Advertisement

ನೀವು ಭ್ರಷ್ಟಾಚಾರದ ಪರವೋ, ವಿರುದ್ಧವೋ?

02:47 PM Oct 12, 2021 | Team Udayavani |

ಮೈಸೂರು: ಐಟಿ ದಾಳಿಯನ್ನು ಯಡಿಯೂರಪ್ಪ ಅವರೇ ಸ್ವಾಗತಿಸಿದ್ದಾರೆ. ಇದರಲ್ಲಿ ನಿಮ್ಮಿಬ್ಬರ ಕೊಸರೇನು? ಯಾರನ್ನು ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದೀರಾ? ವೀರಶೈವ ಸಮುದಾಯ ಪ್ರಜ್ಞಾವಂತ ಸಮಾಜ. ಅವರನ್ನು ದಡ್ಡರು ಅಂದುಕೊಂಡರೆ ನಿಮ್ಮಂತಹ ದಡ್ಡರು ಯಾರೂ ಇಲ್ಲ ಎಂದು ಎಚ್‌.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಎಂಎಲ್ಸಿ ಎಚ್‌. ವಿಶ್ವನಾಥ್‌ ವಾಗ್ಧಾಳಿ ನಡೆಸಿದರು.

Advertisement

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಟಿ ದಾಳಿ ಸಂಬಂಧ ಪ್ರತಿಪಕ್ಷಗಳಿಂದ ರಾಜಕೀಯ ವಾಸನೆ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಅವರು, ಈ ಐಟಿ ದಾಳಿಯನ್ನು ಯಡಿಯೂರಪ್ಪ ಅವರೇ ಸ್ವಾಗತಿಸಿದ್ದಾರೆ. ನಿಮ್ಮಿಬ್ಬರ ಕೊಸರು ಏನು? ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ. ಅಂದ ಮೇಲೆ ರಾಜಕೀಯ ವಾಸನೆ ಏನು? ಜನ ನಗದೇ ಏನು ಮಾಡುತ್ತಾರೆ. ಇಂತಹ ಬೂಟಾಟಿಕೆಯ ಹೇಳಿಕೆ ಬಗ್ಗೆ ಜನ ನಗುತ್ತಾರೆ. ಹೇಳಿಕೆ ಕೊಡುವಾಗ ಎಚ್ಚರ ವಹಿಸಿ. ಐಟಿ, ಇಡಿ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಹೇಳಿದರು.

ಇದನ್ನೂ ಓದಿ:- ಕಿಷ್ಕಿಂದಾ ಅಂಜನಾದ್ರಿಗೆ ಫ್ರಾನ್ಸ್‌ ರಾಯಭಾರಿ ಭೇಟಿ

ಹುಸಿ ಪ್ರೇಮ: ಬೃಹತ್‌ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಐಟಿ, ಇ.ಡಿ ದಾಳಿ ನಡೆಯುತ್ತಿದೆ. ಇದು ಜನರಲ್ಲಿ ಭ್ರಷ್ಟಾಚಾರದ ಅನುಮಾನ ಮೂಡಿಸುತ್ತಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ರಾಜಕೀಯದ ವಾಸನೆ ಬರುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಅಧಿಕಾರ ದಲ್ಲಿದ್ದಾಗ ಅಪ್ಪ-ಮಗನ ಬಗ್ಗೆ ಏನೆಲ್ಲ ಮಾತನಾಡಿದ್ದೀರಿ ನೆನಪು ಮಾಡಿಕೊಳ್ಳಿ. ಯಡಿಯೂರಪ್ಪ ಅವರನ್ನು ವಾಚಾಮಗೋಚರವಾಗಿ ತೆಗಳಿದವರು ಈಗ ಹುಸಿ ಪ್ರೇಮ ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇಂತಹ ಹೇಳಿಕೆಯಿಂದ ಯಾರಿಗೂ ಲಾಭವಿಲ್ಲ. ಕಾಂಗ್ರೆಸ್‌, ಜೆಡಿಎಸ್‌ಗೆ ಲಾಭವೂ ಇಲ್ಲ. ಬಿಜೆಪಿಗೆ ನಷ್ಟವೂ ಇಲ್ಲ. ಇಂತಹ ಬೂಟಾಟಿಕೆ ಮಾತ ನಾಡುವುದು ಶೋಭಾಯಮಾನ ಅಲ್ಲ. ಸಿಬಿಐ, ಸಿಐಡಿ, ಐಟಿ, ಇ.ಡಿ ಮುಂತಾದವು ಸಾಂವಿಧಾನಿಕ ಸಂಸ್ಥೆಗಳು. ಭ್ರಷ್ಟಾಚಾರದ ಮೇಲೆ ದಾಳಿ ಮಾಡುವಾಗ ನಿಮ್ಮದೇನು ತಕರಾರು? ನೀವು ಭ್ರಷ್ಟಾಚಾರದ ಪರವೋ, ವಿರುದ್ಧವೋ ಎಂದು ಪ್ರಶ್ನಿಸಿದರು.

