Advertisement

ಕಾಮಗಾರಿ ಆದೇಶದಲ್ಲಿ ಶಾಸಕರ ಹೆಸರಿಗೆ ಅವಕಾಶವಿಲ್ಲ

01:16 AM Dec 28, 2022 | Team Udayavani |

ಬೆಳಗಾವಿ: ಇನ್ನು ಮುಂದೆ ಸರಕಾರದಿಂದ ಕೈಗೊಳ್ಳುವ ಯಾವುದೇ ಕಾಮಗಾರಿಯ ಹೆಸರನ್ನು ಮಾತ್ರ ಸರಕಾರದ ಆದೇಶದಲ್ಲಿ ನಮೂದಿಸಲಾಗು ವುದು. ಅದು ಬಿಟ್ಟು ಶಾಸಕರು ಸೇರಿ ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿಗೆ ಅನುದಾನ ಬಿಡುಗಡೆ ಮಾಡುವ ಮೂಲಕ ತಮ್ಮ ಹಕ್ಕುಚ್ಯುತಿ ಆಗಿದೆ ಎಂದು ಆರೋಪಿಸಿ ಸ್ಥಳೀಯ ಶಾಸಕ ಟಿ.ಡಿ. ರಾಜೇಗೌಡ ಅವರು ಸದನದ ಬಾವಿಗಿಳಿದು ಉಪವಾಸ ಧರಣಿ ನಡೆಸುತ್ತಿದ್ದರಿಂದ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಈ ಭರವಸೆ ನೀಡಿದರು.

ಮುಖ್ಯಮಂತ್ರಿಯವರ ಹೇಳಿಕೆ ಅನಂತರ ಬೆಳಗ್ಗೆಯಿಂದ ನಡೆಸುತ್ತಿದ್ದ ಧರಣಿಯನ್ನು ಶಾಸಕ ರಾಜೇಗೌಡ ಹಾಗೂ ಡಾ| ರಂಗನಾಥ್‌ ವಾಪಸ್‌ ಪಡೆದುಕೊಂಡರು. ಈ ಮೂಲಕ ಶಾಸಕರ ಹಕ್ಕುಚ್ಯುತಿ ವಿಚಾರ ಸುಖಾಂತ್ಯ ಕಂಡಿತು.

ಇದಕ್ಕೂ ಮೊದಲು ಬೆಳಗ್ಗೆ ಸದನದಲ್ಲಿ ಈ ವಿಷಯ ಪ್ರಸ್ತಾವಿಸಿದ ರಾಜೇಗೌಡ, ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಎಂದು ಸೋತ ಅಭ್ಯರ್ಥಿ ಜೀವರಾಜ್‌ ಹೆಸರನ್ನು ಸರಕಾರದ ಆದೇಶದಲ್ಲಿ ನಮೂದಿಸಲಾಗಿದೆ. ಇದರಿಂದ ನನ್ನ ಹಕ್ಕುಚ್ಯುತಿ ಆಗಿದೆ. ನಾನು ಶಾಸಕ ಹೌದೋ, ಅಲ್ಲವೋ ಅನ್ನುವುದು ತೀರ್ಮಾನ ಆಗಿಲ್ಲ. ನನಗಾಗಿರುವ ಅನ್ಯಾಯ ಸರಿಪಡಿಸದಿದ್ದರೆ ಸದನದಲ್ಲಿ ಉಪವಾಸ ಕುಳಿತುಕೊಳ್ಳುತ್ತೇನೆಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ನ್ಯಾಯ ಕೊಡಬೇಕೆಂದು ಧರಣಿ ನಡೆಸಿದರು. ಇದಕ್ಕೆ ಶಾಸಕ ರಂಗನಾಥ್‌ ಸಾಥ್‌ ನೀಡಿದ್ದರು.

ಪ್ರಜಾಪ್ರಭುತ್ವ ವಿರೋಧಿ ನಡೆ
ಹಕ್ಕುಚ್ಯುತಿ ಪ್ರಸ್ತಾಪಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿಸಿ, ಇದೊಂದು ಪ್ರಜಾಪ್ರಭುತ್ವ ವಿರೋಧಿ ನಡೆ ಹಾಗೂ ಕೆಟ್ಟ ಸಂಪ್ರದಾಯ ಎಂದರು.

