ಕಾರ್ಕಳ: ಎಲ್ಲವನ್ನೂ ಮಾಧ್ಯಮದ ಎದುರು ಹೇಳಲು ಸಾಧ್ಯವಿಲ್ಲ. ನಮ್ಮ ಅಭಿಪ್ರಾಯ ಆಲಿಸಲು ಪಕ್ಷದ ವರಿಷ್ಠರ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಕಾರ್ಕಳ ಶಾಸಕ, ವಿಧಾನಸಭೆ ಮುಖ್ಯ ಸಚೇತಕ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುನೀಲ್ ಕುಮಾರ್, ಕಳೆದ 3 ದಿನದಿಂದ ಮಾಧ್ಯಮದಲ್ಲಿ ಬರುತ್ತಿರುವ ಹೇಳಿಕೆಗಳು ಪಕ್ಷದ ಹಿತದೃಷ್ಟಿಯಿಂದ ಒಳಿತಲ್ಲ. ಈ ಅಭಿಪ್ರಾಯಗಳೇ ಎಲ್ಲಾ ಶಾಸಕರ, ಕಾರ್ಯಕರ್ತರ ಅಭಿಪ್ರಾಯ ಆಗುವುದಿಲ್ಲ. ನಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲವಾದ್ದರಿಂದ ಪಕ್ಷದ ವರಿಷ್ಠರು ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ:ಸಿಎಂ ಸ್ಥಾನದ ಬಗ್ಗೆ ಮಾತಾಡುವುವವರು ಅನಾಗರಿಕರು: ಸಂಸದ ಎ.ನಾರಾಯಣಸ್ವಾಮಿ
ತಮ್ಮ ಅಸಮಾಧಾನ ಮತ್ತು ಆಗ್ರಹವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಮುಖ್ಯಮಂತ್ರಿ ಬದಲಾಣೆ ಕುರಿತಂತೆ ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಹಲವಾರು ಚಟುವಟಿಕೆಗಳು ನಡೆಯುತ್ತಿದೆ. ಬಿಜೆಪಿಯ ಬಹಳಷ್ಟು ಸಚಿವರು, ನಾಯಕರು ಸಿಎಂ ಬಿಎಸ್ ವೈ ಗೆ ಬೆಂಬಲವಾಗಿ ಮಾತನಾಡುತ್ತಿದ್ದಾರೆ. ಈ ಮಧ್ಯೆ ಸುನೀಲ್ ಕುಮಾರ್ ‘ಈ ಅಭಿಪ್ರಾಯಗಳೇ ಎಲ್ಲಾ ಶಾಸಕರ, ಕಾರ್ಯಕರ್ತರ ಅಭಿಪ್ರಾಯ ಆಗುವುದಿಲ್ಲ’ ಎಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.