ಹರಪನಹಳ್ಳಿ: ತಾಲೂಕಿನ ನೀಲಗುಂದ ಗ್ರಾಮದ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ
ಜಿ.ಕರುಣಾಕರ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆಯಲ್ಲಿ 1ರಿಂದ 7ನೇತರಗತಿವರೆಗೆ ಒಟ್ಟು 330 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. 12 ಕೊಠಡಿಗಳಿದ್ದು, 2 ಕೊಠಡಿಗಳ ಚಾವಣಿ ಸಂಪೂರ್ಣ ಕುಸಿದಿದೆ. ಉಳಿದ ಕೊಠಡಿಗಳ ಸ್ಥಿತಿಯೂ ಚೆನ್ನಾಗಿಲ್ಲ. ಇದರಿಂದ ತರಗತಿ ನಡೆಸಲು ತೊಂದರೆ ಆಗುತ್ತಿದೆ. ಮುಖ್ಯೋಪಾಧ್ಯಾಯರ ಹುದ್ದೆ ಖಾಲಿಯಿದೆ. ಕಂಪ್ಯೊಟರ್‌ಗಳಿದ್ದರೂ ಬ್ಯಾಟರಿ ಸೇರಿದಂತೆ ಪರಿಕರ ಕೊರತೆಯಿಂದ ಮೂಲೆಯಲ್ಲಿ ಇರಿಸಲಾಗಿದೆ. ಆಟದ ಮೈದಾನ ಇಲ್ಲ ಎಂದು ಸಮಸ್ಯೆಗಳ ಕುರಿತು ಶಿಕ್ಷಕರು ಶಾಸಕರ ಗಮನಕ್ಕೆ ತಂದರು.
ಕಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಅರೆಮಜ್ಜಿಗೆರೆ ಮೂಡಬಸಪ್ಪ ದೇವಸ್ಥಾನದ ಬಳಿ ಸೆರ್ವೇ ನಂ. 384ರ 34.2 ಎಕರೆ ಭೂಮಿಯನ್ನು ದಾನಿಗಳು ಶಾಲೆಗೆ ದಾನ ಮಾಡಿದ್ದಾರೆ. ಇದನ್ನು 13 ರೈತರು ಉಳಿಮೆ ಮಾಡುತ್ತಿದ್ದಾರೆ. ಆದರೆ ಶಾಲೆಗೆ ಯಾವುದೇ ರೀತಿಯಲ್ಲಿ ಧನಸಹಾಯ ಮಾಡುತ್ತಿಲ್ಲ. ಇದರ ಬಗ್ಗೆ ಗಮನ ಹರಿಸುವಂತೆ ಶಿಕ್ಷಕರು ಕೋರಿದರು.
ತಹಶೀಲ್ದಾರ್‌ಗೆ ಸ್ಥಳ ಪರಿಶೀಲಿಸುವಂತೆ ಸೂಚಿಸಿದ ಶಾಸಕರು, ಶಾಲೆ ಅಭಿವೃದ್ಧಿಗೆ ರೈತರು ಹಣ ನೀಡುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು. 2 ಕೊಠಡಿಗಳನ್ನು ನೆಲಸಮಗೊಳಿಸಿ ಶಾಸಕರ ಅನುದಾನದಲ್ಲಿ ಹೊಸ ಕೊಠಡಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಉಪಾಧ್ಯಕ್ಷ ಎಲ್.ಮಂಜ್ಯನಾಯ್ಕ, ಗ್ರಾಪಂ ಅಧ್ಯಕ್ಷೆ ಲೀಲಾವತಿ ಅಂಜಿನಪ್ಪ ಹಾಗೂ ಸದಸ್ಯರು, ಮುಖಂಡರಾದ ಎಂ.ಪಿ.ನಾಯ್ಕ, ಮಡಿವಾಳಪ್ಪ, ಅಳವಂಡಿ ವಿಜಯಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಬಿ. ಶ್ರೀನಿವಾಸ್ ಮತ್ತು ಸದಸ್ಯರು ಹಾಜರಿದ್ದರು.
ಜೂ. 17ರಂದು ಶತಮಾನದ ಶಾಲೆಗಳ ಸ್ಥಿತಿ ಶೋಚನೀಯ ಎಂಬ ಶೀರ್ಷಿಕೆಯಡಿಯಲ್ಲಿ ಉದಯವಾಣಿ ಪತ್ರಿಕೆ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.