Advertisement

ಲೋಕಾಯುಕ್ತ, ಯಶಸ್ವಿನಿ ಮರು ಜಾರಿಗೊಳಿಸಿ: ಇಂದು ಯಾರಿಗೂ ಭಯವಿಲ್ಲ. ಹೀಗಾಗಿ, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೆ ಲೋಕಾಯುಕ್ತ ಆರಂಭಿಸಿ ಎಲ್ಲರಿಗೂ ಭಯ ಮುಟ್ಟಿಸಬೇಕು ಎಂದು ತಿಳಿಸಿದರು. ಜೈಲಿನಲ್ಲಿದ್ದ ವ್ಯಕ್ತಿ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಲಕ್ಷ್ಮಣರಾವ್‌ ಪೇಶ್ವೆ ಅಂಥ ಒಬ್ಬ ಇದ್ದಾನೆ. ಈತ ಕಾವೇರಿ ನೀರಾವರಿ ನಿಗಮದ ಎಂಜಿನಿಯರಿಂಗ್‌ ಚೀಫ್. ಇದೇ ಪೇಶ್ವೆ 8 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದಾನೆ. ಈತ ಈಗಲೂ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾನೆ. ಅನಿಲ್‌ ಕುಮಾರ್‌ ಮಳಲಿ ಎಂಬ ನೀರಾವರಿ ಮಂತ್ರಿಗಳ ಸಲಹೆಗಾರ ಇದ್ದಾನೆ. ಎಂಡಿ ಹಂತದ ಹಲವು ಅಧಿಕಾರಗಳ ವಿರುದ್ಧ ಕೋಟ್ಯಂತರ ರೂ ಅಕ್ರಮದ ಆರೋಪಗಳಿವೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಡಿ.ಕೆ. ಕುನ್ನೇಗೌಡ ಉಪಸ್ಥಿತರಿದ್ದರು.

