ವಿಜಯಪುರ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ವಿಭಾಗ ಮಟ್ಟದ ಶಾಸಕರ ಸಭೆ ಕರೆಯುವ ಬದಲು 117 ಶಾಸಕರ ಶಾಸಕಾಂಗ ಸಭೆ ಕರೆಯಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.
ಗುರುವಾರ ನಗರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಗೃಹ ಕಛೇರಿಯಲ್ಲಿ ಪಕ್ಷದ ಶಾಸಕರಿಗೆ ಪ್ರವೇಶವಿಲ್ಲ. ನಾವು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಹೋದಾಗಲೆಲ್ಲ ಅವರ ಸಿಬ್ಬಂದಿ ಸಾಹೇಬರು ವಿಶ್ರಾಂತಿಯಲ್ಲಿದ್ದಾರೆ ಎನ್ನುತ್ತಾರೆ. ಹೀಗಾಗಿ ಕಳೆದ ಆರು ತಿಂಗಳಿಂದ ಅವರ ಗೃಹ ಕಛೇರಿಯತ್ತ ಹೆಜ್ಜೆ ಹಾಕಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಪಕ್ಷದ ವಿಭಾಗೀಯ ಶಾಸಕರ ಸಭೆಯಲ್ಲಿ ಆರೇಳು ಶಾಸಕರಿರುವ ಕಾರಣ ಶಾಸಕರು ಮಾತನಾಡಲು ಹೆದರುತ್ತಾರೆ. ಪಕ್ಷದ ಪೂರ್ಣ ಪ್ರಮಾಣದ ಶಾಸಕರು ಪಾಲ್ಗೊಳ್ಳುವ ಶಾಸಕಾಂಗ ಸಭೆ ಕರೆದಲ್ಲಿ ಶಾಸಕರು ಮುಕ್ತವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡೆಸಲು ಸಾಧ್ಯವಾಗುತ್ತದೆ. ಎಲ್ಲ ಶಾಸಕರು ಧೈರ್ಯದಿಂದ ಮಾತನಾಡಲು ಸಾಧ್ಯ ಎಂದರು.
ಇದನ್ನೂ ಓದಿ:ಮುಂದಿನ ಎರಡೂವರೆ ವರ್ಷ ನಾನೇ ಸಿಎಂ:’ಸಂಕ್ರಾಂತಿ ನಂತರದ ಬದಲಾವಣೆ’ ಹೇಳಿಕೆಗೆ ಬಿಎಸ್ ವೈ ಉತ್ತರ
ನಮ್ಮ ಕ್ಷೇತ್ರಕ್ಕೆ 23 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಎಂದು ಸ್ವಯಂ ಮುಖ್ಯಮಂತ್ರಿಗಳೇ ಬರೆದರೂ ಅನುದಾನ ಬರಲಿಲ್ಲ. ಅವರು ನಮಗೆ ಅನುದಾನ ನಿಲ್ಲಿಸಿದ ಕ್ಷಣದಿಂದ ನಾವು ಸಿಎಂ ಕಚೇರಿಗೆ ಹೋಗೋದನ್ನೇ ಬಿಟ್ಟಿದ್ದೀವಿ. ಆರು ತಿಂಗಳಿನಿಂದ ಸಿಎಂ ಕಚೇರಿ, ಗೃಹ ಕಚೇರಿಗೆ ಕಾಲಿಟ್ಟಿಲ್ಲ. ಹೀಗಾಗಿ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಸಭೆ ಕರೆಯುವಂತೆ ಅಗ್ರಹಿಸಿದರು.