Advertisement

ಸರಕಾರದ ಪರ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, ಈ ವಿಚಾರ ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಶಾಸಕರ ಹಕ್ಕುಗಳನ್ನು ರಕ್ಷಿಸಲು ಸರಕಾರ ಬದ್ಧವಾಗಿದೆ ಎಂದರು. ರಾಜೇಗೌಡರು ಕೊಟ್ಟಿರುವ ಪ್ರಸ್ತಾವನೆಯಲ್ಲಿ ಹಕ್ಕುಚ್ಯುತಿ ಆಗಿರುವ ಬಗ್ಗೆ ದಾಖಲೆಗಳನ್ನು ಕೊಟ್ಟಿಲ್ಲ. ಹಾಗಾಗಿ, ಹಕ್ಕುಚ್ಯುತಿ ಪ್ರಸ್ತಾವ ನಿರಾಕರಿಸಲಾಗಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು. ಇದಕ್ಕೆ ಅಸಮಾಧಾನಗೊಂಡ ರಾಜೇಗೌಡ ಹಾಗೂ ರಂಗನಾಥ್‌ ಸದನದ ಬಾವಿಗಿಳಿದು ಧರಣಿ ನಡೆಸಿದರು. ಶಾಸಕರ ಹಕ್ಕುಚ್ಯುತಿ ವಿಚಾರವನ್ನು ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡೋಣ ಎಂದು ಸ್ಪೀಕರ್‌ ಹೇಳಿದರು.

ನನ್ನ ಕ್ಷೇತ್ರದಲ್ಲಿ ಬಿಜೆಪಿಯ ಜೀವರಾಜ್‌ ಹೆಸರಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ, ಗುದ್ದಲಿ ಪೂಜೆ, ಉದ್ಘಾಟನೆಗೆ ನನ್ನನ್ನು ಆಹ್ವಾನಿಸುತ್ತಿಲ್ಲ. ಇದರಿಂದ ನನ್ನ ಹಕ್ಕುಚ್ಯುತಿ ಆಗಿದೆ. ನಾನು ಶಾಸಕ ಹೌದೋ, ಅಲ್ಲವೋ ಎನ್ನುವುದು ತೀರ್ಮಾನ ಆಗಿಲ್ಲ. ನನಗಾಗಿರುವ ಅನ್ಯಾಯ ಸರಿಪಡಿಸದಿದ್ದರೆ ಸದನದಲ್ಲಿ ಉಪವಾಸ ಕುಳಿತುಕೊಳ್ಳುತ್ತೇನೆ.
– ಟಿ.ಡಿ. ರಾಜೇಗೌಡ, ಕಾಂಗ್ರೆಸ್‌ ಸದಸ್ಯ

ಗೆದ್ದ ಶಾಸಕರನ್ನು ಬಿಟ್ಟು ಸೋತ ಅಭ್ಯರ್ಥಿಗೆ ಸರಕಾರದಿಂದ ಅನುದಾನ ಬಿಡುಗಡೆ ಮಾಡುವುದು ಸರಿಯಲ್ಲ. ಗೆದ್ದ ಶಾಸಕರು ಸದನದಲ್ಲಿ ಬಜೆಟ್‌ ಅನುಮೋದಿಸುತ್ತಾರೆ. ಹೀಗಿದ್ದಾಗ, ಸೋತವರಿಗೆ ಹಣ ಬಿಡುಗಡೆ ಮಾಡುವುದು ಯಾವ ನ್ಯಾಯ? ಸರಕಾರ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಇದು ನೇರವಾಗಿ ಹಕ್ಕುಚ್ಯುತಿಗೆ ಬರದಿದ್ದರೂ, ಸರಕಾರದ ಈ ನಡೆ ಶಾಸಕರ ಹಕ್ಕುಚ್ಯುತಿಗೆ ಸರಿಸಮಾನವಾಗಿದೆ.

ನಾಳೆ ಅಧಿವೇಶನ ಮುಕ್ತಾಯ?
ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನ ನಿಗದಿತ ದಿನಕ್ಕಿಂತ ಒಂದು ದಿನ ಮೊದಲೇ ಮುಕ್ತಾಯಗೊಳ್ಳಲಿದೆಯೇ? ಇಂತಹ ಸುದ್ದಿ ಸುವರ್ಣ ವಿಧಾನಸೌಧ ಮೊಗಸಾಲೆಯಲ್ಲಿ ಕೇಳಿಬರುತ್ತಿದೆ. ಮಂಗಳವಾರ ಮಧ್ಯಾಹ್ನ ನಡೆದ ವಿಧಾನಪರಿ ಷತ್‌ ಕಲಾಪ ವ್ಯವಹಾರಗಳ ಸಲಹಾ ಸಮಿತಿ ಸಭೆಯಲ್ಲಿ ಗುರುವಾರವೇ ಕಲಾಪ ಮುಕ್ತಾಯಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.- ಸಿದ್ದರಾಮಯ್ಯ, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next