ಸಿಂಧನೂರು: ತಿಂಗಳ ಹಿಂದೆ ಕೆಡಿಪಿ ಸಭೆಯಲ್ಲೇ ಸೂಚನೆ ನೀಡಿ ರೈತ ಸಂಪರ್ಕ ಕೇಂದ್ರಗಳಲ್ಲಿ ಜೋಳ ಖರೀದಿಗೆ ನೋಂದಣಿ ಮಾಡಿಕೊಳ್ಳಲು ಹೇಳಿದ್ದೆ. ಈಗ ನೋಡಿದ್ರೆ, ಬರೀ ಮಾತಲ್ಲಿ ಹೇಳ್ತೀರಿ. ಡಾಟಾ ಕೊಟ್ರೆ ತಾನೇ ಕತ್ತೆ ಯಾವುದು, ಕುದರೆ ಯಾವದಂತ ಗೊತ್ತಾಗೋದು? ಎಂದು ಶಾಸಕ ವೆಂಕಟರಾವ್ ನಾಡಗೌಡ ಅವರು ಕೃಷಿ ಇಲಾಖೆ ಎಡಿಎಗೆ ತರಾಟೆ ತೆಗೆದುಕೊಂಡರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ತುರ್ತು ಸಭೆ ನಡೆಸಿದ ಅವರು, ಜೋಳ ಖರೀದಿ ಕೇಂದ್ರದ ಕುರಿತು ಪ್ರಗತಿ ಪರಿಶೀಲಿಸಿದರು. ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಸೇರಿದಂತೆ ತಾತ್ಕಲಿಕ ಅನುಮೋದನೆ ಕೇಸ್‌ಗಳಲ್ಲಿ ಒಪ್ಪಿಗೆ ನೀಡುವ ಕೆಲಸವಾಗಬೇಕು. 400ರಿಂದ 500ರಷ್ಟು ಪ್ರಕರಣಗಳು ಈಗ ತಾಂತ್ರಿಕ ಸಮಸ್ಯೆಗೆ ಸಿಲುಕಿದ್ದು, ಗೊತ್ತಾಗಬೇಕಿದೆ. ಇದನ್ನೆಲ್ಲ ಯಾರು ಇತ್ಯರ್ಥಪಡಿಸಬೇಕು. ಪಹಣಿ, ಬೆಳೆ ದಾಖಲಾತಿ ವಿಷಯದಲ್ಲಿ ಅಧಿ ಕಾರಿಗಳು ಮಾಡಿದ ತಪ್ಪಿಗೆ ರೈತರು ಯಾಕೆ ಶಿಕ್ಷೆ ಅನುಭವಿಸಬೇಕು ಎಂದು ಪ್ರಶ್ನಿಸಿದರು.
ಕೃಷಿ ಇಲಾಖೆ ಎಡಿಎ ಪ್ರಶಾಂತ್ ಅವರು, ಜೋಳ ಬೆಳೆದ ಪ್ರದೇಶಗಳಲ್ಲಿ ನೋಂದಣಿ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದರು. ಎಷ್ಟು ನೋಂದಣಿಯಾಗಿದೆ ಎಂಬ ಪ್ರಶ್ನೆ ಕೇಳಿದಾಗ ಉತ್ತರಿಸಲು ವಿವರ ಇರಲಿಲ್ಲ. ಇದರಿಂದ ಸಿಟ್ಟಿಗೆದ್ದ ಶಾಸಕರು, ಆಹಾರ ಇಲಾಖೆಯವರು ಈವರೆಗೂ ನೋಂದಣಿ ಮಾಡಿದ್ದಾಗಿ ವಿವರ ಕೊಡುತ್ತಿದ್ದಾರೆ. ನಿಮ್ಮ ಬಳಿ ಲೆಕ್ಕ ಇಲ್ಲ. ಹೀಗಾದರೆ ಹೇಗೆ? ಕತ್ತೆ ಯಾವುದು, ಕುದುರೆ ಯಾವುದು ಎಂಬುದು ಗೊತ್ತಾಬೇಕಲ್ಲ? ಎಂದು ತರಾಟೆಗೆ ತೆಗೆದುಕೊಂಡರು.
ಯಾವುದೇ ರೈತರನ್ನು ತಾಲೂಕು ಕೇಂದ್ರಕ್ಕೆ ಬರದಂತೆ ನೋಡಿಕೊಳ್ಳಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸಬೇಕು. ಯಾವೊಬ್ಬ ರೈತರನ್ನು ಕೂಡ ವಾಪಸ್ ಕಳಿಸಿದರೆ, ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಖರೀದಿ ಪಾಯಿಂಟ್ ಹೆಚ್ಚಳ: ತಾಲೂಕಿನಲ್ಲಿ 2,140 ರೈತರಿಂದ 1 ಲಕ್ಷ 19 ಸಾವಿರ ಕ್ವಿಂಟಲ್ ಜೋಳ ಮಾರಾಟಕ್ಕೆ ನೋಂದಣಿಯಾಗಿದೆ. ಇದುವರೆಗೆ 98 ರೈತರಿಂದ 4,601 ಕ್ವಿಂಟಲ್ ಮಾತ್ರ ಖರೀದಿಸಲಾಗಿದೆ. ಕೂಡಲೇ ಖರೀದಿಗೆ ಇನ್ನು ನಾಲ್ಕು ಹೆಚ್ಚುವರಿ ಪಾಯಿಂಟ್‌ಗಳನ್ನು ತೆಗೆದು, ತೂಕ ಮಾಡುವುದನ್ನು ತ್ವರಿತಗೊಳಿಸಬೇಕು. 15 ದಿನಗಳೊಳಗೆ ಜೋಳ ಖರೀದಿ ಮಾಡಬೇಕು. ಪ್ರತಿ ದಿನ ನನಗೆ ಮಾಹಿತಿ ಅಪ್‌ಡೇಟ್ ಮಾಡಬೇಕು ಎಂದರು.
ಇದನ್ನೂ ಓದಿ :ಹೆಚ್ಚುತ್ತಿದೆ ಹೋರಾಟ ಕಿಚ್ಚು
ಇದಕ್ಕೂ ಮೊದಲು ತಾಲೂಕಿನ ಕಲ್ಲೂರು ಬಳಿಯ ಖರೀದಿ ಕೇಂದ್ರದ ಉಗ್ರಾಣಕ್ಕೆ ಭೇಟಿ ನೀಡಿ ವಿವರ ಸಂಗ್ರಹಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಕೀಲ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ ಭೋಗಾವತಿ, ಸಹಾಯಕ ಕೃಷಿ ನಿರ್ದೇಶಕ ಪ್ರಶಾಂತ, ಆಹಾರ ನಿಗಮದ ಅಧಿ ಕಾರಿಗಳಾದ ಆನಂದ ಮೋಹನ್, ಆಹಾರ ನಿಗಮದ ಮ್ಯಾನೇಜರ್ ಪಾಷಾ, ಜೆಡಿಎಸ್ ಮುಖಂಡ ನಾಗೇಶ್ ಹಂಚಿನಾಳ, ಸರ್ವೆ ಮೇಲ್ವಿಚಾರಕ ಶಾಂತಕುಮಾರ್ ಇದ್ದರು.