ಹೊನ್ನಾಳಿ: ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಯೋಜನೆಗೆ ಸರ್ಕಾರ 48 ಕೋಟಿ ರೂ. ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಈ ಯೋಜನೆಯ ಟೆಂಡರ್ ಕರೆಯಲಾಗುವುದು ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಹಿರೇಗೋಣಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ನೂತನ ಕೊಠಡಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕೆರೆಗಳಿಗೆ ನೀರು ತುಂಬಿಸುವುದು ನನ್ನ ಕನಸಿನ ಯೋಜನೆಯಾಗಿತ್ತು. ಇದೀಗ ಅದು ಸಾಕಾರಗೊಳ್ಳುವ ಹಂತ ತಲುಪಿರುವುದು ಸಂತಸದ ಸಂಗತಿ. ಕೆರೆಗಳನ್ನು ತುಂಬಿಸುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಅದಕ್ಕಿಂತ ಸಂತೋಷದ ವಿಷಯ ಮತ್ತೂಂದಿಲ್ಲ ಎಂದು ತಿಳಿಸಿದರು. ತಾಲೂಕಿನ ಹಿರೇಗೋಣಿಗೆರೆ ಹಾಗೂ ಲಿಂಗಾಪುರ ಗ್ರಾಮಗಳಿಗೆ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಶೀಘ್ರವೇ ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಎಲ್ಲಾ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ನನ್ನ ಗುರಿಯಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ. ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಲಾಗಿದೆ. ವಸತಿ ಯೋಜನೆಯಡಿ 500 ಮನೆಗಳನ್ನು ವಿತರಿಸಲಾಗಿದೆ. ಪಶು ಆಸ್ಪತ್ರೆ ನಿರ್ಮಿಸಲಾಗಿದೆ. ಶೀಘ್ರದಲ್ಲೇ ಹೊಳೆ ಮೆಟ್ಟಿಲು ನಿರ್ಮಿಸಲಾಗುವುದು. 9 ಕೋಟಿ ರೂ. ವೆಚ್ಚದಲ್ಲಿ ಕೋಣನತಲೆ-ಹಿರೇಗೋಣಿಗೆ ರೆ-ಹೊನ್ನಾಳಿ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಸಿಆರ್‌ಪಿ ಜಿ.ಎಚ್. ಪ್ರಹ್ಲಾದ್, ಮುಖ್ಯ ಶಿಕ್ಷಕ ಶೇಖರಪ್ಪ, ದೈಹಿಕ ಶಿಕ್ಷಕ ಮಂಜಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ರಾಮರಾವ್ ಮತ್ತಿತರರು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಇ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರೇಗೋಣಿಗೆರೆ ಗ್ರಾಪಂ ಅಧ್ಯಕ್ಷೆ ಜ್ಯೋತಿ ಎಂ.ಎನ್. ಅಣ್ಣಪ್ಪ, ಉಪಾಧ್ಯಕ್ಷ ಬಸವಣ್ಣೆಪ್ಪ, ಸದಸ್ಯರಾದ ಸೋಮಪ್ಪ, ಪುಟ್ಟಮ್ಮ ನಾಗೇಂದ್ರಪ್ಪ, ಸಬೀಮ್, ಮಧು ಶಿವಾಜಿರಾವ್, ನಸ್ರಿàನ್ ಬಾನು, ಗಿರಿಜಮ್ಮ ಸಿದ್ಧಪ್ಪ, ಮಂಜಪ್ಪ, ಮುಖಂಡ ಪ್ರಭುಗೌಡ, ಗುತ್ತಿಗೆದಾರ ಎಸ್.ಕೆ. ಬಸವರಾಜಪ್ಪ, ಹಿರೇಗೋಣಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು