ದೇವನಹಳ್ಳಿ: ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಸುಧಾರಣೆಯಾದರೆ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗಲಿದ್ದು ಕೆಲ ಗ್ರಾಮಗಳ ರಸ್ತೆ ಅಭಿವೃದ್ಧಿಗಾಗಿ 50 ಲಕ್ಷ ರೂಗಳ ಅನುದಾನವನ್ನು ನೀಡಲಾಗುತ್ತಿದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು. ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು ತಾಲೂಕಿಗೆ ಹೆಚ್ಚಿನ ಅನುದಾನ ನೀಡಿದ್ದರು. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿ 7 ಗ್ರಾಮಗಳಿಗೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ 50 ಲಕ್ಷ ರೂ. ಅನುದಾನ ನೀಡಲಾಗಿದೆ. ಚನ್ನಹಳ್ಳಿ, ಹರಳೂರು, ಬೂದಿಹಾಳ, ಬಾಲೇಪುರ, ಎಸ್.ತೆಲ್ಲೋಹಳ್ಳಿ, ಅಗಲಕೋಟೆ ಮತ್ತು ಟಿ.ಅಗ್ರಹಾರ ಸೇರಿದಂತೆ ವಿವಿಧ ಗ್ರಾಮಗಳ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕಿನ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಆಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರು ಮಾಡಬೇಕು. ಕಾಮಗಾರಿ ನಡೆಯುವಾಗ ಸ್ಥಳೀಯರು ನಿಂತು ಕಾಮಗಾರಿ ಮಾಡಿಸಿಕೊಳ್ಳಬೇಕು. ಸಾಕಷ್ಟು ಅನುದಾನವನ್ನು ಸರ್ಕಾರದಿಂದ ತಂದಿರುವುದರಿಂದ ಗ್ರಾಮಗಳಲ್ಲಿ ಕಾಂಕ್ರೀಟ್ ಮತ್ತು ಡಾಂಬರೀಕರಣವಾಗುತ್ತಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಂಪರ್ಕಿಸಿ ಪರಿಹಾರ ಮಾಡಿಕೊಳ್ಳಬಹುದು ಎಂದು ಹೇಳಿದರು.
ಚನ್ನಹಳ್ಳಿ ಗ್ರಾಪಂ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಗ್ರಾಮಗಳಲ್ಲಿ ಹೆಚ್ಚಿನ ಮೂಲಭೂತ ಸೌಲಭ್ಯಗಳು ದೊರೆಯಬೇಕು. ಗ್ರಾಮಗಳು ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿ ಹೊಂದಲಿದೆ ಎಂದರು. ಈ ವೇಳೆ ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಚನ್ನರಾಯ ಪಟ್ಟಣ ಹೋಬಳಿ ಅಧ್ಯಕ್ಷ ಮುನಿರಾಜು, ತಾಲೂಕು ಎಸ್‌ಸಿ ಘಟಕದ ಉಪಾಧ್ಯಕ್ಷ ಶಿವಾನಂದ್, ತಾಲೂಕು ಸೊಸೈಟಿ ನಿರ್ದೇಶಕ ಎಸ್.ಗುರಪ್ಪ, ಗ್ರಾಪಂ ಮಾಜಿ ಅಧ್ಯಕ್ಷೆ ರತ್ನಮ್ಮ, ಮುಖಂಡರಾದ ಅಂಬರೀಶ್, ನರಸಿಂಹಮೂರ್ತಿ, ಶ್ರೀಧರ್, ನಂಜುಂಡಪ್ಪ, ವೆಂಕಟೇಶ್, ಗುತ್ತಿಗೆದಾರ ನಂದೀಶ್ ಇದ್ದರು.