ಹಾಸನ: ಜಿಲ್ಲೆಯ ಜನರ ಬಹಳ ವರ್ಷಗಳ ಬೇಡಿಕೆಯ ಹಾಸನ ವಿಮಾನ ನಿಲ್ದಾಣಕ್ಕೆ ಅನುದಾನ ಘೋಷಣೆ ಸೇರಿ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಬಂಪರ್ ಕೊಡುಗೆ ನಿರೀಕ್ಷಿಸಲಾಗಿದೆ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.
ನಗರದ ಸಹ್ಯಾದ್ರಿ ಸರ್ಕಲ್ ಬಳಿ ಒಂದು ಕೋಟಿ ರೂ. ಅಂದಾಜಿನ ಯುಜಿಡಿ ಸಂಪರ್ಕದ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ಸಿಎಂ ಮಾ.8 ರಂದು ಮಂಡಿಸಲಿರುವ 2021- 22ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ ಸಿಹಿ ಸಂದೇಶ ಸಿಗಲಿದೆ. ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಘೋಷಣೆ ಆಗಲಿದೆ ಎಂದು ಹೇಳಿದರು.
ಎಲ್ಲಾ ಮಂತ್ರಿಗಳಿಗೂ ಮನವಿ: ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇದುವರೆಗೆ ಇದ್ದ ವಿಘ್ನ ನಿವಾರಣೆಯಾಗುವ ಕಾಲ ಸನ್ನಿಹಿತವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಉತ್ಸಕರಾಗಿದ್ದಾರೆ. ಬಜೆಟ್‌ನಲ್ಲಿ ಜಿಲ್ಲೆಗೆ ಯೋಜನೆಗಳ ಘೋಷಣೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಎಲ್ಲಾ ಮಂತ್ರಿಗಳು ಮನವಿ ಮಾಡಲಾಗಿದ್ದು, ಸಕಾರಾತ್ಮಕ ಸ್ಪಂದನೆಯೂ ಸಚಿವರಿಂದ ಸಿಕ್ಕದೆ ಎಂದು ಹೇಳಿದರು.
ಯುಜಿಡಿ ಸಮಸ್ಯೆಗೆ ಪರಿಹಾರ: ನಗರದ ದೇವಿಗೆರೆ ವೃತ್ತದಿಂದ ಮಲೆನಾಡು ಎಂಜಿನಿಯರಿಂಗ್ ಕಾಲೇಜುವರೆಗೂ ಸಂಪರ್ಕ ಕಲ್ಪಿಸುವ ಒಳಚರಂಡಿ ಸಂಪರ್ಕದಲ್ಲಿ ತೊಂದರೆಯಿತ್ತು. ದೇವಿಗೆರೆ ಬಳಿ ಹಲವು ಬಾರಿ ಚರಂಡಿ ಲೈನ್ ಬ್ಲಾಕ್ ಆಗುತ್ತಿತ್ತು. ಹಾಗಾಗಿ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಒಂದು ಕೋಟಿ ರೂ. ವೆಚ್ಚದಲ್ಲಿ ನಗರಸಭೆಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಒಂದು ತಿಂಗಳಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದೂ ಎಚ್ಚರಿಕೆ ನೀಡಿದರು.
ನಗರಸಭಾ ಸದಸ್ಯ ಅಕ್ಮಲ್, ಪೌರಾಯುಕ್ತ ಕೃಷ್ಣಮೂರ್ತಿ, ಎಂಜಿನಿಯರ್ ವೆಂಕಟೇಶ್ ಉಪಸ್ಥಿತರಿದ್ದರು.