ಬೆಂಗಳೂರು: ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದೆ.
ಎಲ್ಲ ಕ್ಷೇತ್ರಗಳಿಗೆ ಡಿ. 10ರಂದು ಮತದಾನ ನಡೆದು ಶೇ. 99.87ರಷ್ಟು ಮತದಾನವಾಗಿತ್ತು. ಬೆಳಗ್ಗೆ 8ರಿಂದ ಎಣಿಕೆ ಆರಂಭವಾಗಿದ್ದು, ನಿಗದಿತ ಮತ ಎಣಿಕೆ ಕೇಂದ್ರಗಳಲ್ಲಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 20 ಕ್ಷೇತ್ರಗಳಲ್ಲಿ ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈ ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ಇಲ್ಲಿನ ಸೋಲು-ಗೆಲುವು ಆ ಚುನಾವಣೆಯ ಫಲಿತಾಂಶಕ್ಕೆ ದಿಕ್ಸೂಚಿಯಾಗಬಹುದು ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಇದು ಪ್ರತಿಷ್ಠೆಯಾಗಿದೆ.
ಬಳ್ಳಾರಿ: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಎರಡು ಕೊಠಡಿಗಳಲ್ಲಿ ಎಣಿಕೆ ನಡೆಯುತ್ತಿದ್ದು, ಪ್ರತಿ ಕೊಠಡಿಯಲ್ಲಿ 10 ಟೇಬಲ್ ಗಳಲ್ಲಿ ಎಣಿಕೆ ಕಾರ್ಯ ಆರಂಭವಾಗಿದೆ.
ವಿಜಯಪುರ : ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆ ವಿಜಯಪುರ ದ್ವಿಸದಸ್ಯತ್ವ ಕ್ಷೇತ್ರಕ್ಕೆ ನಡೆದ ಚುನಾವಣೆ ಮತ ಎಣಿಕೆ ಮಂಗಳವಾರ ಆರಂಭಗೊಂಡಿದೆ. ಮಂಗಳವಾರ ಬೆಳಿಗ್ಗೆ 7-30 ಕ್ಕೆ ನಗರದ ದರ್ಬಾರ ಕಾಲೇಜಿನಲ್ಲಿ ಅಭ್ಯರ್ಥಿಗಳು- ಏಜೆಂಟರ ಸಮ್ಮುಖದಲ್ಲಿ ಚುನಾವಣೆ ಅಧಿಕಾರಿಗಳಯ ಮತಪೆಟ್ಟಿಗೆ ಇರಿಸಿದ್ದ ಸ್ಟ್ರಾಂಗ್ ರೂಂ ತೆರೆಯಲಾಯಿತು. ಬಳಿಕ ಮತ ಎಣಿಕೆ ಕಾರ್ಯ ಆರಂಭಗೊಂಡಿತು. ದರ್ಬಾರ್ ಕಾಲೇಜಿನ ಎರಡು ಕೊಠಡಿಗಳಲ್ಲಿ ಮತ ಎಣಿಕೆಗೆ ಎರಡು ಕೋಣೆಗಳಲ್ಲಿ ತಲಾ 7 ರಂತೆ ಒಟ್ಟು 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ.