ಬೆಂಗಳೂರು: ರಸ್ತೆಗೆ ಕಾಂಪೌಂಡ್ ನಿರ್ಮಿಸಿರುವ ವಿಚಾರ ಕುರಿತು ಅಕ್ಕ-ಪಕ್ಕದವರ ಜತೆ ನಡೆದ ಜಗಳ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಬೆಂಬಲಿಗರು ಜಮೀನು ಕಾವಲುಗಾರರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆದರೆ, ಆರೋಪ ನಿರಾಕರಿಸಿರುವ ಶಾಸಕ ಎಸ್.ಟಿ.ಸೋಮಶೇಖರ್ ಸ್ಥಳೀಯವಾಗಿ ನಡೆದ ಜಗಳಕ್ಕೆ ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಫೆ.17ರ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಶಾಸಕ ಸೋಮಶೇಖರ್ ಬೆಂಬಲಿಗರು ರಾಜಕೀಯ ಮುಖಂಡ ಪುಟ್ಟರಾಜು ಎಂಬುವವರ ಜಮೀನು ಕಾವಲು ಕಾಯುತ್ತಿದ್ದ ಪ್ರಕಾಶ್ ಮತ್ತು ಜೋಗಣ್ಣ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂಬಂಧ ಜೋಗಣ್ಣ ಪತ್ನಿ ಕಾವ್ಯಾ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಂದ್ರಹಳ್ಳಿಯ ತಿಗಳರಪಾಳ್ಯದಲ್ಲಿ ಪುಟ್ಟರಾಜುಗೆ ಸೇರಿದ ನಾಲ್ಕು ಎಕರೆ ಜಮೀನಿದ್ದು, ಈ ಪೈಕಿ ಎರಡು ಎಕರೆಯಲ್ಲಿರುವ ತಿಗಳರ ಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪುಟ್ಟರಾಜು ಮುಚ್ಚಿದ್ದರು. ಅಲ್ಲದೆ ಇದನ್ನು ಯಾರು ತೆರವುಗೊಳಿಸದಂತೆ ನೋಡಿಕೊಳ್ಳಲು ಪ್ರಕಾಶ್ ಮತ್ತು ಜೋಗಣ್ಣ ಎಂಬುವರನ್ನು ನಿಯೋಜಿಸಿದ್ದರು. ರಸ್ತೆ ಮುಚ್ಚಿದ ವಿಚಾರವಾಗಿ ಸ್ಥಳೀಯರು ಹಾಗೂ ಕಾವಲುಗಾರರ ನಡುವೆ ಜಗಳವಾಗಿದೆ.
ಸ್ಥಳೀಯರು ರಸ್ತೆ ಜಾಗದಲ್ಲಿ ನಿರ್ಮಿಸಿದ್ದ ಕಾಂಪೌಂಡ್ ಉರುಳಿಸಲು ಮುಂದಾಗಿದ್ದರು. ಲಾವಲುಗಾರರು ಈ ಯತ್ನವನ್ನು ವಿಫಲಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಶಾಸಕ ಸೋಮಶೇಖರ್ ಬೆಂಬಲಿಗರು ಫೆ.18ರಂದು ನಡೆಯಬೇಕಿದ್ದ ಮನೆ, ಮನೆ ಕಾಂಗ್ರೆಸ್ ಸಮಾವೇಶಕ್ಕೆ 4 ಎಕರೆ ಜಾಗ ನೀಡುವಂತೆ ಪುಟ್ಟರಾಜು ಬಳಿ ಕೋರಿದ್ದರು. ರಸ್ತೆ ಮುಚ್ಚಿದ ಹಿನ್ನೆಲೆಯಲ್ಲಿ ಸ್ಥಳ ನೀಡಲು ಪುಟ್ಟರಾಜು ನಿರಾಕರಿಸಿದ್ದರು.
ಇದರಿಂದ ಕೋಪಗೊಂಡ ಬೆಂಬಲಿಗರು ಹಲ್ಲೆ ನಡೆಸಲು ಮುಂದಾಗಿದ್ದಾರೆ. ರಕ್ಷಣೆಗಾಗಿ ಮನೆ ಒಳಗೆ ಬಂದಾಗ ಉದ್ರಿಕ್ತರ ಗುಂಪು ಮನೆ ಮೇಲೂ ಕಲ್ಲು ತೂರಾಟ ನಡೆಸಿದೆ ಎಂದು ಜೋಗಣ್ಣ ಅವರ ಪತ್ನಿ ಕಾವ್ಯಾ ದೂರಿನಲ್ಲಿ ಆರೋಪಿಸಿದ್ದಾರೆ. “ಘಟನೆಯಿಂದ ಭೀತಿಗೊಂಡಿರುವ ನನ್ನ ಮಗ ಕಾಲೇಜಿಗೆ ತೆರಳದೆ ಊರಿಗೆ ಹೋಗಿದ್ದಾನೆ. ನಾವು ಕೂಡ ಜೀವ ಭಯದಿಂದ ದಿನ ದೂಡುತ್ತಿದ್ದೇವೆ,’ ಎಂದು ಕಾವ್ಯಾ ಆತಂಕ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಕಾವಲುಗಾರರಾದ ಪ್ರಕಾಶ್ ಹಾಗೂ ಜೋಗಣ್ಣ ಅವರನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ದುಷ್ಕರ್ಮಿಗಳ ಕೈಯಲ್ಲಿ ಮಾರಕಾಸ್ತ್ರಗಳು ಇರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಪೌಂಡ್ ಹಾಕಿಕೊಂಡಿರುವ ವಿಚಾರವಾಗಿ ನಡೆದ ಸ್ಥಳೀಯ ಜಗಳಕ್ಕೆ ನನ್ನ ಹೆಸರನ್ನು ತಳುಕು ಹಾಕಲಾಗಿದೆ. ಇದಕ್ಕೂ ನನಗೂ ಸಂಬಂಧವಿಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಿ.
-ಎಸ್.ಟಿ.ಸೋಮಶೇಖರ್, ಶಾಸಕ