Advertisement
ಇದಕ್ಕೆ ಕಾರಣ ಬಹುತೇಕ ಎಲ್ಲಾ ಶಾಸಕರು ಪ್ರದೇಶಾಭಿವೃದ್ಧಿ ನಿಧಿಯನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡದೇ ಇರುವುದು. ಹೀಗಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು 2 ಕೋಟಿ ರೂ.ನಿಂದ 1.5 ಕೋಟಿ ರೂ.ಗೆ ಇಳಿಸಲು ಚಿಂತನೆ ನಡೆಸಲಾಗಿದೆ. ಯಾವುದೇ ಶಾಸಕರು 1.5 ಕೋಟಿ ರೂ. ವೆಚ್ಚ ಮಾಡಿ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಟ್ಟರೆ ಅಂಥವರಿಗೆ 50 ಲಕ್ಷ ರೂ.ವರೆಗೆ ಬಿಡುಗಡೆ ಮಾಡುವ ಬಗ್ಗೆ ಯೋಚಿಸಲಾಗಿದೆ ಎಂದು ಯೋಜನಾ ಸಚಿವ ಎಂ.ಆರ್.ಸೀತಾರಾಂ ಹೇಳಿದ್ದಾರೆ.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಎಂಬ ನೂತನ ಕಾರ್ಯಕ್ರಮ ಜಾರಿಗೆ ತಂದಿದ್ದರು. ಕ್ರಮೇಣ ಈ ಮೊತ್ತವನ್ನು 25 ಲಕ್ಷ, 50 ಲಕ್ಷ ಮತ್ತು ಒಂದು ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು 2 ಕೋಟಿ ರೂ.ಗೆ ಏರಿಸಲಾಗಿತ್ತು.
Related Articles
Advertisement
ಆದರೆ, 2 ಕೋಟಿ ರೂ. ಯಾವುದಕ್ಕೂ ಸಾಲುತ್ತಿಲ್ಲ. ಪ್ರದೇಶಾಭಿವೃದ್ಧಿ ನಿಧಿಯನ್ನು ಕನಿಷ್ಠ 5 ಕೋಟಿ ರೂ.ಗೆ ಏರಿಸಬೇಕು ಎಂಬ ಒತ್ತಾಯ ಬಹುತೇಕ ಶಾಸಕರಿಂದ ಕೇಳಿಬರಲಾರಂಭಿಸಿದೆ. ಹೀಗಾಗಿ 2018-19ನೇ ಸಾಲಿನಿಂದ ಪ್ರಸ್ತುತ ಇರುವ 2 ಕೋಟಿ ರೂ.ಅನ್ನು 3 ಕೋಟಿ ರೂ.ಗೆ ಏರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಆದರೆ, ಈಗ ನೀಡುತ್ತಿರುವ ಹಣವೇ ಪೂರ್ಣ ಪ್ರಮಾಣದಲ್ಲಿ ಖರ್ಚಾಗುತ್ತಿಲ್ಲ. 2002-03ನೇ ಸಾಲಿನಿಂದ 2017ರ ಸೆಪ್ಟೆಂಬರ್ ಅಂತ್ಯಕ್ಕೆ ನಿಧಿಯ 1000 ಕೋಟಿ ರೂ. ಬಳಕೆಯಾಗದೆ ಉಳಿದಿದೆ. 2017-18ನೇ ಸಾಲಿನ ಇನ್ನೂ ಎರಡು ಕಂತಿನ ಹಣ ಬಿಡುಗಡೆ ಬಾಕಿ ಇದ್ದು, ಆಗ ಈ ಮೊತ್ತ 1300 ಕೋಟಿ ರೂ.ಗೆ ಏರಲಿದೆ.
2017-18ನೇ ಸಾಲಿನಲ್ಲಿ ಬಿಡುಗಡೆಯಾಗಿರುವ 300 ಕೋಟಿ ರೂ. ಸೇರಿದಂತೆ 2014-15ಲೇ ಸಾಲಿನಿಂದ ಇದುವರೆಗೆ 594 ಕೋಟಿ ರೂ. ಇನ್ನೂ ಖರ್ಚಾಗದೆ ಉಳಿದಿದೆ. ಆರ್ಥಿಕ ವರ್ಷಾಂತ್ಯದ ವೇಳೆಗೆ ಇನ್ನೂ 300 ಕೋಟಿ ರೂ. ಬಿಡುಗಡೆಯಾಗಲಿದೆ. ಆದರೆ, ಅಷ್ಟೊಂದು ಹಣ ಖರ್ಚಾಗುವ ಸಾಧ್ಯತೆ ಇಲ್ಲ. ಹೀಗಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು 2 ಕೋಟಿಯಿಂದ 1.5 ಕೋಟಿ ರೂ.ಗೆ ಇಳಿಸಲು ಸರ್ಕಾರ ಚಿಂತನೆ ನಡೆಸಿದೆ.
ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಪೂರ್ಣ ಪ್ರಮಾಣದಲ್ಲಿ ಖರ್ಚಾಗದೇ ಇರುವುದರಿಂದ ಪ್ರಸ್ತುತ ಇರುವ 2 ಕೋಟಿ ರೂ.ಅನ್ನು 1.5 ಕೋಟಿ ರೂ.ಗೆ ಇಳಿಸಬೇಕು. ಶಾಸಕರು 1.5 ಕೋಟಿ ರೂ. ಖರ್ಚು ಮಾಡಿ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇದ್ದರೆ ಅಂಥವರಿಗೆ ಮತ್ತೆ 50 ಲಕ್ಷ ರೂ. ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ.– ಎಂ.ಆರ್.ಸೀತಾರಾಂ, ಯೋಜನಾ ಸಚಿವ