Advertisement
ಮಹಾನಗರದ ಘನತ್ಯಾಜ್ಯ ಸಮರ್ಪಕ ನಿರ್ವಹಣೆಗಾಗಿ ಪಾಲಿಕೆ ಸಮಗ್ರ ಘನತ್ಯಾಜ್ಯ ಯೋಜನೆ ರೂಪಿಸಿತ್ತು. ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ, ಒಣ ತ್ಯಾಜ್ಯದಿಂದ ಸಿಮೆಂಟ್ ಕಂಪನಿಗಳಿಗೆ ಅಗತ್ಯವಾದ ಪರ್ಯಾಯ ಇಂಧನ ಸಿದ್ಧಪಡಿಸುವುದು ಯೋಜನೆಯಲ್ಲಿತ್ತು. ಇದರ ಮೂಲಕ ಮಹಾನಗರದ ಸ್ವತ್ಛತೆ ಪ್ರಮುಖ ಉದ್ದೇಶವಾಗಿತ್ತು. ಇದಕ್ಕಾಗಿ ಸುಮಾರು 65 ಕೋಟಿ ರೂ. ವ್ಯಯಿಸಲಾಗಿದೆ. ಕಳೆದ ಐದು ವರ್ಷಗಳ ಹಿಂದೆ ಸಿದ್ಧವಾದ ಯೋಜನೆ ಇದೀಗ ಕಾರ್ಯರೂಪಕ್ಕೆ ಬಂದಿದೆ. ಇದೀಗ ಮೊದಲ ಹಂತದಲ್ಲಿ ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತಿದ್ದು, ಭೂ ಸಮೃದ್ಧಿ ಹೆಸರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ.
Related Articles
Advertisement
ಒಂದೇ ಮಾದರಿಯ ಗೊಬ್ಬರ ಎಲ್ಲಾ ತೋಟ, ಹೊಲಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಈ ಕಾಂಪೋಸ್ಟ್ ಗೊಬ್ಬರಕ್ಕೆ ಇನ್ನೊಂದಿಷ್ಟು ಸಾವಯವ ಪೋಷಕಾಂಶಗಳನ್ನು ಸೇರಿಸಿ ಪ್ರತಿ ಕೆಜಿಗೆ 5 ರೂ. ಮಾಡಬೇಕು ಎನ್ನುವ ಚರ್ಚೆಗಳು ನಡೆಯುತ್ತಿವೆಯಾದರೂ ಇನ್ನೂ ನಿರ್ಧಾರವಾಗಿಲ್ಲ.
ಪಾಲಿಕೆ ಸಿಬ್ಬಂದಿ ಮೂಲಕ ನಿರ್ವಹಣೆ:
ಆರಂಭದಲ್ಲಿ ಪಾಲಿಕೆ ಕಚೇರಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡು ನಂತರ ಬೇಡಿಕೆ ಆಧಾರದ ಮೇಲೆ ಹೊರಗಡೆ ಕೇಂದ್ರಗಳನ್ನು ಆರಂಭಿಸುವ ಗುರಿಯಿದೆ. ಹುಬ್ಬಳ್ಳಿ ಹಾಗೂ ಧಾರವಾಡದ ಎರಡು ಘಟಕಗಳನ್ನು ಸದ್ಯಕ್ಕೆ ಪಾಲಿಕೆ ಸಿಬ್ಬಂದಿ ಮೂಲಕ ನಿರ್ವಹಿಸಲಾಗುತ್ತಿದೆ. ಪ್ರಾಯೋಗಿಕ ಹಂತವಾಗಿರುವುದರಿಂದ ಇನ್ನೂ ಪರಿಣಾಮಕಾರಿಯಾಗಿ ಕಾಂಪೋಸ್ಟ್ ಗೊಬ್ಬರ ಉತ್ಪಾದನೆ ಆಗುತ್ತಿಲ್ಲ. ಘಟಕಗಳ ಸಾಮರ್ಥ್ಯದ ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳಬೇಕಾದರೆ ಹೆಚ್ಚಿನ ಪ್ರಮಾಣದ ಮಾನವ ಸಂಪನ್ಮೂಲದ ಅಗತ್ಯವಿದೆ. ಪ್ರಾಥಮಿಕ ಹಂತದಲ್ಲಿ ಹಸಿ ಹಾಗೂ ಒಣ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹ ಕಾರ್ಯ ಕಟ್ಟುನಿಟ್ಟಾಗಿ ಆದರೆ ಇನ್ನಷ್ಟು ಪರಿಣಾಮಕಾರಿ ಹಾಗೂ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿದೆ.
