Advertisement

ಚುನಾವಣೆ ಹೊತ್ತಲ್ಲಿ ಸಾಧಕರ ನೆನದರಾ ಶಾಸಕ ತಿಪ್ಪರಾಜ್‌?

05:27 PM Mar 05, 2018 | Team Udayavani |

ರಾಯಚೂರು: ಸಾಹಿತ್ಯ ವಿಮರ್ಶೆ, ಚಿಂತನ ಮಂಥನ, ವಿಚಾರಗೋಷ್ಠಿ, ಜ್ವಲಂತ ಸಮಸ್ಯೆಗಳನ್ನು ಬಿಂಬಿಸಲು ಬಳಕೆಯಾಗಬೇಕಿದ್ದ ಸಾಹಿತ್ಯ ಸಮ್ಮೇಳನ ಗ್ರಾಮೀಣ ಶಾಸಕರ ಸ್ವಾರ್ಥ ಸಾಧನೆಗೆ ಬಳಕೆಯಾಯಿತೇ..? ಇಂಥದ್ದೊಂದು ಸಂದೇಹ ಮೂಡಲು ಕಾರಣವಾಗಿದ್ದು ತಾಲೂಕಿನ ಮಟಮಾರಿಯಲ್ಲಿ ನಡೆದ ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮ.

Advertisement

ಸ್ವಾಗತ ಸಮಿತಿ ಅಧ್ಯಕ್ಷರು ಆಗಿರುವ ಶಾಸಕ ತಿಪ್ಪರಾಜ್‌ ಹವಾಲ್ದಾರ್‌, ಈ ಬಾರಿ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಹೇಳಿದ್ದರು. ಆದರೆ, ನೂರಾರು ಜನರಿಗೆ ಸನ್ಮಾನಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಶಿಕ್ಷಕರು, ರೈತರು, ವೈದ್ಯರು, ಕಲಾವಿದರು, ಪತ್ರಕರ್ತರು, ಅಧಿಕಾರಿಗಳು ಹೀಗೆ ಎಲ್ಲ ಕ್ಷೇತ್ರಗಳ ನೂರಾರು ಜನರಿಗೆ
ಸನ್ಮಾನಿಸುವುದಾಗಿ ಪ್ರಕಟಿಸಲಾಗಿತ್ತು. ಅದರಂತೆ ಖುದ್ದು ಶಾಸಕರೇ ಮುಂದೆ ನಿಂತು ಸನ್ಮಾನ ಮಾಡಿದ್ದು, ಸ್ಮರಣಿಕೆಯಲ್ಲಿ ಶಾಸಕ ತಿಪ್ಪರಾಜ್‌ ಅವರ ಭಾವಚಿತ್ರ ದೊಡ್ಡದಾಗಿ ಕಾಣುತ್ತಿದೆ.

ಸಾಮಾನ್ಯವಾಗಿ ವಿವಿಧ ಕ್ಷೇತ್ರಗಳ ಆಯ್ದ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ರೂಢಿ. ಅದಕ್ಕೂ ಒಂದು ಮಿತಿ ಇರುತ್ತದೆ. ಹೀಗೆ ನೂರಾರು ಜನರಿಗೆ ಸ್ಮರಣಿಕೆ, ಶಾಲು, ಹಾರ ಹಾಕಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಅಲ್ಲದೇ, ಸಾಹಿತ್ಯ ಸಮ್ಮೇಳನಗಳು ಕೂಡ ತನ್ನದೇ ಘನತೆ ಹೊಂದಿವೆ. ಆದರೆ, ಸಾರಾಸಗಟಾಗಿ ಹೀಗೆ ಸನ್ಮಾನ ಮಾಡಿರುವುದು ಚುನಾವಣೆ ಉದ್ದೇಶದಿಂದಲೇ ಎಂಬ ಟೀಕೆಗಳು ಕೇಳಿಬಂದಿವೆ. ಒಂದು ವೇಳೆ ಹಾಗೆ ಸನ್ಮಾನ ಮಾಡುವ ಉದ್ದೇಶವಿದ್ದಲ್ಲಿ ಶಾಸಕರು ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಬೇಕಿತ್ತು. ತಾವು ಸ್ವಾಗತ ಸಮಿತಿ ಅಧ್ಯಕ್ಷರು ಎಂಬ ಕಾರಣಕ್ಕೆ ಶಾಸಕರು ಪರಿಷತ್‌ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ರೀತಿ ನಡೆದಕೊಳ್ಳುವುದು ಸರಿಯಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.

Advertisement

ಸಮ್ಮೇಳನಗಳು ತಮ್ಮದೇ ಚೌಕಟ್ಟಿನಡಿ ನಡೆದರೆ ಸೂಕ್ತ. ಹೀಗೆ ಹಳಿ ತಪ್ಪಲು ಕಸಾಪ ಸದಸ್ಯರು ಬಿಡಬಾರದು. ಜನಪ್ರತಿನಿಧಿಗಳ ನೆರವು ಪಡೆದು ಕಾರ್ಯಕ್ರಮ ಆಯೋಜನೆ ಮಾಡುವುದು ಸಾಮಾನ್ಯ. ಹಾಗಂತ ಸಂಪೂರ್ಣ ಹೊಣೆಗಾರಿಕೆ ಬಿಡುವುದು ಸರಿಯಲ್ಲ.
 ಮಹಾಂತೇಶ ಮಸ್ಕಿ, ಕಸಾಪ ನಿಕಟಪೂರ್ವ ಅಧ್ಯಕ್ಷ

ಶಾಸಕ ತಿಪ್ಪರಾಜ್‌ ಚುನಾವಣೆ ಗಿಮಿಕ್‌ ಮಾಡುತ್ತಿದ್ದಾರೆ. ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ನೂರಾರು ಜನರಿಗೆ ಸನ್ಮಾನ ಮಾಡಿದ್ದಾರೆ. ನಮ್ಮ ತಾಲೂಕಿನಲ್ಲಿ ಅಷ್ಟೊಂದು ಸಾಧಕರಿದ್ದಾರಾ. ಚುನಾವಣೆ ಬರುತ್ತಿದ್ದಂತೆ ಶಾಸಕರು ಹೊಸ ಹೊಸ ತಂತ್ರ ಹೂಡುತ್ತಿದ್ದಾರೆ.
 ನೀಲಕಂಠ ಬೇವಿನ್‌, ನಮ್ಮ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next