ಅರಣ್ಯವನ್ನೇ ನುಂಗಿದ ಭ್ರಷ್ಟ ರಮೇಶ್‌ಕುಮಾರ್‌- ವಿಶ್ವನಾಥ್‌ ಹೇಳಿಕೆ

ನನ್ನಂಥ ಪ್ರಾಮಾಣಿಕ ಇನ್ನೊಬ್ಬ ಇಲ್ಲ ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳುತ್ತಾರೆ. ಆದರೆ, ರಮೇಶ್‌ಕುಮಾರ್‌ನಂತಹ ಭ್ರಷ್ಟ ಇನ್ನೊಬ್ಬ ಇಲ್ಲ. ಅರಣ್ಯ ಭೂಮಿಯನ್ನೇ ನುಂಗಿದ ಭ್ರಷ್ಟ. ಇಂಥ ರಮೇಶ್‌ ಕುಮಾರ್‌ ಯಶಸ್ವಿನಿ ಯೋಜನೆ ಮುಚ್ಚಿ ರೈತರಿಗೆ ಅನ್ಯಾಯ ಮಾಡಿ ದರು. ಹೀಗಾಗಿ, ಲೋಕಾಯುಕ್ತ, ಯಶಸ್ವಿನಿ ಯೋಜನೆಯನ್ನು ಮುಖ್ಯಮಂತ್ರಿಯವರು ಮರು ಜಾರಿಗೊಳಿಸಬೇಕು ಎಂದು ವಿಶ್ವನಾಥ್‌ ಆಗ್ರಹಿಸಿದರು. ಸಿದ್ದು ಮುಖ್ಯಮಂತ್ರಿ ಆಗಿದ್ದಾಗ 326 ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು ಎಂದರು.

ವಿಶ್ವನಾಥ್‌ಗೆ ತಲೆಕೆಟ್ಟಿದೆ, ಹುಚ್ಚ: ರಮೇಶ್‌ಕುಮಾರ್‌

ಕೋಲಾರ: ತಮ್ಮ ವಿರುದ್ಧ ಅರಣ್ಯ ಭೂಮಿ ಕಬಳಿಕೆ ಆರೋಪ ಮಾಡಿರುವ ಮಾಜಿ ಸಚಿವ, ಎಂಎಲ್ಸಿ ಎಚ್‌.ವಿಶ್ವನಾಥ್‌ ತಲೆ ಕೆಟ್ಟಿದೆ ಆತ, ಹುಚ್ಚ ಎಂದು ಕೋಲಾರದಲ್ಲಿ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಕೆಂಡಾಮಂಡಲವಾದರು. ಮೈಸೂರಿನಲ್ಲಿ ಎಚ್‌.ವಿಶ್ವನಾಥ್‌ ತಮ್ಮ ವಿರುದ್ಧ ಮಾಡಿರುವ ಅರಣ್ಯ ಭೂಮಿ ಕಬಳಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಎಂಎಲ್‌ಸಿ ಎಚ್‌.ವಿಶ್ವನಾಥ್‌ ವಿರುದ್ಧ ಹರಿಹಾಯ್ದರು. ಅರಣ್ಯ ಭೂಮಿ ಒತ್ತುವರಿ ಪ್ರಕರಣ ಹೈಕೋರ್ಟ್ ವರೆಗೂ ಹೋಗಿ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೇನ್‌ ತಲೆ ಕೆಟ್ಟಿದ್ಯಾ. ಜ್ಞಾಪಕ ಶಕ್ತಿ ಇಲ್ಲದೆ ಮತ್ಸರದಿಂದ ಆತ ಸಾಯ್ತಾ ಇದ್ದರೆ ನಾನ್‌ ಏನ್‌ ಮಾಡ್ಲಿ. ಒಂದು ಪಕ್ಷದ ಅಧ್ಯಕ್ಷರಾಗಿದ್ದವರಿಗೆ ಬುದ್ಧಿ ಇಲ್ವಾ, ಕನಿಷ್ಠ ಜ್ಞಾನ ಇಲ್ಲವಾ, ಬುದ್ಧಿ ಹಾಳಾಗಿ, ಹೊಟ್ಟೆಗೆ ಎನ್‌ ತಿಂತಾ ಇದ್ದೇವೆ ಎಂದು ಗೊತ್ತಿಲ್ಲ ಅಂದ್ರೆ ಹೇಗೆ. ಕೋರ್ಟ್‌ಲ್ಲಿ ಇತ್ಯರ್ಥವಾಗಿದೆ, ಆತನಿಗೇನ್‌ ಹೇಳ್ತಾನೆ ಹುಚ್ಚ, ನಿಮಗೇನ್‌ ಬುದ್ಧಿ ಇಲ್ವಾ. ಬೇಕಾದ್ರೆ ಸುಪ್ರೀಂ ಕೋರ್ಟ್‌ಗೆ ಹೋಗಲಿ ಬಿಡಿ ಎಂದು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next