ಉತ್ತಮ ಅಂಶಗಳು ದೃಢ:
ಸಿದ್ಧಪಡಿಸಿರುವ ಕಾಂಪೋಸ್ಟ್ ಗೊಬ್ಬರವನ್ನು ಪ್ರತಿಷ್ಠಿತ ಎಸ್‌ಎಲ್‌ಎನ್ ಬಯೋಟೆಕ್ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಉತ್ತಮ ಅಂಶಗಳನ್ನು ಹೊಂದಿರುವುದು ದೃಢವಾಗಿದೆ. ಆರ್ಗ್ಯಾನಿಕ್ ಕಾರ್ಬನ್-23.24(14 ಕನಿಷ್ಟ), ನೈಟ್ರೋಜೆನ್-1.835 (0.8 ಕನಿಷ್ಟ), ಪಾಸ್ಪೇಟ್ಸ್-0.878 (0.4 ಕನಿಷ್ಟ), ಪೊಟ್ಯಾಷ್-0.862 (0.4 ಕನಿಷ್ಟ) ಪ್ರಮಾಣವನ್ನು ಹೊಂದಿದೆ. ಹೀಗಾಗಿ ಈ ಗೊಬ್ಬರ ಕೃಷಿ, ತೋಟಗಾರಿಕೆ, ಮನೆ ಮುಂದಿನ ಉದ್ಯಾನಗಳಿಗೆ ಬಳಸಬಹುದಾಗಿದೆ. ಕೆಲ ಅಡಕೆ ಬೆಳೆಗಾರರು ಕೂಡ ಗೊಬ್ಬರದ ಬೇಡಿಕೆ ಸಲ್ಲಿಸಿದ್ದಾರೆ. ನಿತ್ಯವೂ ಮಾರಾಟದ ಉದ್ದೇಶದಿಂದ ಅರಣ್ಯ ಇಲಾಖೆಯ ನರ್ಸರಿಗಳಿಗೆ ಪೂರೈಸಬಹುದು ಎನ್ನುವ ಕಾರಣಕ್ಕೆ ಪತ್ರ ವ್ಯವಹಾರ ನಡೆದಿದೆ.
ಪಾಲಿಕೆಯಿಂದ ತಯಾರಿಸುತ್ತಿರುವ ಕಾಂಪೋಸ್ಟ್ ಗೊಬ್ಬರಕ್ಕೆ ಸಾಕಷ್ಟು ಬೇಡಿಕೆಯಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಸಾವಯವ ಗೊಬ್ಬರದಲ್ಲಿ ಇರಬೇಕಾದ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿರುವುದು ಪ್ರಯೋಗಾಲಯದ ಪರೀಕ್ಷೆಯಿಂದ ಸ್ಪಷ್ಟವಾಗಿದೆ. ಅರಣ್ಯ ಇಲಾಖೆ ನರ್ಸರಿಗಳಿಗೆ ಈ ಗೊಬ್ಬರ ಬಳಕೆ ಮಾಡುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಅತೀ ಶೀಘ್ರದಲ್ಲಿ ಅಧಿಕೃತವಾಗಿ ಬ್ರ್ಯಾಂಡಿಂಗ್ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. –ಡಾ| ಬಿ.ಗೋಪಾಲಕೃಷ್ಣ, ಆಯುಕ್ತ, ಮಹಾನಗರ ಪಾಲಿಕೆ
-ಹೇಮರಡ್ಡಿ ಸೈದಾಪುರ