಯವರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಅಂತಿಮಗೊಂಡಿದೆ. ಆಯ್ಕೆಯಾದವರಿಗೆ ಕಂದಾಯ ಅಧಿಕಾರಿಗಳು ಈಗಾಗಲೇ ಒಂದು ಸುತ್ತಿನ ತರಬೇತಿ ನೀಡಿದ್ದಾರೆ. ಇನ್ನೊಂದು ಸುತ್ತಿನ ತರಬೇತಿಯನ್ನು ಸೆ. 29ರಂದು ತಾಲೂಕು ಮಟ್ಟದಲ್ಲಿ ನೀಡಲಾಗುತ್ತದೆ.

ದ.ಕ. ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಆಯ್ಕೆಯಾಗಿರುವ ಖಾಸಗಿ ಸಮೀಕ್ಷಕರಿಗೆ ಸೆ. 27ರಂದು ಆಯಾ ತಾಲೂಕು ತಹಶೀಲ್ದಾರರು ತರಬೇತಿ ನೀಡಿ ಮಾದರಿ ಪ್ರಮಾಣ ಪತ್ರ ಹಂಚಲು ಜಿಲ್ಲಾಧಿಕಾರಿಗಳು ಸೆ. 25ರಂದು ಆದೇಶ ಹೊರಡಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿಯೂ ಈ ಸಂಬಂಧಿ ಪ್ರಕ್ರಿಯೆ ಜರಗಿದೆ.

Advertisement

ಮನೆ ಬಾಗಿಲಿಗೆ ತೆರಳಿ ಮಾಹಿತಿ ಸಂಗ್ರಹ
ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಸರಕಾರಿ ಸಿಬಂದಿ ಹಾಗೂ ಪ್ರತಿ ಕಂದಾಯ ಗ್ರಾಮಕ್ಕೆ ಮೂವರಂತೆ ಆಯ್ಕೆಯಾದ ಯುವಕರು ರೈತರ ಮನೆ ಬಾಗಿಲಿಗೆ ತೆರಳಿ ಮಾಹಿತಿ ಪಡೆಯಬೇಕು. ಪಹಣಿ ಪತ್ರ ಹೊಂದಿರುವ ರೈತರು ಬೆಳೆಯುವ ಬೆಳೆಗಳ ಮಾಹಿತಿಯನ್ನು ಮೊಬೈಲ್‌ ಆ್ಯಪ್‌ ಮೂಲಕ ಸರಕಾರಿ ದಾಖಲೆಗಳಲ್ಲಿ ನಿಖರವಾಗಿ ಸೇರಿಸಲಾಗುತ್ತದೆ. ಕೃಷಿಕರ ಜಮೀನು ಹಾಗೂ ಬೆಳೆದ ಬೆಳೆ, ಉಪಬೆಳೆ ಇತ್ಯಾದಿ ಮಾಹಿತಿ ದಾಖಲಿಸಿಕೊಳ್ಳಲಾಗುತ್ತದೆ. ಕೃಷಿಕರು ತಮ್ಮ ಮೊಬೈಲ್‌ ಸಂಖ್ಯೆ ನೀಡಿ ದಾಖಲಾದ ಮಾಹಿತಿಯ ವಿವರಗಳನ್ನು ಎಸ್ಸೆಮ್ಮೆಸ್‌ ಮೂಲಕ ಪಡೆದುಕೊಳ್ಳುವ ಅವಕಾಶವೂ ಇದೆ. ಬೆಳೆಗಳ ಮಾಹಿತಿಯನ್ನು ಸರಕಾರಿ ದಾಖಲೆಗಳಲ್ಲಿ ನಿಖರವಾಗಿ ಸೇರ್ಪಡೆಗೊಳಿಸುವ, ಅರ್ಹ ರೈತ ಫಲಾನುಭವಿಗಳನ್ನು ಹಲವು ಯೋಜನೆಗಳಲ್ಲಿ ಒಳಪಡಿಸಿ ನೆರವಾಗುವ ಉದ್ದೇಶವನ್ನು ಈ ಸಮೀಕ್ಷೆ ಹೊಂದಿದೆ.

ಸಮೀಕ್ಷೆಯನ್ನು ಸ್ಥಳೀಯ ಖಾಸಗಿ ಯುವಕರ ಮೂಲಕ ಆರಂಭಿಸುವ ವಿಚಾರಕ್ಕೆ ಸಂಬಂಧಿಸಿ ಸೆ. 26ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಲ್ಲ ಸರಕಾರಿ ಅಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಲಾಗಿದೆ. ಇನ್ನೆರಡು ದಿನಗಳಲ್ಲಿ ಸರ್ವೆ ಆರಂಭವಾಗಲಿದೆ ಎನ್ನುವ ಮಾಹಿತಿ ದೊರಕಿದೆ.

ಇ-ಗವರ್ನೆನ್ಸ್‌ ಇಲಾಖೆಯ ನ್ಯಾಶನಲ್‌ ಇನ್ಫಾರ್ಮೇಟಿಕ್ಸ್‌ ಸೆಂಟರ್‌ (ಎನ್‌ ಐಸಿ) ರೂಪಿಸಿರುವ ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ಈ ಸರ್ವೇ ನಡೆಸಲಾಗುತ್ತದೆ. ಕಂದಾಯ ಇಲಾಖೆಯಲ್ಲಿ ತಮ್ಮ ಸ್ಮಾರ್ಟ್‌ ಫೋನ್‌ ನೋಂದಾಯಿಸಿಕೊಂಡ ಸ್ಥಳೀಯ ಯುವಕರು ಈ ಆ್ಯಪ್‌ ಮೂಲಕ ಸಮೀಕ್ಷೆ ನಡೆಸುತ್ತಾರೆ.

ಸಮೀಕ್ಷೆಗೆ ಸಿದ್ಧತೆ
ರಾಜ್ಯದಲ್ಲಿ ಮುಂಗಾರು ಬೆಳೆ ಸಮೀಕ್ಷೆ ನಡೆಸಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಅಧಿಕಾರಿಗಳಿಗೆ ಈ ಕುರಿತು ಎಲ್ಲ ಸಿದ್ಧತೆಗಳನ್ನು ನಡೆಸಲು ಸೂಚಿಸಲಾಗಿದ್ದು, ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳ್ಳಲಿದೆ. ಕಂದಾಯ ಅಧಿಕಾರಿಗಳ ಜತೆ ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡು ಸಮೀಕ್ಷೆಯನ್ನು ಆ್ಯಪ್‌ ಮೂಲಕ ಪಾರದರ್ಶಕವಾಗಿ ನಡೆಸಲಾಗುತ್ತದೆ. ಸಂಪೂರ್ಣ ಮಾಹಿತಿ ಬಳಿಕ ಸರಕಾರ ಮುಂದಿನ ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ.
– ಯು.ಟಿ. ಖಾದರ್‌, ಜಿಲ್ಲಾ ಉಸ್ತುವಾರಿ ಸಚಿವರು

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next